413 ವಿದ್ಯಾರ್ಥಿಗಳಿಗೆ ಟ್ಯಾಬ್ ಪಿಸಿ ವಿತರಣೆ

413 ವಿದ್ಯಾರ್ಥಿಗಳಿಗೆ ಟ್ಯಾಬ್ ಪಿಸಿ ವಿತರಣೆ
Facebook
Twitter
LinkedIn
WhatsApp

ಬೆಳ್ತಂಗಡಿ: ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗೆ ಇನ್ನಷ್ಟು ಪರಿಹಾರ ನೀಡುವ ದೃಷ್ಟಿಯಿಂದ ರಾಜ್ಯ ಸರಕಾರವು ಗ್ರಾಮೀಣ ಭಾಗದಲ್ಲೂ ಸರಕಾರಿ ಶಾಲೆಗಳನ್ನು ತಾಂತ್ರಿಕ ಪ್ರಗತಿಯತ್ತ ಕೊಂಡುಯ್ಯುವ ಮಹತ್ತರ ಯೋಜನೆಯನ್ನು ರೂಪಿಸಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.ಡಿಜಿಟಲ್ ಕಲಿಕಾ ಯೋಜನೆಯಡಿ ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಮತ್ತು ಪೂಂಜಾಲಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಒಟ್ಟು 413 ವಿದ್ಯಾರ್ಥಿಗಳಿಗೆ ಜೂನ್ 23ರಂದು ಟ್ಯಾಬ್ ಪಿಸಿಗಳನ್ನು ಸಾಂಕೇತಿಕವಾಗಿ ವಿತರಿಸಿ ಮಾತನಾಡುತ್ತಿದ್ದರು. ಆರ್ಥಿಕ ಪ್ರಗತಿಗೆ ಕೋವಿಡ್ ಹೊಡೆತ ನೀಡಿರುವ ಮಧ್ಯೆ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕುಟುಂಬ ಪಾಲನೆಗೆ ಕಾಲೇಜು ತೊರೆದು ಅನಿವಾರ್ಯವಾಗಿ ಉದ್ಯೋಗಕ್ಕೆ ಒಗ್ಗಿಕೊಂಡಿದ್ದಾರೆ. ಒಮ್ಮೆ ಶೈಕ್ಷಣಿಕ ಚಟುವಟಿಕೆ ಮೊಟಕುಗೊಂಡಲ್ಲಿ ಬಳಿಕ ಅವರನ್ನು ಶಿಕ್ಷಣ ವ್ಯವಸ್ಥೆಗೆ ಕರೆ ತರುವುದು ಕಷ್ಟಸಾಧ್ಯ. ಹೀಗಾಗಿ ಶಿಕ್ಷಕರು ಅವರ ಮನವೊಲಿಸುವ ಪ್ರಯತ್ನ ಮಾಡಿ ಅವರ ಭವಿಷ್ಯವನ್ನು ಸದೃಢಗೊಳಿಸಬೇಕೆಂದರು.ಶೈಕ್ಷಣಿಕ ಗುಣಮಟ್ಟ ಚೇತರಿಕೆ ಕಾಣುವಲ್ಲಿ ಸ್ಮಾರ್ಟ್ ಕ್ಲಾಸ್ ಕೊಡುಗೆ ಅಪಾರ. ಕೋವಿಡ್ ಸಂದರ್ಭದಲ್ಲಿ ಆನ್‌ಲೈನ್ ತರಗತಿ ಮುಂದುವರಿದಿದೆ. ಈ ಮಧ್ಯೆ ರಾಜ್ಯಸರಕಾರ ಸ್ಮಾರ್ಟ್ ಚಿಂತನೆಯಡಿ ವಿದ್ಯಾರ್ಥಿಗಳ ಕೈಗೆ ತಂತ್ರಜ್ಞಾನ ಒದಗಿಸಿದೆ. ಪಡೆದಿರುವ ಟ್ಯಾಬ್ ಪಿಸಿಯನ್ನು ಸದ್ಬಳಕೆ ಮಾಡಿಕೊಂಡು, ಉತ್ತಮವಾಗಿ ವಿದ್ಯಾರ್ಜನೆಗೈಯುವಂತಾಗಲಿ ಎಂದು ಆಶಿಸಿದರು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಮೇಲಂತಬೆಟ್ಟು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಆ್ಯಂಟನಿ ಟಿ. ಪಿ. ಮಾತನಾಡಿ, ರಾಜ್ಯದಲ್ಲಿ ಸರಕಾರಿ ಕಾಲೇಜುಗಳ‌ 2,500 ಕೊಠಡಿಗಳನ್ನು ಇಂದು ಸ್ಮಾರ್ಟ್ ಆಗಿಸುವ ಯೋಜನೆಯನ್ನು ರಾಜ್ಯ ಸರಕಾರ ತಂದಿರುವುದು ಅಭಿನಂದನಾರ್ಹ. ವಿದ್ಯಾರ್ಥಿಗಳ ವ್ಯಕ್ತಿತ್ವ ಬೆಳವಣಿಗೆಗೆ ತಂತ್ರಜ್ಞಾನ ಸದ್ಬಳಕೆಯಾಗಲಿದೆ ಎಂದು ಹೇಳಿದರು.ವಿದ್ಯಾರ್ಥಿಗಳಿಗೆ ಕೋವಿಡ್ ನಿಯಮ ಪಾಲನೆಯಲ್ಲಿ ಮಾದರಿಯಾಗಬೇಕಾದ ಈ ಕಾರ್ಯಕ್ರಮದಲ್ಲಿ ಎಲ್ಲರೂ ವೈಯಕ್ತಿಕ ಅಂತರ ಮರೆತು ಭಾಗವಹಿಸಿದ್ದು, ವಿದ್ಯಾರ್ಥಿಗಳಿಗೆ ತಪ್ಪು ಸಂದೇಶ ರವಾನಿಸಿತ್ತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಉಪನ್ಯಾಸಕರಾದ ಡಾ. ಕೆ. ಸುಬ್ರಹ್ಮಣ್ಯ, ಡಾ. ಟಿ. ಕೆ. ಶರತ್ ಕುಮಾರ್, ಡಾ. ಸುದರ್ಶನ್, ಪ್ರೊ. ವಿ. ಸುರೇಶ್, ಪ್ರೊ. ಜಗದೀಶ್ ಎಸ್., ಪ್ರೊ. ಶೈಲೇಶ್ ಕುಮಾರ್ ಡಿ. ಎಚ್., ಡಾ. ಕುಶಾಲಪ್ಪ, ಪ್ರೊ. ರೋಹಿಣಿ, ಪ್ರೊ. ರಶ್ಮಿ ಎಚ್., ಪ್ರೊ. ಗಂಗಾಧರ ಮತ್ತಿತರರು ಉಪಸ್ಥಿತರಿದ್ದರು.

Latest News

Related Posts