ಬೆಳ್ತಂಗಡಿ: ವೈದ್ಯರ ದಿನಾಚರಣೆಯ ಜುಲೈ 1ರಂದು ಬೆಳ್ತಂಗಡಿ ಸಮುದಾಯ ಆರೋಗ್ಯ ಕೇಂದ್ರದ ಕರ್ತವ್ಯನಿರತ ವೈದ್ಯರುಗಳಿಗೆ ಹಾಗೂ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳಿಗೆ ಮಾನವ ಸ್ಪಂದನ ಕೋವಿಡ್ ಸೋಲ್ಜರ್ಸ್ ತಂಡದ ವತಿಯಿಂದ ಗೌರವಾರ್ಪಣೆ ಕಾರ್ಯಕ್ರಮವು ಬೆಳ್ತಂಗಡಿ ಸಮುದಾಯ ಆಸ್ಪತ್ರೆಯಲ್ಲಿ ನಡೆಯಿತು.ಮಾನವ ಸ್ಪಂದನ ತಂಡದ ಚೇರ್ಮೆನ್ ಪಿ. ಸಿ. ಸೆಬಾಸ್ಟಿಯನ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಕೋವಿಡ್ ಸೋಲ್ಜರ್ಸ್ ತಂಡದ ಕ್ಯಾಪ್ಟನ್ ಅಶ್ರಫ್ ಆಲಿಕುಂಞಿ ಮಾತನಾಡಿ, ವೈದ್ಯರುಗಳು ಕೋವಿಡ್ ನಿಯಂತ್ರಣದಲ್ಲಿ ಮಾಡುತ್ತಿರುವ ಸೇವೆಗೆ ಪೂರಕವಾಗಿ ನಮ್ಮ ಸಂಘ ಕೆಲಸಮಾಡುತ್ತಿದೆ. ಸರ್ವಧರ್ಮೀಯರನ್ನೂ ಒಳಗೊಂಡ ನಮ್ಮ ಸಂಘಟನೆ ವತಿಯಿಂದ ಇದುವರೆಗೆ 36 ಅಂತ್ಯಸಂಸ್ಕಾರಗಳನ್ನು ಮತ್ತು ಇತರ ಕೋವಿಡ್ ಸೇವೆಗಳನ್ನು ನೀಡುತ್ತಾ ಬರಲಾಗಿದೆ ಎಂದರು.ಗೌರವ ಸ್ವೀಕರಿಸಿದ ಸಮುದಾಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾl ವಿದ್ಯಾವತಿ ಮಾತನಾಡಿ, ಕೋವಿಡ್ ಆರಂಭ ಕಾಲಘಟ್ಟದಿಂದ ಈವರೆಗೂ ಸೈನಿಕರಂತೆ ಪ್ರಾಮಾಣಿಕವಾಗಿ ಸೇವೆ ನೀಡಿದ್ದೇವೆ. ಆದರೆ ದೇಶದ ಗಡಿ ಕಾಯುವ ಸೈನಿಕರೇ ನಮಗೆ ಸ್ಪೂರ್ತಿಯಾಗುತ್ತಾರೆ. ಮಾನವ ಸ್ಪಂದನ ತಂಡದ ಕೆಲಸಗಳು ನಮ್ಮ ಇಲಾಖೆಗೆ ಬಹಳ ಸಹಕಾರಿಯಾಗಿದೆ ಎಂದರು.ವೈದ್ಯರ ದಿನದಂದು ಎಲ್ಲಾ ವೈದ್ಯರನ್ನು ಭಾವನಾತ್ಮಕವಾಗಿ ಗೌರವಿಸಿರುವುದು ಖುಷಿಕೊಟ್ಟಿದೆ ಎಂದರು.ವೇದಿಕೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾl ಕಲಾಮಧು, ಕರ್ತವ್ಯ ವೈದ್ಯರುಗಳಾದ ಡಾl ಯೋಗೇಶ್, ಡಾl ಶಶಾಂಕ್ ಕುಂಬ್ಲೆ, ಡಾl ತಾರಾಕೇಸರಿ, ಡಾl ರಶ್ಮಿ, ಡಾl ಅಭಿರಾಮ್, ಡಾl ಆಶಲತಾ, ಡಾl ಸವೇರಾ ಪಿಂಟೋ ಮತ್ತು ಡಾl ಪ್ರಜ್ಞಾ ಶೆಟ್ಟಿ ಉಪಸ್ಥಿತರಿದ್ದರು.ಮಾನವ ಸ್ಪಂದನ ತಂಡದ ಉಮೇಶ್ ಗೌಡ ಮತ್ತು ಅಕ್ಬರ್ ಬೆಳ್ತಂಗಡಿ ಭಾಗಿಯಾಗಿದ್ದರು.ತಾಲೂಕು ಆರೋಗ್ಯಾಧಿಕಾರಿ ಕಚೇರಿ ಕಾರ್ಯಕ್ರಮ ಸಂಯೋಜಕ ಅಜಯ್ ಕಲ್ಲೆಗ ನಿರೂಪಿಸಿದರು. ಆರ್‌ಬಿಎಸ್‌ಕೆ ಸಂಯೋಜಕಿ ರಮ್ಯಾ ವಂದಿಸಿದರು.






