ಬೆಳ್ತಂಗಡಿ: ಪುರಾಣ ವಾಚನ-ಪ್ರವಚನವು ಜ್ಞಾನದಾಸೋಹದ ಮಹಾ ಯಜ್ಞವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿತ್ವದಲ್ಲಿ ನಿತ್ಯವೂ ನಡೆಯುವ ಅನ್ನದಾನ, ವಿದ್ಯಾದಾನ, ಅಭಯದಾನ ಹಾಗೂ ಔಷಧದಾನವೆಂಬ ಚತುರ್ವಿದ ದಾನ ಪರಂಪರೆ ಎಲ್ಲರಿಗೂ ಅನುಕರಣೀಯ. ಧಾರ್ಮಿಕ ಪ್ರಭಾವನೆಯೊಂದಿಗೆ ಧರ್ಮಜಾಗೃತಿ ಹಾಗೂ ಆದ್ಯಾತ್ಮಿಕತೆಯ ಮೂಲಕ ಸಮಾಜ ಸುಧಾರಣೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ನಾಡಿನ ಇತರ ದೇಗುಲಗಳಿಗೆ ಮಾದರಿಯಾಗಿದೆ ಎಂದು ಚೆನ್ನೈನ ಇಸ್ಕಾನ್ನ ರಾಮಪ್ರಭು ಚಂದ್ರಹಾಸ ಮಹಾರಾಜ್ ಹೇಳಿದರು.ಅವರು ಸೆಪ್ಟೆಂಬರ್ 11ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ಆರಂಭಗೊಂಡ 50ನೇ ವರ್ಷದ ಪುರಾಣ ವಾಚನ-ಪ್ರವಚನ ಕಾರ್ಯಕ್ರಮದ ಸುವರ್ಣ ಮಹೋತ್ಸವ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಬದುಕಿನ ಶೈಲಿಯ ಸುಧಾರಣೆಯೊಂದಿಗೆ ಮಾನಸಿಕ ಶಾಂತಿ ಹಾಗೂ ನೆಮ್ಮದಿಗೆ ಪುರಾಣ ವಾಚನ-ಪ್ರವಚನ ಪೂರಕ ಎಂದು ಅವರು ಹೇಳಿದರು.ಉದ್ಘಾಟನಾ ಸಮಾರಂಭದ ಬಳಿಕ ನಡೆದ ‘ರನ್ನನ ಗದಾಯುದ್ಧದಲ್ಲಿ ದುರ್ಯೋದನ ವಿಲಾಪ’ದ ಕುರಿತು ನಡೆದ ಪುರಾಣ ವಾಚನ-ಪ್ರವಚನ ಕಾರ್ಯಕ್ರಮದಲ್ಲಿ ವಿದ್ವಾನ್ ಉಮಾಕಾಂತ ಭಟ್ ಕೇರೇಕೈ ವಾಚನ ನಡೆಸಿಕೊಟ್ಟರೆ; ಗಮಕಿ ತಕ್ಷಿಕೆರೆ ಸುಬ್ರಹ್ಮಣ್ಯ ಭಟ್ ಪ್ರವಚನ ನೆರವೇರಿಸಿದರು. ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ರಾವ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ಹಾಗೂ ವಾಗ್ಮಿ ಉಜಿರೆ ಅಶೋಕ್ ಭಟ್ ಸ್ವಾಗತಿಸಿದರು. ಡಾ. ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ. ವಿ. ಶೆಟ್ಟಿ, ದೇಗುಲದ ಪಾರುಪತ್ಯಗಾರ ಲಕ್ಷ್ಮೀನಾರಾಯಣ ರಾವ್ ಉಪಸ್ಥಿತರಿದ್ದು, ಸಹಕರಿಸಿದರು.






