ಈ ಸಾವು ನ್ಯಾಯವೇ…?ಲಾಕ್‌ಡೌನ್‌ನಿಂದ ಖಿನ್ನತೆಗೊಳಗಾದ ವ್ಯಕ್ತಿಯನ್ನು ಸೆಳೆದೊಯ್ದ ವಿಧಿ!

ಈ ಸಾವು ನ್ಯಾಯವೇ…?ಲಾಕ್‌ಡೌನ್‌ನಿಂದ ಖಿನ್ನತೆಗೊಳಗಾದ ವ್ಯಕ್ತಿಯನ್ನು ಸೆಳೆದೊಯ್ದ ವಿಧಿ!
Facebook
Twitter
LinkedIn
WhatsApp

ಬೆಳ್ತಂಗಡಿ: ಬೆಳ್ತಂಗಡಿಯ ಸುವರ್ಣ ಪ್ರಿಂಟರ್ಸ್‌ನ ಮಾಲಕ, ಸಮಾಜಮುಖೀ ಚಿಂತಕ ಗಣೇಶ್ ಸುವರ್ಣ ಜೂನ್ 14ರಂದು ಕಾಲನ ಕರೆಗೆ ಓಗೊಟ್ಟು ವಿಧಿವಶರಾಗಿದ್ದಾರೆ. ಇವರ ಅಕಾಲಿಕ ಮರಣ ಇನ್ನೂ ಜೀವಂತವಿರುವ ಸಮಾಜಕ್ಕೆ ಹತ್ತಾರು ಪ್ರಶ್ನೆಗಳನ್ನು ಸೃಷ್ಟಿಸಿ ಹೋಗಿದೆ. ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳದೇ ಹೋದಲ್ಲಿ ತದ್ರೂಪಿ ಸಮಸ್ಯೆಗೆ ಇನ್ನಷ್ಟು ಪ್ರಾಣ ಬಲಿಯಾಗಬೇಕಾದೀತು.ಮೇಲ್ನೋಟಕ್ಕೆ ಗಣೇಶ್ ಸುವರ್ಣರ ಸಾವು ಹಾರ್ಟ್ ಅ್ಯಟಾಕ್‌ನಿಂದ ಸಂಭವಿಸಿದೆ. ಆದರೆ ಗಣೇಶ್ ಸುವರ್ಣ ಸತ್ತು ಎರಡು ದಿನಗಳ ತನಕ ಆತನಿಗೆ ಚಿಕಿತ್ಸೆ ನೀಡಿದ ಮಂಗಳೂರಿನ ಪ್ರಖ್ಯಾತ ಆಸ್ಪತ್ರೆಯಾದ ಕೆಎಂಸಿಯ ವೈದ್ಯರಿಗೂ ಆತನ ಸಾವಿಗೆ ನಿಖರ ಕಾರಣದ ಖಚಿತತೆ ಇರಲಿಲ್ಲ. ಜೂನ್ 14ರ ಬೆಳಗ್ಗೆ ಮದ್ದಡ್ಕದ ತನ್ನ ಮನೆಯಿಂದ ಬೆಳ್ತಂಗಡಿಯಲ್ಲಿರುವ ತನ್ನ ಪ್ರಿಂಟಿಂಗ್ ಪ್ರಸ್‌ಗೆ ಬಂದ ಗಣೇಶ್ ಸುವರ್ಣ ಏನೋ ಆರೋಗ್ಯ ಸಮಸ್ಯೆಯಲ್ಲಿ ಇದ್ದಾರೆ ಎಂದು ಗೊತ್ತಾಗಿದ್ದೇ, ತೀರಾ ಅಪರೂಪಕ್ಕೆ ಆತನನ್ನು ಭೇಟಿಯಾದ ಆತನ ಸ್ನೇಹಿತ ಅಳದಂಗಡಿಯ ಸುಭಾಶ್ ರೈಯವರಿಂದ. ತಕ್ಷಣ ಗಣೇಶ್ ಸುವರ್ಣರನ್ನು ಗುರುವಾಯನಕೆರೆಯ ಅಭಯ ಆಸ್ಪತ್ರೆಗೆ ಕರೆದೊಯ್ದ ಸುಭಾಶ್ ರೈ ಅಲ್ಲಿನ ವೈದ್ಯರ ಸೂಚನೆಯಂತೆ ಗಣೇಶ್ ಸುವರ್ಣರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸುಸಜ್ಜಿತ ಅ್ಯಂಬುಲೆನ್ಸ್‌ನಲ್ಲಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಕರೆದೊಯ್ದರು. ಅದಾಗಲೇ ಹಾರ್ಟ್ ಅ್ಯಟಾಕ್‌ಗೆ ಒಳಗಾಗಿದ್ದ ಗಣೇಶ್ ಸುವರ್ಣ ಜೀವನ್ಮರಣ ಹೋರಾಟ ನಡೆಸುತ್ತಿದ್ದರು.ಮಧ್ಯಾಹ್ನ 12ಗಂಟೆ ಸುಮಾರಿಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಗೇಟ್ ಪ್ರವೇಶಿಸಿದ ಗಣೇಶ್ ಸುವರ್ಣರಿಗೆ ಅಲ್ಲಿನ ತಜ್ಞ ವೈದ್ಯರು ತಪಾಸಣೆ ನಡೆಸಿ, ತಕ್ಷಣ ಚಿಕಿತ್ಸೆ ಆರಂಭಿಸಿ, ಆ್ಯಂಜೊ ಬ್ಲಾಸ್ಟ್ ನಡೆಸಿ ಹೃದಯಕ್ಕೆ ಮೂರು ಸ್ಟಂಟ್ ಕೂಡಾ ಅಳವಡಿಸಿದರು ಎನ್ನಲಾಗಿದೆ. ಅಪರಾಹ್ನ 3-00ಗಂಟೆಯ ವೇಳೆಗೆ ಗಣೇಶ್ ಸುವರ್ಣ ಸಾವನ್ನಪ್ಪಿದ್ದಾರೆ ಎಂದು ಕೆಎಂಸಿಯ ವೈದ್ಯರ ತಂಡ ಪ್ರಕಟಿಸಿತಲ್ಲದೇ ಅವರಿಗೆ ಕೊರೋನಾ ಪಾಸಿಟಿವ್ ಎಂದೂ ವರದಿ ನೀಡಿತು. ಗಣೇಶ್ ಸುವರ್ಣರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಬೆಳಾಲಿನ ಅವರ ಸ್ವಂತ ಜಮೀನಿನಲ್ಲಿ ನೆರವೇರಿಸಲಾಯಿತು. ಆದರೆ ಗಣೇಶ್ ಸುವರ್ಣರ ಸಾವಿನ ಕಾರಣ ಮಾತ್ರ ನಿಗೂಢವಾಗಿಯೇ ಉಳಿಯಿತು. ಬೆಳ್ತಂಗಡಿಯ ಅಭಯ ಆಸ್ಪತ್ರೆಯ ವೈದ್ಯರ ವರದಿಯ ಪ್ರಕಾರ ಗಣೇಶ್ ಸುವರ್ಣರಿಗೆ ತೀವ್ರ ಹೃದಯಾಘಾತವಾಗಿರೋದು ದಿಟ. ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೊಳಗಾದ ಗಣೇಶ್ ಸುವರ್ಣ ಅಲ್ಲಿ ಚಿಕಿತ್ಸೆ ಪಡೆದದ್ದು ಸುಮಾರು ಎರಡು ಗಂಟೆಗಳ ಅವಧಿ. ಮಧುಮೇಹ (ಸಕ್ಕರೆ ಕಾಯಿಲೆ) ಸಮಸ್ಯೆಯನ್ನು ಹೊಂದಿದ್ದ ಗಣೇಶ್ ಸುವರ್ಣರಿಗೆ ಈ ಎರಡು ಗಂಟೆಗಳ ಅವಧಿಯಲ್ಲಿ ಆ್ಯಂಜೊ ಬ್ಲಾಸ್ಟ್ ಮಾಡಿ, ಹೃದಯಕ್ಕೆ ಮೂರು ಸ್ಟಂಟ್ ಅಳವಡಿಸಿ, ಅಪರಾಹ್ನ ಮೂರು ಗಂಟೆಗೆ ಗಣೇಶ್ ಸುವರ್ಣರ ಶವ ಅವರ ವಾರೀಸುದಾರರಿಗೆ ಹಸ್ತಾಂತರಿಸಿದ ಕೆಎಂಸಿ ಆಸ್ಪತ್ರೆಯವರು ನೀಡಿದ ಆಸ್ಪತ್ರೆಯ ಬಿಲ್ ಮಾತ್ರ ಸುಮಾರು ಎರಡೂವರೆ ಲಕ್ಷ ರೂಪಾಯಿ. ಸಕ್ಕರೆ ಕಾಯಿಲೆ ಇರುವ ಗಣೇಶ್ ಸುವರ್ಣರ ದೇಹದಲ್ಲಿ ಸಕ್ಕರೆ ಪ್ರಮಾಣ ಸಹಜ ಸ್ಥಿತಿಗೆ ಬರುವ ಮುನ್ನ ಕೆಎಂಸಿಯ ವೈದ್ಯರು ಹೃದಯಕ್ಕೆ ಸ್ಟಂಟ್ ಅಳವಡಿಸಿದ್ದು, ಆ್ಯಂಜೊ ಬ್ಲಾಸ್ಟ್ ನಡೆಸಿದ್ದು ಹ್ಯಾಗೆ ಎಂಬುದು ಇಂದು ಜನಸಾಮಾನ್ಯರಿಗೆ ಮಾತ್ರವಲ್ಲ; ವೈದ್ಯಲೋಕಕ್ಕೇ ಸವಾಲಿನ ಪ್ರಶ್ನೆಯಾಗಿದೆ. ಕೆಎಂಸಿ ಆಸ್ಪತ್ರೆಯ ವೈದ್ಯರ ಈ ಆತುರಕ್ಕೆ ಕಾರಣ ಗಣೇಶ್ ಸುವರ್ಣ ಹೊಂದಿದ ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಎಂಬುದು ಕೆಲ ಸಾಮಾನ್ಯ ಜನರ ವಾದ. ಅಂತೂ ಗಣೇಶ್ ಸುವರ್ಣ ಬಾರದ ಲೋಕಕ್ಕೆ ಪಯಣಿಸಿ ಆಗಿದೆ. ಸಾವಿನ ಪೋಸ್ಟ್‌‌ಮಾರ್ಟಂ ಮಾತ್ರ ಬಾಕಿ ಇದೆ.ಒಂದು ಮೂಲದ ಪ್ರಕಾರ ಗಣೇಶ್ ಸುವರ್ಣ ಅಚಾನಕ್ ಆಗಿ ಸಾವಿಗೀಡಾಗಲು ಲಾಕ್‌ಡೌನ್ ಕಾರಣ. ಈತ ತನ್ನ ಸಾವಿಗೆ ಮೂರ್ನಾಲ್ಕು ದಿನಗಳ ಮೊದಲು ತನ್ನ ಸ್ನೇಹಿತನಿಗೆ ಮಾಡಿದ ವಾಟ್ಸಾಪ್ ಮೆಸೇಜ್‌ನಲ್ಲಿ ‘ಸರಕಾರದ ಲಾಕ್‌ಡೌನ್ ನಿಯಮದಿಂದಾಗಿ ಪ್ರಿಂಟಿಂಗ್ ಪ್ರೆಸ್ಸನ್ನೇ ಜೀವನಾಧಾರವಾಗಿ ನಂಬಿ ಬದುಕುತ್ತಿರುವ ತನ್ನ ಜೀವನದ ದುಸ್ಥಿತಿಯ ಬಗ್ಗೆ ತಿಳಿಸಿದ್ದ. ಇದನ್ನು ನೋಡಿದಾಗ ಲಾಕ್‌ಡೌನ್‌ನಿಂದ ಗಣೇಶ್ ಸುವರ್ಣ ಮಾನಸಿಕ ಒತ್ತಡ ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂಬುವುದು ಸ್ಪಷ್ಟವಾಗುತ್ತದೆ. ಹೃದಯಾಘಾತವಾಗಲು ಇದು ಕಾರಣವೆಂದಾದರೆ ಗಣೇಶ್ ಸುವರ್ಣರ ಸಾವಿಗೆ ಲಾಕ್‌ಡೌನ್ ಕಾರಣ ಎಂದಾಯಿತು. ಇನ್ನು ಹೃದಯಾಘಾತವೇ ಸಾವಿಗೆ ಕಾರಣ ಎಂಬುವುದೂ ಖಚಿತವಾಗಿಲ್ಲ. ಯಾಕೆಂದರೆ ಗಣೇಶ್ ಸುವರ್ಣ ಮೃತರಾದ ಮೇಲೆ ಕೆಎಂಸಿ ಆಸ್ಪತ್ರೆಯವರು ನೀಡಿದ ವರದಿಯಲ್ಲಿ ಅವರಿಗೆ ಕೊರೋನಾ ಪಾಸಿಟಿನ್ ಇತ್ತು ಎಂದಿದ್ದಾರೆ‌. ಹಾಗಾದರೆ ಗಣೇಶ್ ಸುವರ್ಣರ ಸಾವಿಗೆ ಕೊರೋನಾ ಕಾರಣವೇ…? (ಮೂರು ದಿನಗಳ ನಂತರ ಅದೇ ವೈದ್ಯರು ಇದೀಗ ಗಣೇಶ್ ಸುವರ್ಣರ ಮೃತ ದೇಹಕ್ಕೆ ಕೊರೋನಾ ನೆಗೆಟಿವ್ ಸರ್ಟಿಫಿಕೆಟ್ ನೀಡಿದ್ದಾರೆ ಎನ್ನಲಾಗಿದೆ.) ಒಟ್ಟಿನಲ್ಲಿ ಗಣೇಶ್ ಸುವರ್ಣರ ಸಾವಿಗೆ ಪ್ರಮುಖ ಕಾರಣ ಲಾಕ್‌ಡೌನ್ ಎಂದೆನಿಸಿದರೂ, ಖಚಿತವಾಗಿ ಇಂತದ್ದೇ ಕಾರಣದಿಂದ ಗಣೇಶ್ ಸುವರ್ಣರ ಸಾವಾಗಿದೆ ಎನ್ನುವ ತೀರ್ಮಾನ ತಿಳಿಸಲು ವೈದ್ಯರ ಸಹಿತ ಯಾರಿಗೂ ಧೈರ್ಯವಿಲ್ಲದ ಸಂದಿಗ್ಧತೆ ಎದುರಾಗಿದೆ. ಅಂತೂ ಗಣೇಶ್ ಸುವರ್ಣರ ಸಾವಾಗಿದೆ; ಈ ಸಾವು ನ್ಯಾಯವೇ ಎಂದು ವಿಧಿಯನ್ನು ಪ್ರಶ್ನಿಸಬಹುದಷ್ಟೇ.

Latest News

Related Posts