ಬೆಳ್ತಂಗಡಿ: ಕುವೆಟ್ಟು ಗ್ರಾಮದ ಕಿನ್ನಿಗೋಳಿಯಿಂದ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪಡಂಗಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕೆಲವೇ ದಿನಗಳಲ್ಲಿ ಸಂಪರ್ಕ ಕಡಿದುಕೊಳ್ಳಲಿದೆ. ದೇವಸ್ಥಾನದ ಸಮೀಪ ದೇರಮಾರ್ ಎಂಬಲ್ಲಿ ರಸ್ತೆ ಮಳೆಗೆ ಕುಸಿದು ಸಂಪರ್ಕ ಕಡಿತವಾಗುವ ಸನ್ನಿವೇಶ ಎದುರಾಗಿದೆ. ಮದ್ದಡ್ಕ ಸಮೀಪದ ಕಿನ್ನಿಗೋಳಿಯಿಂದ ದೇರಮಾರ್‌ವರೆಗೆ ಕುವೆಟ್ಟು ಗ್ರಾಮ ಪಂಚಾಯತ್ ಹಾಗೂ ಅಲ್ಲಿಂದ ಪಡಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರಿದ ಈ ರಸ್ತೆ ಹೊಂಡ ಗುಂಡಿಯಿಂದ ಕೂಡಿದ್ದು, ಕಲ್ಲು ಇನ್ನಿತರ ವಸ್ತುಗಳನ್ನು ಸಾಗಿಸುವ ಲಾರಿಗಳು ಈ ರಸ್ತೆಯಲ್ಲಿ ಸಾಗುತ್ತಿದ್ದು ರಸ್ತೆ ಕೆಲವು ಕಡೆ ಬಿರುಕು ಬಿಟ್ಟಿದೆ. ರಸ್ತೆಯುದ್ದಕ್ಕೂ ಚರಂಡಿಯ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲಿ ಹರಿದು ವಾಹನ ಸಂಚಾರಕ್ಕೆ ಮಾತ್ರವಲ್ಲ; ದೇವಸ್ಥಾನಕ್ಕೆ ಆಗಮಿಸುವ ಭಕ್ತಾಭಿಮಾನಿಗಳು ಮತ್ತು ಜನ ಸಾಮಾನ್ಯರೂ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆಗೆ ಡಾಮಾರಿಕರಣ ಆಗದೆ ಕೆಲವು ವರ್ಷಗಳು ಕಳೆದಿವೆ. ಚುನಾವಣೆ ಸಂದರ್ಭದಲ್ಲಿ ರಸ್ತೆ ದುರಸ್ತಿ ಮಾಡುತ್ತವೆ ಎಂಬ ಬರವಸೆ ನೀಡಿದ ರಾಜಕೀಯ ವ್ಯಕ್ತಿಗಳು ಇನ್ನಾದರೂ ಈ ಬಾಗದ ಜನರ ಕಷ್ಟಗಳನ್ನು ಅರಿತು ಇತ್ತ ಕಡೆ ಗಮನ ಹರಿಸಿ ರಸ್ತೆಯ ದುರಸ್ತಿಯ ವ್ಯವಸ್ಥೆ ಮಾಡಬೇಕೆಂದು ಜನರ ಆಗ್ರಹವಾಗಿದೆ.






