ಅರ್ಹ ಕಾರ್ಮಿಕರಿಗೆ ಸವಲತ್ತು ವಿತರಣೆ

ಅರ್ಹ ಕಾರ್ಮಿಕರಿಗೆ ಸವಲತ್ತು ವಿತರಣೆ
Facebook
Twitter
LinkedIn
WhatsApp

ಬೆಳ್ತಂಗಡಿ: ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರ ಉತ್ತಮ ಸ್ಪಂದನೆ, ಇಲಾಖೆಯ ಅಧಿಕಾರಿಗಳ ನಿರಂತರ ಪ್ರಯತ್ನದಿಂದ ತಾಲೂಕಿನ ಕಾರ್ಮಿಕ ವರ್ಗದ ಅರ್ಹರೆಲ್ಲರಿಗೂ ಸವಲತ್ತು ಸಿಗುವಂತಾಗಿದೆ. ಭಾರತೀಯ ಮಜ್ದೂರ್ ಸಂಘ ತಾಲೂಕಿನಾದ್ಯಂತ ಉತ್ಕೃಷ್ಟ ಮಟ್ಟದಲ್ಲಿ ಅರ್ಹ ಕಾರ್ಮಿಕರನ್ನು ಗುರುತಿಸಿದ್ದು, ಅದರ ಪದಾಧಿಕಾರಿಗಳು ಅಭಿನಂದನೆಗೆ ಅರ್ಹರು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.ಅವರು  ಜುಲೈ 25ರಂದು ಉಜಿರೆಯ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆದ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾದ ಕಟ್ಟಡ ಹಾಗೂ ಇತರ ವರ್ಗದ ಕಾರ್ಮಿಕರಿಗೆ ಅಗತ್ಯ ಸಾಮಗ್ರಿಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ತಾಲೂಕಿನ ಪ್ರತಿ ಪಂಚಾಯಿತಿಗೆ ಅಧಿಕಾರಿಗಳು ಭೇಟಿ ನೀಡಿ, ಕಾರ್ಮಿಕರಿಗೆ ಸಿಗುವ ಸವಲತ್ತುಗಳ ಕುರಿತು ಮಾಹಿತಿ ನೀಡುವ ಯೋಜನೆ ರೂಪಿಸಲಾಗಿದೆ. ಫಲಾನುಭವಿಗಳೆಲ್ಲರಿಗೂ  ಕಿಟ್ ದೊರಕಬೇಕು ಎಂಬ ಉದ್ದೇಶ ಹೊಂದಿದ್ದು ನಿರಂತರ ಪ್ರಯತ್ನದಿಂದ ಇದು ಸಾಕಾರಗೊಂಡಿದೆ. ಕಿಟ್‌ಗಳ ಜೋಡಣೆ ಕಾರ್ಯಕ್ಕೆ ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡದ ಸದಸ್ಯರು ಪೂರ್ಣ ಸಹಕಾರ ನೀಡಿದ್ದಾರೆ ಎಂದರು. ಜಿಲ್ಲಾ ಕಾರ್ಮಿಕ ಅಧಿಕಾರಿ ವಿಲ್ಮಾ ತಾವ್ರೋ ಮಾತನಾಡಿ, ನೋಂದಣಿಗೊಂಡಿರುವ ಕಾರ್ಮಿಕರು ತಮ್ಮ ನೋಂದಣಿಯನ್ನು ನವೀಕರಿಸುವುದು ಅಗತ್ಯ.18 ರಿಂದ 60 ವರ್ಷದೊಳಗಿನ ಕಾರ್ಮಿಕರು ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಒಟ್ಟು ಸುಮಾರು 37 ಸಾವಿರ ಕಾರ್ಮಿಕರು ಈವರೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಹೊಸದಾಗಿ ನೋಂದಣಿ ಮಾಡಿಸಿಕೊಳ್ಳುವವರಿಗೆ ಇಲಾಖೆಯ ವತಿಯಿಂದ ಎಲ್ಲ  ಸಹಕಾರ ನೀಡಲಾಗುವುದು ಎಂದರು.ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ತಹಸೀಲ್ದಾರ್ ಜೆ. ಮಹೇಶ್, ಬೆಳ್ತಂಗಡಿ ಪಟ್ಟಣ ಪಂಚಾಯಿತ್ ಅಧ್ಯಕ್ಷೆ ರಜನಿ ಕುಡ್ವ, ಮುಖ್ಯಾಧಿಕಾರಿ ಸುಧಾಕರ್, ಬೆಳ್ತಂಗಡಿ ತಾಲೂಕು ಪಂಚಾಯಿತ್ ಕಾರ್ಯನಿಋವಹಣಾಧಿಕಾರಿ ಕುಸುಮಾಧರ, ಹಿರಿಯ ಕಾರ್ಮಿಕ ನಿರೀಕ್ಷಕ ವೀರೇಂದ್ರ ಕಂಬಾರ್, ತಾಲೂಕು ನಿರೀಕ್ಷಕ ಹರೀಶ್ ಎಸ್. ಎನ್., ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಸದಸ್ಯರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.ಬಿಎಂಎಸ್‌ನ ರಾಜ್ಯ ಕಾರ್ಯದರ್ಶಿ ಜಯರಾಜ ಸಾಲ್ಯಾನ್  ಸ್ವಾಗತಿಸಿದರು. ತಾಲೂಕು ಅಧ್ಯಕ್ಷ ಉದಯಕುಮಾರ್ ಬಿ. ಕೆ. ವಂದಿಸಿದರು. ‌ಕಲಾವಿದ ಜನಾರ್ದನ ಕಾನರ್ಪ ಕಾರ್ಯಕ್ರಮ ನಿರೂಪಿಸಿದರು.ಕಾರ್ಮಿಕ ಇಲಾಖೆಯಡಿ ನೋಂದಣಿಯಾದ ಕಾರ್ಮಿಕರಿಗೆ ಲಾಕ್‌ಡೌನ್ ನಿಂದ ಉಂಟಾದ ಸಂಕಷ್ಟಕ್ಕೆ ಕಳೆದ ವರ್ಷ 5000ರೂಪಾಯಿ ಹಾಗೂ ಈ ಬಾರಿ 3000 ರೂಪಾಯಿ ಖಾತೆಗೆ ಜಮಾ ಆಗಿರುತ್ತದೆ. ನೋಂದಣಿ ನವೀಕರಣ ಮೂರು ವರ್ಷ ಅವಧಿಗೆ ಮಾಡಿಸಿದರೆ ಉತ್ತಮ. ನೋಂದಣಿಯಾದ ಕಾರ್ಮಿಕರಿಗೆ ಹಲವು ಸೌಲಭ್ಯಗಳಿವೆ. ಹೆರಿಗೆ ವೇಳೆ ಹೆಣ್ಣುಮಗು ಜನಿಸಿದರೆ ರೂಪಾಯಿ 30000, ಗಂಡು ಮಗುವಿಗೆ ರೂಪಾಯಿ 20000 ಸಹಾಯಧನ ದೊರಕುತ್ತದೆ. ಮುಂದೆ ಮೂರು ವರ್ಷಗಳ ತನಕ ಪೌಷ್ಟಿಕಾಂಶಕ್ಕೆ ವಾರ್ಷಿಕ ರೂಪಾಯಿ 6000, ಬಳಿಕ ವಿದ್ಯಾಭ್ಯಾಸಕ್ಕೆ ಗಂಡುಮಗುವಿಗೆ ರೂಪಾಯಿ 3000, ಹೆಣ್ಣು ಮಗುವಿಗೆ ರೂಪಾಯಿ 4000; 10ನೇ ತರಗತಿಯಲ್ಲಿ ಗಂಡು ಮಗುವಿಗೆ ರೂಪಾಯಿ10,000, ಹೆಣ್ಣು ಮಗುವಿಗೆ ರೂಪಾಯಿ11,000 ಹಾಗೂ ಮುಂದಿನ ಎಲ್ಲಾ ಹಂತದ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮೊತ್ತ ಪ್ರತಿವರ್ಷ ಲಭ್ಯವಿದೆ.ಮದುವೆಗೆ ರೂಪಾಯಿ50 ಸಾವಿರ, ಹೀಗೆ ಅನೇಕ ಸಹಾಯಧನಗಳು ದೊರಕುತ್ತವೆ. ಈ ಎಲ್ಲಾ ಸಹಾಯಧನಗಳು ಎರಡು ಮಕ್ಕಳಿಗೆ ಮಾತ್ರ ಸೀಮಿತವಾಗಿರುತ್ತದೆ. ಅಲ್ಲದೆ ಇನ್ನಿತರ ಸೌಲಭ್ಯಗಳು ನೋಂದಣಿಯಾದ ಎಲ್ಲಾ ಕಾರ್ಮಿಕರಿಗೆ ಸಿಗುತ್ತವೆ. 60 ವರ್ಷ ಪೂರೈಸಿದ ಬಳಿಕ ರೂಪಾಯಿ 2000 ಮಾಸಾಶನ, ಅನಾರೋಗ್ಯ, ಅಪಘಾತ, ಮರಣ, ಸಮಯದಲ್ಲಿ ಹೆಚ್ಚಿನ ಮೊತ್ತದ ಸಹಾಯಧನ ಕುಟುಂಬಕ್ಕೆ ಸಿಗುತ್ತದೆ.ಜಿಲ್ಲೆಯಲ್ಲಿ ಇದುವರೆಗೆ 5088 ಮಂದಿ ಈ ಯೋಜನೆಗಳಿಂದ 4ಕೋಟಿ 57ಲಕ್ಷ ರೂಪಾಯಿ ಪಡೆದಿರುತ್ತಾರೆ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು.                           

Latest News

Related Posts