ಬೆಳ್ತಂಗಡಿ: ತಾಲೂಕು ಪತ್ರಿಕಾ ದಿನಾಚರಣೆ ಆಧುನಿಕ ತಂತ್ರಜ್ಞಾನದ ಮಧ್ಯೆಯೂ ಪತ್ರಿಕೆ ವಿಶ್ವಾಸಾರ್ಹಫೊಟೊ ಬೆಳ್ತಂಗಡಿ: ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪತ್ರಿಕೆ ಮಹತ್ತರ ಪಾತ್ರ ವಹಿಸಿತ್ತು. ಅದೇ ರೀತಿ ಕೊರೊನಾ ಸಂದರ್ಭದಲ್ಲಿ ಪತ್ರಿಕೆಗಳು ಸೋಂಕನ್ನು ಕ್ಷಿಪ್ರವಾಗಿ ನಿಯಂತ್ರಣಕ್ಕೆ ತರುವಲ್ಲಿ ಸರಕಾರ ಎಷ್ಟು ಕಾರಣವೋ ಅಷ್ಟೇ ಮಾಧ್ಯಮವೂ ಕಾರಣ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.ತಾಲೂಕು ಪತ್ರಕರ್ತರ ಸಂಘ ಬೆಳ್ತಂಗಡಿ ವತಿಯಿಂದ ಜುಲೈ 3ರಂದು ಬೆಳ್ತಂಗಡಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ತುರ್ತು ಪರಿಸ್ಥಿತಿ ಸಂದರ್ಭ, ಭಾರತದ ಏಕೀಕರಣ, ರಾಜ್ಯದ ಏಕೀಕರಣ ಸಂದರ್ಭಗಳಲ್ಲೂ ಪತ್ರಿಕೆ ತಮ್ಮ ಭಾವನೆಗಳನ್ನು ಜನಮಾನಸಕ್ಕೆ ತಲುಪಿಸುವ ಕಾರ್ಯ ಮಾಡಿದೆ. ಪತ್ರಿಕೆಗೆ ಸವಾಲೊಡ್ಡುವ ರೀತಿ ಸಾಮಾಜಿಕ ಜಾಲತಾಣಗಳು ಪ್ರಭಾವ ಬೀರುತ್ತಿದ್ದು, ಜಗತ್ತಿನಲ್ಲಿ ಆಧುನಿಕ ತಂತ್ರಜ್ಞಾನದಿಂದ ನಿಮಿಷ ನಿಮಿಷಕ್ಕೆ ಮಾಹಿತಿ ತಲುಪಿಸುವ ವ್ಯವಸ್ಥೆ ಆಗಿದೆ. ಈ ಬದಲಾವಣೆಯ ಕಾಲಘಟ್ಟದಲ್ಲೂ ಪತ್ರಿಕೆ ಬದ್ಧತೆಯನ್ನು ಪ್ರದರ್ಶಿಸಿ ವಿಶ್ವಾಸಾರ್ಹವಾಗಿದೆ ಎಂದು ಹೇಳಿದರು.ಮುಖ್ಯಅತಿಥಿಯಾಗಿ ಭಾಗವಹಿಸಿದ ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಮಾತನಾಡಿ, ಪತ್ರಿಕೆ ತನ್ನದೇ ಆದ ನಿರ್ದಿಷ್ಟ ಓದುಗರನ್ನು ಉಳಿಸಿಕೊಂಡಿದ್ದರಿಂದ ಪತ್ರಿಕೆ ಉಳಿದಿದೆ. ಪತ್ರಿಕೆ ಮಧ್ಯ ಸಾಮಾಜಿಕ ಜಾಲತಾಣ ಹುಟ್ಟಿಕೊಂಡಾಗಲು ಪತ್ರಿಕೆ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಗೌರವಯುತ ಸ್ಥಾನಮಾನ ಉಳಿಸಿಕೊಂಡಿದೆ ಎಂದರು.ಸುದ್ದಿಗಳ ವೈಭವೀಕರಣ, ಬಿತ್ತರಿಸಬೇಕಾದ ಸುದ್ದಿ ಮೌನವಾಗುವ ಸನ್ನಿವೇಶ ಸೃಷ್ಟಿಯಾಗಿದೆ. ಸಮಾಜಕ್ಕೆ ಪತ್ರಿಕೆ ಮೇಲೆ ನಂಬಿಕೆ ಇದೆ, ಅದಕ್ಕೆ ಧಕ್ಕೆ ಬಾರದ ರೀತಿ ಮಾಧ್ಯಮವನ್ನು ಮುನ್ನಡೆಸಬೇಕಿದೆ ಎಂದರು.ಇನ್ನೋರ್ವ ಮುಖ್ಯಅತಿಥಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ವೈಚಾರಿಕವಾಗಿ ಪ್ರಬುದ್ಧ ಲೇಖನಗಳು ಬಂದಾಗ ಮಾಧ್ಯಮದ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಸಾಧ್ಯ ಎಂದರು.ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕುಸುಮಧರ್ ಬಿ., ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಶುಭ ಹಾರೈಸಿದರು.ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಅಚುಶ್ರೀ ಬಾಂಗೇರು ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಪತ್ರಕರ್ತ ಮನೋಹರ್ ಬಳಂಜ ಮತ್ತು ಲಿಖಿತಾ ದಂಪತಿ ಅಕಾಲಿಕವಾಗಿ ಅಗಲಿದ ತಮ್ಮ ಪುತ್ರಿ ದಿತಿ ಸ್ಮರಣಾರ್ಥ ಪ್ರತೀ ವರ್ಷ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ಕೊಡಮಾಡುವ ದಿತಿ ಸಾಂತ್ವಾನ ನಿಧಿಯನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.ಪತ್ರಕರ್ತರ ಸಂಘದ ಕಾರ್ಯದರ್ಶಿ ಬಿ. ಜಾರಪ್ಪ ಪೂಜಾರಿ ಸ್ವಾಗತಿಸಿದರು. ಹೃಷಿಕೇಶ್ ಧರ್ಮಸ್ಥಳ ಕಾರ್ಯಕ್ರಮ ನಿರೂಪಿಸಿದರು. ಜತೆಕಾರ್ಯದರ್ಶಿ ಸಂಜೀವ ಎನ್. ಸಿ. ವಂದಿಸಿದರು.ಪತ್ರಿಕೆ ಅನೇಕ ಬರಹಗಾರರಿಗೆ, ಚಿಂತನೆಗೆ ವೇದಿಕೆಯಾಗಿದೆ. ಇಂದು ಲೇಖನಗಳು ಕಡಿಮೆಯಾಗಿದೆ. ಹಿಂದೆ ಬರೆಯುವವರ ಮಧ್ಯೆ ಸ್ಪರ್ಧೆ ಇತ್ತು. ಹೀಗಾಗಿ ಅವಕಾಶವಂಚಿತರಿಗೆ ಮುಂದಿನ ದಿನಗಳಲ್ಲಿ ಅವಕಾಶ ನೀಡುವತ್ತ ಪತ್ರಿಕೆ ಚಿಂತಿಸಲಿ.ಪತ್ರಕರ್ತರು ಮತ್ತು ಪತ್ರಿಕೋದ್ಯಮ ಸಂಕಷ್ಟದಲ್ಲಿದೆ. ನೌಕರರ ಕಡಿತ, ಸಂಬಳ ಕಡಿತವಾಗಿದೆ. ಪತ್ರಕರ್ತರ ಸಂಘಕ್ಕೆ ನಿವೇಶನಕೊಡಿಸುವ ನಿಟ್ಟಿನಲ್ಲಿ ನನ್ನ ಪ್ರಯತ್ನ ಇದೆ. ಖಾಸಗಿಯಾಗಿ ನಿವೇಶನ ಖರೀದಿಸುವದಾದರೆ ಆರ್ಥಿಕ ಸಹಕಾರ ಕೊಡಲೂ ಬದ್ಧ. ಸರಕಾರದ ಕಡೆಯಿಂದಲೂ ಸಹಕಾರ ನೀಡುವಲ್ಲಿ ನನ್ನ ಪ್ರಯತ್ನವಿದೆ.* ಹರೀಶ್ ಪೂಂಜ, ಶಾಸಕರು






