ಮಳೆ-ನೆರೆಯ ಆತಂಕ: ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ

ಮಳೆ-ನೆರೆಯ ಆತಂಕ: ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ
Facebook
Twitter
LinkedIn
WhatsApp

ಬೆಳ್ತಂಗಡಿ : ತಾಲೂಕಿನಾದ್ಯಂತ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಮುಂದಿನ ಕೆಲವು ದಿನ ನಿರಂತರವಾಗಿ ಭಾರೀ ಮಳೆ ಸುರಿಯುವ ಮುನ್ಸೂಚನೆ ಇದೆ. ಭಾರೀ ಪ್ರವಾಹೋಪಾದಿಯ ಮಳೆಯಿಂದ ತಾಲೂಕಿನ ಕೆಲವು ಕಡೆಗಳಲ್ಲಿ ಭೂಕುಸಿತ ಉಂಟಾಗುವ ಅಪಾಯ ಇದೆ. ಈ ಹಿನ್ನೆಲೆಯಲ್ಲಿ ಮಿತ್ತಬಾಗಿಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುತ್ತಮುತ್ತ ಗುಡ್ಡ ಕುಸಿತದ ಅಪಾಯ ಇರುವ ಹಿನ್ನೆಲೆಯಲ್ಲಿ, ಅದರಲ್ಲೂ ಅತ್ಯಂತ ಹೆಚ್ಚು ಅಪಾಯ ಇರುವ ಗಣೇಶ್ ನಗರದ 32 ಕುಟುಂಬಗಳಿಗೆ ತಾತ್ಕಾಲಿಕ ಕಾಳಜಿ ಕೇಂದ್ರ ತೆರೆಯಲು ಪುತ್ತೂರು ಸಹಾಯಕ ಆಯುಕ್ತ ಯತೀಶ್ ಉಳ್ಳಾಲ್ ಆದೇಶ ನೀಡಿದ್ದಾರೆ.ಕಾಳಜಿ ಕೇಂದ್ರವನ್ನು ಮಿತ್ತಬಾಗಿಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆಯಲು ನಿರ್ಧರಿಸಲಾಗಿದ್ದು, ಈ ಬಗ್ಗೆ ಜುಲೈ 16ರಂದು ಶಾಲೆಗೆ ಪಂಚಾಯತ್ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಶಾಲೆಯಲ್ಲಿರುವ ನೀರಿನ ವ್ಯವಸ್ಥೆ, ಅಡುಗೆ ಕೋಣೆ, ಶೌಚಾಲಯ ಹಾಗೂ ಇತರ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಿತ್ತಬಾಗಿಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಲತಾ ಮಾತನಾಡಿ, ಪುತ್ತೂರು ಎ.ಸಿ.ಯವರ ಆದೇಶದಂತೆ ಕಾಳಜಿ ಕೇಂದ್ರ ತೆರೆಯಲು ಬೇಕಾಗುವ ಎಲ್ಲ ವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳ ಜೊತೆ ಭೇಟಿ ಪರಿಶೀಲನೆ ನಡೆಸಲಾಗಿದೆ. ಈ ಬಗ್ಗೆ ಪಂಚಾಯತ್ ಎಲ್ಲಾ ರೀತಿಯಲ್ಲಿ ಸನ್ನದ್ಧವಾಗಿದ್ದು ಪಂಚಾಯತ್‌ನಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.ಈ ಸಂದರ್ಭದಲ್ಲಿ ನೋಡೆಲ್ ಅಧಿಕಾರಿ ಪಶು ಸಂಗೋಪಣಾ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್, ಪಶುವೈದ್ಯ ಪರಿವೀಕ್ಷಣಾಧಿಕಾರಿ ಜಯಕೀರ್ತಿ ಜೈನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಕೀರ್ತಿ, ಮಿತ್ತಬಾಗಿಲು ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಉಸ್ಮಾನ್, ಗ್ರಾಮಕರಣೀಕ ಸತೀಶ್, ಪ್ರಶಾಂತ್, ಹಾಗೂ ಶಾಲಾ ಶಿಕ್ಷಕರು ಬಿಸಿಯೂಟ ಸಿಬ್ಬಂದಿಗಳು ಉಪಸ್ಥಿತರಿದ್ದರು.

Latest 5

Related Posts