ಬೆಳ್ತಂಗಡಿ: ಜನಜಾಗೃತಿ ವೇದಿಕೆ ಬೆಳ್ತಂಗಡಿ ಪ್ರಾದೇಶಿಕ ವಿಭಾಗದ ವಾರ್ಷಿಕ ವರದಿ ಹಾಗೂ ಪ್ರಾಕೃತಿಕ ದುರಂತಗಳು ಮತ್ತು ನಿರ್ವಹಣೆಯ ಬಗ್ಗೆ ಮಾಹಿತಿ ಕೈಪಿಡಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಬೀಡಿನಲ್ಲಿ ಜುಲೈ 31ರಂದು ನಡೆದ ಸರಳ ಕಾರ್ಯಕ್ರಮದಲ್ಲಿ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು.ಮದ್ಯವರ್ಜನ ಶಿಬಿರಗಳ ಮೂಲಕ ವ್ಯಸನಮುಕ್ತ ಆರೋಗ್ಯಪೂರ್ಣ ಸಮಾಜ ರೂಪಿಸುವಲ್ಲಿ ಜನಜಾಗೃತಿ ವೇದಿಕೆಯ ಸೇವೆಯನ್ನು ಈ ಸಂದರ್ಭದಲ್ಲಿ ಡಾ. ಹೆಗ್ಗಡೆಯವರು ಮುಕ್ತಕಂಠದಿಂದ ಶ್ಲಾಘಿಸಿದರು. ಇದರೊಂದಿಗೆ ವಿಪತ್ತು ನಿರ್ವಹಣಾ ಸ್ವಯಂ ಸೇವಕರ ಕಾರ್ಯ ಹಾಗೂ ಪರಿಸರ ಸಂರಕ್ಷಣಾ ಕಾರ್ಯಕ್ರಮಗಳು ಕೂಡಾ ಸ್ಥಳೀಯರ ಸಹಭಾಗಿತ್ವ-ಸಹಕಾರದಲ್ಲಿ ಚೆನ್ನಾಗಿ ಮೂಡಿ ಬರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಡಾ. ಹೆಗ್ಗಡೆ, ಸಧ್ಯದ ಪರಿಸ್ಥಿತಿಯಲ್ಲಿ ಕೋವಿಡ್ ಕಾರಣಗಳಿಂದಾಗಿ ಮದ್ಯವರ್ಜನ ಶಿಬಿರಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದರೂ, ನವಜೀವನ ಸಮಿತಿಗಳನ್ನು ಬಲಪಡಿಸಬೇಕು ಎಂದು ಸಲಹೆ ನೀಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯ್ಸ್, ಇದುವರೆಗೆ ಒಟ್ಟು 1,471ಮದ್ಯವರ್ಜನ ಶಿಬಿರಗಳು ನಡೆದಿದ್ದು; 1,02,110 ಮದ್ಯವ್ಯಸನಿಗಳಿಗೆ ಸಲಹೆ ಹಾಗೂ ಚಿಕಿತ್ಸೆ ನೀಡಿ ಮದ್ಯಮುಕ್ತರನ್ನಾಗಿ ಮಾಡಲಾಗಿದೆ ಎಂದು ತಿಳಿಸಿದರು. ಪ್ರಸಕ್ತ ವರ್ಷ 150 ಮದ್ಯವರ್ಜನ ಶಿಬಿರಗಳ ಆಯೋಜನೆಗೆ ಕ್ರಿಯಾಯೋಜನೆ ರೂಪಿಸಲಾಗಿತ್ತು. ಆದರೆ ಕೋವಿಡ್ ಕಾರಣದಿಂದ 145 ಶಿಬಿರಗಳ ಆಯೋಜನೆಯನ್ನು ಕೈಬಿಡಬೇಕಾಯಿತು. 5ವಿಶೇಷ ಶಿಬಿರಗಳ ಮೂಲಕ 322ಮಂದಿ ವ್ಯಸನಿಗಳಿಗೆ ಅಗತ್ಯ ಚಿಕಿತ್ಸೆ ಮತ್ತು ಸಲಹೆ ನೀಡಲಾಗಿದೆ ಎಂದು ವಿವೇಕ್ ವಿನ್ಸೆಂಟ್ ಪಾಯ್ಸ್ ವಿವರಿಸಿದರು.ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ, ಜನಜಾಗೃತಿ ವೇದಿಕೆಯ ಆಡಳಿತ ಸಮಿತಿ ಸದಸ್ಯ ಬೆಂಗಳೂರಿನ ವಿ. ರಾಮಸ್ವಾಮಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾl ಎಲ್. ಎಚ್. ಮಂಜುನಾಥ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಎನ್. ಅನಿಲ್ ಕುಮಾರ್, ಯೋಜನಾಧಿಕಾರಿಗಳಾದ ಜೈವಂತ ಪಟಗಾರ ಹಾಗೂ ಮೋಹನ್, ಸಹಾಯಕ ಪ್ರಬಂಧಕಿ ಎನ್. ಭಾಗೀರಥಿ ಉಪಸ್ಥಿತರಿದ್ದರು.






