ಅತ್ತ ಧರ್ಮಸ್ಥಳಕ್ಕೆ ದಿಗ್ಬಂಧನ ಇತ್ತ ದೇವರಗುಡ್ಡೆಯಲ್ಲಿ ಒಡ್ಡೋಲಗ

ಅತ್ತ ಧರ್ಮಸ್ಥಳಕ್ಕೆ ದಿಗ್ಬಂಧನ ಇತ್ತ ದೇವರಗುಡ್ಡೆಯಲ್ಲಿ ಒಡ್ಡೋಲಗ
Facebook
Twitter
LinkedIn
WhatsApp

ಕೊರೋನಾ ನಿಯಮ ಪಾಲನೆಯಲ್ಲಿ ದ್ವಿಮುಖನೀತಿ

ಬೆಳ್ತಂಗಡಿ: ಅತ್ತ ಧರ್ಮಸ್ಥಳದಲ್ಲಿ ವೀಕ್‌ಎಂಡ್ ಕರ್ಫ್ಯೂ ಹೆಸರಲ್ಲಿ ಶನಿವಾರ ಮತ್ತು ಭಾನುವಾರ ಕ್ಷೇತ್ರದ ಮುಖ್ಯದ್ವಾರದ ಬಳಿಯೇ ಪೊಲೀಸರು ಬ್ಯಾರಿಕೇಡ್ ನಿರ್ಮಿಸಿ ಪರವೂರಿನ ಭಕ್ತಾದಿಗಳನ್ನು ಮಾತ್ರವಲ್ಲ (ಭಕ್ತಾದಿಗಳು ವಿರಳಾತಿವಿರಳ), ಸ್ಥಳೀಯ ನಿವಾಸಿಗರ ಪ್ರವೇಶಕ್ಕೂ ತಡೆವೊಡ್ಡಿ ಹತ್ತಾರು ಪ್ರಶ್ನೆಗಳನ್ನು‌ ಕೇಳ್ತಾರೆ. ವೀಕ್‌ಎಂಡ್ ಕರ್ಫೂ ಸಮಯದಲ್ಲಂತೂ ಭಕ್ತರಿಗೆ ದೇವರ ದರುಶನವೂ ಮರೀಚಿಕೆಯೇ ಸರಿ. ವಾರದ ಉಳಿದ ದಿನಗಳಲ್ಲೂ ದೇವರ ದರುಶನಕ್ಕೆ ಮಾತ್ರ ಅವಕಾಶ.‌ ತೀರ್ಥ-ಪ್ರಸಾದವಿಲ್ಲ; ದೇವರ ಸೇವೆಗೆ ಅವಕಾಶವಿಲ್ಲ; ಪ್ರಸಾದ ಭೋಜನವಂತೂ ಇಲ್ಲವೇ ಇಲ್ಲ… ಇದು ಸರಕಾರದ ಕೊರೋನಾ ನಿಯಂತ್ರಣ ಮಾರ್ಗಸೂಚಿ. ಈ ಮಾರ್ಗಸೂಚಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಆದರೆ ವೀಕ್‌ಎಂಡ್ ಕರ್ಫ್ಯೂ ಸಂದರ್ಭ ಕ್ಷೇತ್ರದ ಮಹಾದ್ವಾರದ ಬಳಿ ಪೊಲೀಸರು ಬ್ಯಾರಿಕೇಡ್ ನಿರ್ಮಿಸಿ, ಕ್ಷೇತ್ರದ ಒಳಬರುವವರನ್ನು ತಪಾಸಣೆಗೊಳಪಡಿಸುವ ವ್ಯವಸ್ಥೆ ಮಾತ್ರ ನಮ್ಮನ್ನಾಳುವವರಿಗೆ ಕ್ಷೇತ್ರದ ವ್ಯವಸ್ಥೆಯ ಮೇಲೆ ವಿಶ್ವಾಸವಿಲ್ಲ ಎಂಬ ಸಂದೇಶ ರವಾನಿಸಿದೆ. ಇದು ಕ್ಷೇತ್ರದ ಕೃಪಾಶೀರ್ವಾದದಿಂದ ಅಧಿಕಾರದಲ್ಲಿರುವ ಜನಪ್ರತಿನಿಧಿಗಳು ಕ್ಷೇತ್ರಕ್ಕೆ ಕೃತಜ್ಞತೆ ಸಲ್ಲಿಸುವ ರೀತಿ ಎಂದು ಕ್ಷೇತ್ರದ ನಿವಾಸಿಗರೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಧರ್ಮಸ್ಥಳದ ಪ್ರವೇಶದ್ವಾರದಲ್ಲೇ ಪೊಲೀಸ್ ಬ್ಯಾರಿಕೇಡ್
ಧರ್ಮಸ್ಥಳದ ಪ್ರವೇಶದ್ವಾರದಲ್ಲೇ ಪೊಲೀಸ್ ಬ್ಯಾರಿಕೇಡ್
ದೇವರಗುಡ್ಡೆಯಲ್ಲಿ ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಸೇರಿದ ಜನಸ್ತೋಮ

ಇತ್ತ ಧರ್ಮಸ್ಥಳ ಗ್ರಾಮದ ಪಕ್ಕದಲ್ಲಿರುವ ಕಲ್ಮಂಜ ದೇವರಗುಡ್ಡೆ ಗುರುದೇವ ಮಠದಲ್ಲಿ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜರ ನೇತೃತ್ವದಲ್ಲಿ ನಡೆಯುತ್ತಿರುವ ಧರ್ಮಸ್ಥಳ ನಿತ್ಯಾನಂದನಗರ ಶ್ರೀ ರಾಮಕ್ಷೇತ್ರದ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮಿಯ ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಸರಕಾರ ಘೋಷಿಸಿದ ಕೋವಿಡ್ ನಿಯಂತ್ರಣ ಮಾರ್ಗಸೂಚಿಯೂ ಇಲ್ಲ; ಜಿಲ್ಲಾಡಳಿತ ಘೋಷಿಸಿದ ವೀಕ್‌ಎಂಡ್ ಕರ್ಫ್ಯೂ ಕೂಡಾ ಅನ್ಚಯಿಸುವುದಿಲ್ಲ. ಇಲ್ಲಿಗೆ ಪ್ರತಿದಿನ ನೂರಾರು ಭಕ್ತರೊಂದಿಗೆ ಸಚಿವರು, ಮಾಜಿ ಸಚಿವರು, ಶಾಸಕರು, ರಾಜಕೀಯ ನೇತಾರರು ಸರಕಾರದ ಕೋವಿಡ್ ನಿಯಂತ್ರಣ ಮಾರ್ಗಸೂಚಿಗೆ ಸವಾಲು ಹಾಕಿ ಭೇಟಿ ನೀಡುತ್ತಿದ್ದಾರೆ. ಇವರ ವಿರುದ್ಧ ಇದುವರೆಗೂ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ. ಇಲ್ಲಿ ವೀಕ್‌ಎಂಡ್ ಕರ್ಫ್ಯೂ ದಿನವಾದ ಆಗಸ್ಟ್ 22ರ ಭಾನುವಾರ ತನ್ನ ನೂರಾರು ಬೆಂಬಲಿಗರೊಂದಿಗೆ ರಾಜ್ಯ ಸರಕಾರದ ಸಚಿವ ಸುನಿಲ್ ಕುಮಾರ್ ಬರ್ತಾರೆ; ಇವರ ಸ್ವಾಗತಕ್ಕೆ ಬೆಳ್ತಂಗಡಿಯ ಶಾಸಕ ಹಾಗೂ ಚಾತುತ್ಮಾಸ್ಯ ಆಚರಣಾ ಸಮಿತಿಯ ಅಧ್ಯಕ್ಷ ಹರೀಶ್ ಪೂಂಜರ ನೂರಾರು ಬೆಂಬಲಿಗರೂ ಸೇರ್ತಾರೆ. ಯಾರಲ್ಲೂ ಸರಿಯಾಗಿ‌ ಮಾಸ್ಕ್ ಇಲ್ಲ; ವೈಯಕ್ತಿಕ ಅಂತರವಂತೂ ಇಲ್ಲವೇ ಇಲ್ಲ. ಕಾನೂನು-ನಿಯಮಬಾಹಿರವಾಗಿ ಸೇರಿದ ಸಾವಿರಾರು ಮಂದಿಯ ಒಡ್ಡೋಲಗದಲ್ಲಿ ಸಚಿವರು, ಶಾಸಕರೊಂದಿಗೆ ಕ್ಷೇತ್ರದ ಸದ್ಗುರುಶ್ರೀಗಳು ವಿರಾಜಮಾನರಾಗಿ ಧರ್ಮಭೋದನೆ! ಮಾಡ್ತಾರೆ. ಇದಕ್ಕೆ ಪೊಲೀಸರ ರಕ್ಷಣೆ ಬೇರೆ. ಅಲ್ಲಿ ಧರ್ಮಸ್ಥಳದಲ್ಲಿ ಊರ ಪ್ರವೇಶದ್ವಾರದಲ್ಲಿ ಜನರು ಒಳಬರದಂತೆ ತಡೆಯಲು ಪೊಲೀಸ್ ಕಾವಲು, ಕ್ಷೇತ್ರದ ಶ್ರೀ ಮಂಜುನಾಥ ಸ್ವಾಮಿಗೇ ದಿಗ್ಬಂಧನ ಹಾಕುವ ಯತ್ನ; ಇಲ್ಲಿ ಅದೇ ಧರ್ಮಸ್ಥಳ ಗ್ರಾಮದ ಶ್ರೀ ರಾಮಕ್ಷೇತ್ರದ ದೇವರಗುಡ್ಡೆ ಗುರುದೇವ ಮಠದಲ್ಲಿ ಅದೇ ಪೊಲೀಸರ ಕಾವಲಿನಲ್ಲಿ ಸಚಿವರು, ಶಾಸಕರು ಹಾಗೂ ಸ್ವಾಮೀಜಿಯ ಉಪಸ್ಥಿತಿಯಲ್ಲಿ ಸಾವಿರಾರು ಮಂದಿ ಸೇರಿ ಸರಕಾರದ ಕೋವಿಡ್ ನಿಯಂತ್ರಣ ಮುಂಜಾಗ್ರತಾ ನಿಯಮಗಳನ್ನು ಗಾಳಿಗೆ ತೂರಿ, ಜಿಲ್ಲಾಡಳಿತದ ವೀಕ್‌ಎಂಡ್ ಕರ್ಫ್ಯೂ ಘೋಷಣೆಗೆ ಸವಾಲು ಹಾಕುವ ರೀತಿಯಲ್ಲಿ ಬಹಿರಂಗ ಸಮಾವೇಶ; ಸಾವಿರಾರು ಮಂದಿಗೆ ಅನ್ನ ಸಂತರ್ಪಣೆ. ಹೇಗಿದೆ ನಮ್ಮ ಜನಪ್ರತಿನಿಧಿಗಳ ತುಘಲಕ್ ದರ್ಬಾರ್…. ತುಲನೆ ಮಾಡಿ ತೀರ್ಮಾನಿಸುವ ಜವಾಬ್ದಾರಿ ಪ್ರಜ್ಞಾವಂತ ನಾಗರಿಕರದ್ದು.

Latest 5

Related Posts