ಅಂತರಂಗದ ಕರೆಯಾಗಿ ಹೊಮ್ಮಿದ ದೇಶಭಕ್ತಿ

ಅಂತರಂಗದ ಕರೆಯಾಗಿ ಹೊಮ್ಮಿದ ದೇಶಭಕ್ತಿ
Facebook
Twitter
LinkedIn
WhatsApp

ಅಂತರಂಗದ ಕರೆಯಾಗಿ ಹೊಮ್ಮಿದ ದೇಶಭಕ್ತಿ————————————ಹೇಳಿ ಕೊಡುವುದರಿಂದಾಗಲಿ, ಆದೇಶಗಳಿಂದಾಗಲಿ, ಪ್ರತಿಪಾದನೆಗಳಿಂದಾಗಲಿ ಬರುವ ದೇಶಭಕ್ತಿಗೂ, ಅಂತರಂಗದಿಂದಲೆ ಹೊರ ಹೊಮ್ಮಿ ಬರುವ ದೇಶಭಕ್ತಿಗೂ ವ್ಯತ್ಯಾಸವಿದೆ ಎನ್ನುವುದಕ್ಕೆ ಸಾಕ್ಷಿ ಈ ಘಟನೆ.ಸ್ವಾತಂತ್ರ್ಯ ದಿನಾಚರಣೆಯಂದು ‘ಗಾಂಧಿ ವಿಚಾರ ವೇದಿಕೆ’ ಯ ಸುಳ್ಯ ಘಟಕದವರು ಮೊಗ್ರದ ಏರಣಗುಡ್ಡೆಯಲ್ಲಿ ಧ್ವಜಾರೋಹಣ ಮಾಡಿದ್ದರು. ಧ್ವಜಾರೋಹಣದ ಕಾರ್ಯಕ್ರಮವೆಲ್ಲ ಮುಗಿದು ಎಲ್ಲರೂ ಮಾತನಾಡುತ್ತಾ ಮನೆಯ ಕಡೆಗೆ ಹೊರಡುತ್ತಿರಬೇಕಾದರೆ ಆ ದಾರಿಯಾಗಿ ತನ್ನ ದೈನಂದಿನ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಮಹಿಳೆಯೊಬ್ಬರು ಹಾರಾಡುತ್ತಿದ್ದ ಧ್ವಜವನ್ನು ಕಾಣುತ್ತಲೇ ತನ್ನ ದಾರಿಯನ್ನು ಬದಲಿಸಿದರು. ನೇರವಾಗಿ ಧ್ವಜದ ಬಳಿಗೆ ಬಂದರು. ಚಪ್ಪಲಿ ತೆಗೆದರು. ತನ್ನ ಕೆಲಸದ ಕತ್ತಿ ಮತ್ತು ಕಿಡಿಂಜೋಲನ್ನು ಕಂಕುಳಲ್ಲಿ ಇರಿಸಿಕೊಂಡೇ ಧ್ವಜಕ್ಕೆ ಸೆಲ್ಯೂಟ್ ಕೊಟ್ಟರು. ಮಾಮೂಲಿನಂತೆ ತನ್ನ ಪಾಡಿಗೆ ಕೆಲಸಕ್ಕೆ ಹೊರಟು ಹೋದರು. ಈ ದೃಶ್ಯವನ್ನು ದೂರದಿಂದ ನೋಡುತ್ತಿದ್ದ ಸುಳ್ಯದ ಗಾಂಧಿ ವಿಚಾರ ವೇದಿಕೆಯ ಅಧ್ಯಕ್ಷ ಲಕ್ಷ್ಮೀಶ ಗಬಲಡ್ಕ ಅವರು ತಕ್ಷಣ ತೆಗೆದ ಚಿತ್ರ ಇಲ್ಲಿದೆ.ಈ ಕೂಲಿ ಕಾರ್ಮಿಕ ಮಹಿಳೆ ಬದುಕಿನ ಎಲ್ಲ ನೋವುಗಳನ್ನೂ ಅನುಭವಿಸಿಯೂ ಧೃತಿಗೆಡದೆ ಛಲ ಮತ್ತು ಆತ್ಮವಿಶ್ವಾಸದಿಂದ ಬದುಕನ್ನು ಕಟ್ಟಿಕೊಂಡ ಅದ್ಭುತ ಕೆಲಸಗಾರ್ತಿ ಪರಮೇಶ್ವರಿ ಎಂದು ನಂತರ ಗೊತ್ತಾಯಿತು. ನಂತರ 20-8-2021 ರಂದು ನಡೆದ ಗಾಂಧಿ ವಿಚಾರ ವೇದಿಕೆಯ ಸಭೆಯಲ್ಲಿ ಪರಮೇಶ್ವರಿ ಅವರನ್ನು ಸನ್ಮಾನಿಸಲಾಯಿತು. ಪ್ರಸ್ತುತ ಗಾಂಧಿ ವಿಚಾರ ವೇದಿಕೆಯ ಸದಸ್ಯೆಯಾಗಿ ಸೇರ್ಪಡೆಗೊಂಡ ಪರಮೇಶ್ವರಿ ಅವರನ್ನು ಕೂಲಿ ಕಾರ್ಮಿಕರ ವಲಯದಲ್ಲಿ ಗಾಂಧೀಜಿಯವರ ವಿಚಾರಗಳನ್ನು ಪ್ರಸರಿಸುವುದಕ್ಕಾಗಿ ಗಾಂಧಿ ವಿಚಾರ ವೇದಿಕೆ, ಸುಳ್ಯ ತಾಲೂಕು ಘಟಕದ ಉಪಾಧ್ಯಕ್ಷೆಯಾಗಿ ಆಯ್ಕೆ ಮಾಡಲಾಗಿದೆ.

Latest 5

Related Posts