ಬೆಳ್ತಂಗಡಿ: ವಿದ್ಯುತ್ ದರ ಏರಿಕೆ ಖಂಡಿಸಿ ಜೂನ್ 21ರಂದು ರಾತ್ರಿ ಇಡೀ ರಾಜ್ಯಾದ್ಯಂತ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್ಐ) ಕರೆ ನೀಡಿದಂತೆ ಬೆಳ್ತಂಗಡಿ ತಾಲೂಕಿನಾದ್ಯಂತ ಚಿಮಿಣಿ, ಕ್ಯಾಂಡಲ್, ದೊಂದಿ, ಲಾಟೀನು ಪ್ರದರ್ಶನದೊಂದಿಗೆ ಪ್ರತಿಭಟನೆ ನಡೆಸಲಾಯಿತು.
ಕೋವಿಡ್ 19 ಲಾಕ್‌ಡೌನ್ ಹೆಸರಿನಲ್ಲಿ ಜನತೆಯನ್ನು ಕತ್ತಲಲ್ಲಿಟ್ಟು ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಮಾಡುವ ಮೂಲಕ ವಂಚಿಸಲಾಗಿದೆ. ಜನರಿಗೆ ಕೆಲಸವಿಲ್ಲದೆ ಒಂದೊತ್ತಿನ ಊಟಕ್ಕೆ ಪರದಾಡುವ ಸಂದರ್ಭದಲ್ಲಿ ವಿದ್ಯುತ್ ದರ ಏರಿಕೆ ಮಾಡುವ ಮೂಲಕ ಜನತೆಯನ್ನು ಅತ್ಯಂತ ಸಂಕಷ್ಟಕ್ಕೆ ದೂಡಲಾಗಿದೆ ಎಂದು ಡಿವೈಎಫ್ಐ ಮುಖಂಡ ಸುಜೀತ್ ಉಜಿರೆ ಟೀಕಿಸಿದರು.
ವಿದ್ಯುತ್ ದರ ಏರಿಕೆಯನ್ನು ಖಂಡಿಸುವುದರ ಜೊತೆಗೆ, ಲಾಕ್‌ಡೌನ್ ಅವಧಿಯ ಮೂರು ತಿಂಗಳಿನ ವಿದ್ಯುತ್ ಬಿಲ್ ಮನ್ನಾಗೊಳಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ತಾಲೂಕಿನ ಬೆಳ್ತಂಗಡಿ ನಗರ, ಲಾಯಿಲ, ಉಜಿರೆ, ಮುಂಡಾಜೆ, ನೆರಿಯ, ಕಳೆಂಜ, ನಿಡ್ಲೆ, ನಾವೂರು, ನಡ, ಸವಣಾಲು, ಮೇಲಂತಬೆಟ್ಟು, ಕುತ್ಲೂರು, ಪೆರಾಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪ್ರತಿಭಟನೆ ನಡೆಸಲಾಯಿತು.
ಡಿವೈಎಫ್ಐ ಮುಖಂಡರಾದ ಸುಜೀತ್ ಉಜಿರೆ, ಆಶಾ ಸುಜೀತ್, ಸಂಜೀವ ಅತ್ತಾಜೆ, ಮಾಲಿನಿ ಕೈಕಂಬ, ಭರತ್ ಕೈಕಂಬ, ರೋಹಿಣಿ ಪೆರಾಡಿ, ಸುಹಾಸ್ ಬೆಳ್ತಂಗಡಿ, ಸುದೀಪ್ ಬೆಳ್ತಂಗಡಿ, ಸುಕನ್ಯಾ ಬೆಳ್ತಂಗಡಿ, ನೀಲೇಶ್ ಹೆಚ್, ಬೋಜ ನಾವೂರು, ಕುಸುಮ ಮಾಚಾರ್ , ಹರಿದಾಸ್ ಬೆಳ್ತಂಗಡಿ, ಶಿವಕುಮಾರ್ ಎಸ್. ಎಂ., ಶೇಖರ್ ಲಾಯಿಲ ಮತ್ತಿತರರು ಈ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿದ್ದರು.






