ಬೆಳ್ತಂಗಡಿ: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಕಾಪು ಬಳಿ ಜುಲೈ 14ರ ಸಂಜೆ ಮಳೆಯೊಂದಿಗೆ ಬೀಸಿದ ಭಾರೀ ಗಾಳಿಗೆ ಬೃಹತ್ ಗಾತ್ರದ ಮರವೊಂದು ವಿದ್ಯುತ್ ಲೈನ್ ಹಾಗೂ ರಸ್ತೆಗೆ ಉರುಳಿ ವಾಹನ ಸಂಚಾರ ಹಾಗೂ ವಿದ್ಯುತ್ ಪೂರೈಕೆಗೆ ಅಡಚಣೆ ಉಂಟಾಯಿತು.ಕಕ್ಕಿಂಜೆಯಿಂದ ಮುಂಡಾಜೆಗೆ ವಿದ್ಯುತ್ ಪೂರೈಸುವ 11ಕೆವಿ ಲೈನ್‌ನ ಎರಡು ಕಂಬಗಳು ಮುರಿದು ಬಿದ್ದಿವೆ. ಇದರಿಂದ ಮುಂಡಾಜೆ, ಸೋಮಂತಡ್ಕ, ಕಲ್ಮಂಜ, ಕಾಯರ್ತೋಡಿ, ಕೊಡಂಗೆ, ಕುಡೆಂಚಿ, ಮೂಲಾರು, ಕಡಂಬಳ್ಳಿ ಮೊದಲಾದ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.ಮರ ಹೆದ್ದಾರಿಗೆ ಉರುಳಿ ಬಿದ್ದ ಕಾರಣ ಒಂದು ಗಂಟೆಯಷ್ಟು ಕಾಲ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು.ಸ್ಥಳೀಯರು, ಮೆಸ್ಕಾಂ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.






