ಬೆಳ್ತಂಗಡಿ: ಮುಂಡಾಜೆ ಗ್ರಾಮದ ಕಲ್ಲಾಜೆ, ಮುಂಡ್ರುಪಾಡಿ, ಚಾಮುಂಡಿ ನಗರ, ಧುಂಬೆಟ್ಟು, ಮಜಲು ಮತ್ತಿತರ ಪರಿಸರಗಳಲ್ಲಿ ಜೂನ್ 27ರ ಮುಂಜಾನೆ ಒಂಟಿ ಸಲಗ ಸವಾರಿ ನಡೆಸಿದೆ. ಈ ಪ್ರದೇಶದ ಗ್ರಾಮೀಣ ರಸ್ತೆಯ ಮೂಲಕ ಸುಮಾರು 2ಕಿ.ಮೀ ವ್ಯಾಪ್ತಿಯಲ್ಲಿ ಓಡಾಟ ನಡೆಸಿರುವ ಒಂಟಿ ಸಲಗ, ಮುಂಡ್ರುಪಾಡಿ ಜಯಾನಂದ ಶೆಟ್ಟಿ, ಸಂಜೀವ ಶೆಟ್ಟಿ, ಬಾಲಕೃಷ್ಣ ಗೌಡ ಮೊದಲಾದವರ ಮನೆಯ ಅಂಗಳದ ಮೂಲಕ ತೋಟಗಳ ಕಡೆಗೆ ಸಂಚರಿಸಿದೆ. ಜಯಾನಂದ ಶೆಟ್ಟಿಯವರ ಮನೆಯ ಅಂಗಳದ ಮೂಲಕ ಮುಂಜಾನೆ 4:30ರ ಸುಮಾರಿಗೆ ಒಂಟಿ ಸಲಗ ಸಂಚರಿಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಅವಿನಾಶ ಗೋಖಲೆ, ವಾಸುದೇವ ಗೋಖಲೆ, ಶಶಿಧರ ಖಾಡಿಲ್ಕರ್, ಯೋಗೀಶ್ ಗೋರೆ, ಶ್ರೀಕಾಂತ ಗೋರೆ ಮೊದಲಾದವರ ತೋಟಗಳಿಗೂ ಕಾಡಾನೆ ಲಗ್ಗೆ ಇಟ್ಟಿದ್ದು, ಹಲಸಿನ ಹಣ್ಣುಗಳನ್ನು ತಿಂದು, ಅಡಿಕೆ ಮರ, ಬಾಳೆಗಿಡಗಳನ್ನು ಮುರಿದು ಹಾಕಿದೆ. ತೋಟಗಳಲ್ಲಿ ಬಹಳವಾಗಿ ಸುತ್ತಾಡಿದರೂ ಹೆಚ್ಚಿನ ಪ್ರಮಾಣದ ಕೃಷಿ ಹಾನಿ ಉಂಟುಮಾಡಿಲ್ಲ.ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಕಾಡಾನೆ ಮನೆ ಸಮೀಪದ ಅಂಗಳದ ತನಕ ಬಂದಿರುವುದು, ರಸ್ತೆಯಲ್ಲಿ ಸುತ್ತಾಟ ನಡೆಸಿರುವುದರಿಂದ ಈ ಪ್ರದೇಶದ ಜನರ ಆತಂಕವನ್ನು ಹೆಚ್ಚಿಸಿದೆ. ಕಾಡಾನೆ ಸಮೀಪದ ತೋಟಗಳಲ್ಲಿ ಅಥವಾ ಮನೆಗಳ ಹತ್ತಿರ ಇರುವ ಕಾಡಿನಲ್ಲಿ ಬೀಡುಬಿಟ್ಟಿರುವ ಶಂಕೆ ವ್ಯಕ್ತವಾಗಿದೆ.ಮುಂಡ್ರುಪಾಡಿ ಹಾಗೂ ಆನೆ ಸುತ್ತಾಟ ನಡೆಸಿದ ಪರಿಸರದಲ್ಲಿ ಬೀದಿ ದೀಪಗಳಿದ್ದರೂ,ಅವು ಉರಿಯದೆ ಹಲವು ಕಾಲ ಸಂದಿದೆ. ಇದರಿಂದ ರಾತ್ರಿ ಸಮಯ ವನ್ಯಮೃಗಗಳ ಹಾಗೂ ಇತರ ಯಾವುದೇ ಚಟುವಟಿಕೆಗಳು, ಪರಿಸರದ ಜನರಿಗೆ ತಕ್ಷಣ ಗಮನಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಜತೆಗೆ ಮುಂಡಾಜೆ ಗ್ರಾಮದಾದ್ಯಂತ ಅಹರ್ನಿಶಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿರುವುದರಿಂದ ಗ್ರಾಮಸ್ಥರು ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ತಕ್ಷಣ ಗಮನಹರಿಸಬೇಕಾದ ಅಗತ್ಯವಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.






