ಬೆಳ್ತಂಗಡಿ: ಕೇಂದ್ರ ಮತ್ತು ರಾಜ್ಯ ಸರಕಾರದ ನೀತಿಗಳು ಜನ ವಿರೋಧಿಯಾಗಿವೆ. ತೈಲ ಹಾಗೂ ಇಂಧನಗಳ ಬೆಲೆ ಏರಿಕೆಯಿಂದ ಜನರು ಕಂಗಾಲಾಗಿದ್ದಾರೆ. ಹಿಂದೆ ಸದಾ ಪ್ರತಿಭಟನೆಗಳಲ್ಲಿ ತೊಡಗಿಕೊಂಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರತಿಭಟನೆ ಕೈಗೊಳ್ಳಬೇಡಿ ಎಂದು ಕರೆ ನೀಡಿರುವುದು ಹಾಸ್ಯಾಸ್ಪದವಾಗಿದೆ ಎಂದು ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ಹೇಳಿದರು.ಅವರು ಜುಲೈ 7ರಂದು ಉಜಿರೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡ ತೈಲ ಬೆಲೆ ಏರಿಕೆ ವಿರುದ್ಧದ ಪ್ರತಿಭಟನಾ ಯಾತ್ರೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಕೊರೊನಾ ಪೀಡಿತರು ಹಾಗೂ ಅದರಿಂದ ಸಾವನ್ನಪ್ಪಿದವರ ಮನೆ ಮನೆಗಳಿಗೆ ಬೇಟಿ ನೀಡಿ ಸಾವಿನ ಲೆಕ್ಕ ತೆಗೆಯುವಂತೆ ರಾಜ್ಯ ಕಾಂಗ್ರೆಸ್ ಆದೇಶ ನೀಡಿದ್ದು,ಇದರಂತೆ ತಾಲೂಕಿನ ಮನೆ ಮನೆಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಸದ್ಯದಲ್ಲೇ ಆರಂಭವಾಗಲಿದೆ. ಇದರಿಂದ ಕೊರೊನಾ ಪೀಡಿತರ ಹಾಗೂ ಕೊರೋನಾದಿಂದ ಸಾವಿಗೀಡಾದ ವ್ಯಕ್ತಿಗಳ ನಿಖರವಾದ ಲೆಕ್ಕ ಸಿಗಲಿದೆ ಎಂದು ಹೇಳಿದರು.ಸೈಕಲ್ ಜಾಥಾ, ಎತ್ತಿನಗಾಡಿ, ಪಾದಯಾತ್ರೆ ಜೊತೆ ಪ್ರತಿಭಟನಾ ಜಾಥಾ ಉಜಿರೆಯ ಪೆಟ್ರೋಲ್ ಬಂಕ್ ಬಳಿಯಿಂದ ಬೆಳ್ತಂಗಡಿಯ ಸಂತೆಕಟ್ಟೆ ಬಳಿಯ ಪೆಟ್ರೋಲ್ ಬಂಕ್ ತನಕ ಸುಮಾರು 7 ಕಿಲೋಮೀಟರ್ ತನಕ ಸಾಗಿ ಬಂತು.ಪಕ್ಷದ ಪ್ರಮುಖರಾದ ರಂಜನ್ ಜಿ.ಗೌಡ, ಶೈಲೇಶ್ ಕುಮಾರ್ ಕುರ್ತೋಡಿ, ಕೇಶವ ಗೌಡ ಬೆಳಾಲು, ಮನೋಹರ ಕುಮಾರ್, ಅಭಿನಂದನ್ ಹರೀಶ್, ರವಿ ನೇತ್ರಾವತಿ ನಗರ, ರಾಜಶೇಖರ ಶೆಟ್ಟಿ, ಭರತ್ ಇಂದಬೆಟ್ಟು, ಸುಬ್ರಮಣ್ಯ ಶಬರಾಯ, ನಮಿತಾ ಪೂಜಾರಿ, ದಿನೇಶ ಗೌಡ, ಬಾಲಕೃಷ್ಣ ಗೌಡ, ಶ್ರೀಧರ ಪೂಜಾರಿ, ಅಶ್ರಫ್ ನೆರಿಯ, ಎನ್. ಲಕ್ಷ್ಮಣಗೌಡ, ಡಿ.ಜಗದೀಶ್, ಸತೀಶ ಶೆಟ್ಟಿ ದೊಡ್ಡಮನೆ, ಜಯ ವಿಕ್ರಮ ಕಲ್ಲಾಪು, ನಾಮದೇವ ರಾವ್, ವಿ. ಟಿ. ಸೆಬಾಸ್ಟಿಯನ್, ಶಾಲಿನಿ, ದಯಾನಂದ, ಎನ್. ಇಸ್ಮಾಯಿಲ್ ಮಲ್ಲಿಕಟ್ಟೆ, ಮಮ್ಮಿ ಕುಂಞ, ಅಯಾಝ್ ಚಾರ್ಮಾಡಿ ಜಾಥಾದ ನೇತೃತ್ವ ವಹಿಸಿದ್ದು, ಕಾಂಗ್ರೇಸ್ ಪಕ್ಷದ ನೂರಾರು ಕಾರ್ಯಕರ್ತರು ಜಾಥಾದಲ್ಲಿ ಭಾಗವಹಿಸಿದ್ದರು.







