ಧರ್ಮಸ್ಥಳ :- ತಾಲೂಕು ಆಡಳಿತ ಬೆಳ್ತಂಗಡಿ ಹಾಗೂ ಧರ್ಮಸ್ಥಳ ಗ್ರಾಮ ಕಾರ್ಯಪಡೆ ಸಮಿತಿ ಸಭೆಯು ಧರ್ಮಸ್ಥಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಪಿ. ಶ್ರೀನಿವಾಸ್ ರಾವ್‌ರ ಅಧ್ಯಕ್ಷತೆಯಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಜೂನ್ 19ರಂದು ನಡೆಯಿತು. ಬೇರೆ ಬೇರೆ ಜಿಲ್ಲೆಯಿಂದ ಆಗಮಿಸುವ ಯಾತ್ರಾರ್ಥಿಗಳು ಹಾಗೂ ಜನರನ್ನು ತಡೆಯುವ ನಿಟ್ಟಿನಲ್ಲಿ ಚಾರ್ಮಾಡಿ, ಕೊಕ್ಕಡ, ಬೆಳ್ತಂಗಡಿ, ಚೆಕ್ ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಮಹೇಶ್ ಇವರು ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು. ಲಾಕ್‌ಡೌನ್ ಮುಗಿಯುವ ತನಕ ಹರಿಕೆ ಮಂಡೆಯನ್ನು ತೆರೆಯದಂತೆ ಟೆಂಡರ್ ದಾರರಿಗೆ ತಾಲೂಕು ಆಡಳಿತದಿಂದ ತಿಳಿಸಲಾಯಿತು. ಈ ಬಗ್ಗೆ ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಸ್ಥಳೀಯ ಆಡಳಿತ ಗ್ರಾಮ ಪಂಚಾಯಿತು, ಪೊಲೀಸ್ ಇಲಾಖೆ ಒಟ್ಟು ಸೇರಿ ಒಮ್ಮತದಿಂದ ಕೆಲಸ ನಿರ್ವಹಿಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ತಾಲೂಕು ವೈದ್ಯಾಧಿಕಾರಿಗಳಾದ ಡಾl ಕಲಾಮಧು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಮೇಶ್ ಕೆ., ಧರ್ಮಸ್ಥಳ ಪೊಲೀಸ್ ಉಪ ನಿರೀಕ್ಷಕ ಚಂದ್ರಶೇಖರ್, ಗ್ರಾಮಕರಣಿಕರಾದ ಪ್ರದೀಪ್, ಗ್ರಾಮ ಪಂಚಾಯತ್ ಸದಸ್ಯರಾದ ಸುಧಾಕರ ಗೌಡ, ರವಿಕುಮಾರ್, ಹರೀಶ್ ಸುವರ್ಣ, ಹರ್ಷಿತ್ ಜೈನ್, ದಿನೇಶ್ ರಾವ್, ಗ್ರಾಮ ಕಾರ್ಯಪಡೆ ಸದಸ್ಯರು ಉಪಸ್ಥಿತರಿದ್ದರು. ಡಾ. ದೇವಿಪ್ರಸಾದ್ ಬೊಲ್ಮ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.






