ಬೆಳ್ತಂಗಡಿ: ವ್ಯಕ್ತಿಯ ಯಶಸ್ಸು ವೃತ್ತಿಯ ನಿರಂತರತೆಯ ಮೇಲೆ ಅವಲಂಬಿತವಾಗಿರುತ್ತದೆ. ರಾಜಕೀಯದಲ್ಲಿ ನಿರಂತರ ಕೆಲಸ ಮಾಡದಿದ್ದರೆ ಮೂಲೆಗುಂಪಾಗುತ್ತೇವೆ. ಅದೇ ರೀತಿ ಯಾವುದೇ ಕಲಾವಿದರು ವೃತ್ತಿ ಬಾಂಧವರು ನಿರಂತರ ಸಾಧನೆಯಿಂದ ನೈಪುಣ್ಯತೆ, ಸ್ವಾಮಿತ್ವ ಪಡೆಯುತ್ತಾರೆ. ಕಲಾವಿದರ ವೃತ್ತಿ ಜೀವನ ಮನಸ್ಸಿಗೆ ಆನಂದ, ಜ್ಞಾನ, ಸಂಸ್ಕಾರ ನೀಡುತ್ತದೆ. ಸನಾತನ ಪರಂಪರೆಯ ಯಕ್ಷಗಾನ ಪ್ರೇಕ್ಷಕನ ಮನಸ್ಸಿನ ಮೇಲೆ ಜೀವನ ಮೌಲ್ಯದ ಪ್ರಭಾವ, ಪರಿಣಾಮ ಬೀರುತ್ತದೆ. ವಿಪರೀತ ಪರಿಸ್ಥಿತಿಯಲ್ಲಿ ಬದಲಾದ ಕಾಲ, ಬದಲಾದ ರೀತಿಯಲ್ಲಿ ಹೊಸ ಪ್ರಯೋಗದ ಮೂಲಕ ಕಲಾಸೇವೆ, ಕಲಾರಾಧನೆ ನಡೆಯುತ್ತಿರುವುದು ಶ್ಲಾಘನೀಯವೆಂದು ರೋಟರಿ ಜಿಲ್ಲಾ ಸಹಾಯಕ ಗವರ್ನರ್ ವಿಧಾನ ಪರಿಷತ್ ಸದಸ್ಯ ಪ್ರತಾಪ್ಸಿಂಹ ನಾಯಕ್ ನುಡಿದರು. ಅವರು ಜೂನ್ 20ರಂದು ಉಜಿರೆಯ ಕುರಿಯ ವಿಠಲ ಶಾಸ್ತ್ರೀ ಸಾಂಸ್ಕೃತಿಕ ಪ್ರತಿಷ್ಠಾನ, ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಬೆಳ್ತಂಗಡಿ, ಬೆಳ್ತಂಗಡಿ ಹಾಗು ಬಂಟ್ವಾಳ ರೋಟರಿ ಕ್ಲಬ್ ಸಹಯೋಗದೊಂದಿಗೆ ನಡೆದ 9ದಿನಗಳ ಯಕ್ಷಸಾಂಗತ್ಯ ಸಪ್ತಕ ತಾಳಮದ್ದಳೆ ‘ಯಕ್ಷಾವತರಣ -2’ ಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಪ್ರಸ್ತಾವನೆಗೈದ ರೋಟರಿ ಅಧ್ಯಕ್ಷ ಬಿ. ಕೆ. ಧನಂಜಯ ರಾವ್ ಯಾವುದೇ ಕಲೆ ಬೆಳೆಯಲು ಅದರ ನಿರಂತರತೆಯಿಂದ ಯಶಸ್ಸು ಪಡೆಯುತ್ತದೆ. ಯಕ್ಷಗಾನ ಕಲೆ ಮುಂದಿನ ಪೀಳಿಗೆಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ತಿಳಿಸಿಕೊಡುತ್ತದೆ. ಕಾರ್ಯಕ್ರಮ ಕಲಾವಿದರ ಆರ್ಥಿಕ ಭದ್ರತೆಗೂ ನೆರವಾಗಲಿದೆ ಎಂದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮ ಸಂಯೋಜಿಸಿದ ಕುರಿಯ ವಿಠ್ಠಲ ಶಾಸ್ತ್ರೀ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಬಿ. ಕೆ. ಧನಂಜಯ ರಾವ್, ಕಾರ್ಯದರ್ಶಿ ಕೆ. ವಿ. ಶ್ರೀಧರ್, ಕಾರ್ಯಕ್ರಮವನ್ನು ನೇರ ಪ್ರಸಾರದಲ್ಲಿ ಬಿತ್ತರಿಸಿದ ಯೂಪ್ಲಸ್ ವಾಹಿನಿಯ ದಿನೇಶ್ ಕೋಟಿಯಾನ್, ಆಶಾ ಸೌಂಡ್ಸ್ನ ಶೌಕತ್ ಆಲಿ, ತಾಂತ್ರಿಕ ಸಹಕಾರ ನೀಡಿದ ಸದಾನಂದ ಮತ್ತು ಕೀರ್ತಿಯವರನ್ನು ಸಂಘಟಕರ ಪರವಾಗಿ ಸಮ್ಮಾನಿಸಿ ಗೌರವಿಸಲಾಯಿತು. ಉಜಿರೆ ಅಶೋಕ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಬಿ. ಕೆ. ಧನಂಜಯ ರಾವ್ ವಂದಿಸಿದರು. ಅಂತಿಮ ದಿನದ ಕಾರ್ಯಕ್ರಮವಾಗಿ ಪುತ್ತಿಗೆ ರಘುರಾಮ ಹೊಳ್ಳರ ಹಾಡುಗಾರಿಕೆಯಲ್ಲಿ ರಂಜಿತಾ ಎಲ್ಲೂರು ಮತ್ತು ಉಡುಪಿಯ ವಿಂದ್ಯ ಆಚಾರ್ಯ ಅವರ ಯಕ್ಷ ನೃತ್ಯ ವೈಭವ ಪ್ರದರ್ಶಿಸಲ್ಪಟ್ಟು ಯೂ ಪ್ಲಸ್ ವಾಹಿನಿ ಮೂಲಕ ನೇರಪ್ರಸಾರದಲ್ಲಿ ಬಿತ್ತರಗೊಂಡಿತು.






