ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಂಘದ ವಿಶೇಷ ಸಭೆಯು ಜುಲೈ 6ರಂದು ಬೆಳ್ತಂಗಡಿಯ ಡಿಸಿಸಿ ಬ್ಯಾಂಕ್ನ ಸಭಾಂಗಣದಲ್ಲಿ ಡಿಸಿಸಿ ಬ್ಯಾಂಕಿನ ನಿರ್ದೇಶಕ ನಿರಂಜನ್ ಬಾವಂತಬೆಟ್ಟುರವರ ಅಧ್ಯಕ್ಷತೆಯಲ್ಲಿನಡೆಯಿತು.ಸಭೆಯ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ತಾಲೂಕಿನ ಹಿರಿಯ ಸಹಕಾರಿ ಎನ್. ಎಸ್. ಗೋಖಲೆ ಮತ್ತು ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಹಾಗೂ ಡಿಸಿಸಿ ಬ್ಯಾಂಕಿನ ನಿರ್ದೇಶಕ ದೇವರಾಜ್ ನಿಧನಕ್ಕೆ ಶಾಂತಿಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಅಗಲಿದ ಸಹಕಾರಿಗಳಿಗೆ ಪುಷ್ಪನಮನ ಸಲ್ಲಿಸಿದ ಬಳಿಕ ಸಭೆಯ ಅಧ್ಯಕ್ಷ ನಿರಂಜನ ಬಾವಂತಬೆಟ್ಟು ಮೃತ ಸಹಕಾರಿಗಳಿಗೆ ನುಡಿನಮನ ಸಲ್ಲಿಸಿದರು.ನಂತರ ನಡೆದ ಗುರುವಾಯನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತ್ರಾಜ್ ಜೈನ್ರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮೊದಲಿಗೆ ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತ್ಯಾಂಪಣ್ಣ ಶೆಟ್ಟಿಗಾರ್ ನಿವೃತ್ತರ ಪರಿಚಯ ಮಾಡಿದರು. ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತ್ರಾಜ್ ಜೈನ್ರನ್ನು ಸಂಘದ ವತಿಯಿಂದ ಶಾಲು ಹೊದೆಸಿ, ಹಾರ ಹಾಕಿ, ಸ್ಮರಣಿಕೆ ನೀಡಿ, ಚಿನ್ನದ ಉಂಗುರ ತೊಡಿಸಿ ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತ್ರಾಜ್ ಜೈನ್ ತನ್ನ ಸೇವಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ಪುತ್ತೂರಿನ ಪ್ರಭಾರ ಸಹಕಾರಿ ಸಂಘಗಳ ಉಪನಿಬಂಧಕರಾದ ಸುಕನ್ಯಾ, ಡಿಸಿಸಿ ಬ್ಯಾಂಕ್ ಬೆಳ್ತಂಗಡಿ ಶಾಖೆಯ ಮ್ಯಾನೇಜರ್ ಮಹೇಶ್ ಜೈನ್, ಕೃಷಿ ತರಬೇತುದಾರ ಅನಿಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ತಾಲೂಕು ಸಿಇಒ ಸಂಘದ ಕಾರ್ಯದರ್ಶಿ ನಾರಾಯಣ ಫಡ್ಕೆ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಹಾಗೂ ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ಲತೀಫ್ ಸ್ವಾಗತಿಸಿದರು. ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತಕೃಷ್ಣ ಪ್ರಾರ್ಥಿಸಿದರು. ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಕೇಶಿನಿ ವಂದಿಸಿದರು.







