ಬೆಳ್ತಂಗಡಿ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ತೃತೀಯ ಸಮ್ಮೇಳನವು ಉಜಿರೆಯಲ್ಲಿ ಮುಂದಿನ ಡಿಸೆಂಬರ್ 25 ಮತ್ತು 26 ರಂದು ಉಜಿರೆಯಲ್ಲಿ ನಡೆಯಲಿದ್ದು, ಇದರ ಪೂರ್ವಭಾವಿ ಸಿದ್ಧತಾ ಸಭೆಯು ಸೆಪ್ಟೆಂಬರ್ 18ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ನಡೆಯಿತು. ಅಖಿಲ ಭಾರತ ಸಾಹಿತ್ಯ ಪರಿಷತ್ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ಅವರು ಭಾಗವಹಿಸಿ ಜಿಲ್ಲೆ ಮತ್ತು ತಾಲೂಕು ಸಮಿತಿ ಪದಾಧಿಕಾರಿಗಳೊಂದಿಗೆ ವಿಚಾರ ವಿನಿಮಯ ನಡೆಸಿ, ಕಾರ್ಯಕ್ರಮದ ರೂಪು ರೇಷೆ ಬಗ್ಗೆ ಚರ್ಚಿಸಿ, ಮಾರ್ಗದರ್ಶನ ನೀಡಿದರು. ಎರಡು ದಿನಗಳ ಸಮ್ಮೇಳನದಲ್ಲಿ ರಾಜ್ಯದಿಂದ ಸುಮಾರು 2000ಸಾಹಿತ್ಯ ಆಸಕ್ತರು ಭಾಗವಹಿಸುವ ನಿರೀಕ್ಷೆಯಿದ್ದು, ಅದಕ್ಕೆ ತಕ್ಕಂತೆ ಸಭಾಂಗಣ, ಊಟೋಪಚಾರ ಹಾಗೂ ಹೊರಗಿನಿಂದ ಬರುವ ಸಾಹಿತ್ಯಾಭಿಮಾನಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಬಗ್ಗೆ ವಿಚಾರ ವಿನಿಮಯ ನಡೆಯಿತು. ಮೊದಲ ದಿನ ಬೆಳಿಗ್ಗೆ ಸಾಹಿತ್ಯಾಭಿಮಾನಿಗಳ ಮೆರವಣಿಗೆ, ಉದ್ಘಾಟನಾ ಕಾರ್ಯಕ್ರಮ, ಸ್ಮರಣ ಸಂಚಿಕೆ ಹಾಗೂ ಹಿಂದಿನ ಸಮ್ಮೇಳನಗಳಲ್ಲಿ ಮಂಡಿಸಲ್ಪಟ್ಟ ವಿಚಾರಗಳ ದಾಖಲೆಯ ಕೃತಿ ಬಿಡುಗಡೆ, ಸಂಜೆ ಮತ್ತು ಮರುದಿನ ಬೆಳಿಗ್ಗೆ ಸಾಹಿತ್ಯ ಸಂಬಂಧಿ ಗೋಷ್ಠಿಗಳಲ್ಲಿ ವಿಚಾರ ಮಂಡನೆ, ಸಂಜೆ ಸಾಹಿತ್ಯಿಕ ಮೌಲ್ಯದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗು ಎರಡನೇ ದಿನ ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ. ‘ಸ್ವರಾಜ್ಯ ಮತ್ತು ಸಾಹಿತ್ಯ’ ವಿಷಯದಲ್ಲಿ ಅಧಿವೇಶನ ಸ್ವರೂಪ ಪಡೆಯಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ ಮಾತನಾಡಿ ಪುರಾತನ ಕಲೆ, ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ, ವಸ್ತು ಪ್ರದರ್ಶನ, ಸ್ವದೇಶೀ ವಸ್ತು ವೈವಿಧ್ಯಗಳ ಮಳಿಗೆಗಳಿಗೆ ಅವಕಾಶ ಕಲ್ಪಿಸಬಹುದು. ಸಾಹಿತ್ಯಾಸಕ್ತ ಕಾರ್ಯಕರ್ತರ ಸದಸ್ಯತಾ ಅಭಿಯಾನ ಕೈಗೊಳ್ಳಬೇಕೆಂದು ನುಡಿದರು. ಅಖಿಲ ಭಾರತ ಸಾಹಿತ್ಯ ಪರಿಷತ್ನ ಜಿಲ್ಲಾ ಸಮಿತಿಯ ವಿಭಾಗ ಸಂಯೋಜಕ ಶೈಲೇಶ್ ಜೆ., ವಿಭಾಗ ಸಂಘಟನಾ ಕಾರ್ಯದರ್ಶಿ ರಾಜೇಂದ್ರ, ಜಿಲ್ಲಾ ಕಾರ್ಯದರ್ಶಿ ಪ್ರಕಾಶ ನಾರಾಯಣ ಪೂರಕ ಮಾಹಿತಿ ನೀಡಿದರು. ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ರವೀಂದ್ರ ಶೆಟ್ಟಿ ಬಳಂಜ ಸ್ವಾಗತಿಸಿದರು. ಸಮಾಲೋಚನಾ ಸಭೆಯಲ್ಲಿ ಜಿಲ್ಲಾ ಸಮಿತಿ ಉಪಾಧ್ಯಕ್ಷ ಡಾ. ಶ್ರೀಧರ ಭಟ್, ರಘುನಾಥ ಪ್ರಭು, ರಾಮಕೃಷ್ಣ ಭಟ್ ಬಳಂಜ , ವಾಸುದೇವ ಸೋಮಯಾಜಿ , ಜಿಲ್ಲಾ ಸಹಕಾರ್ಯದರ್ಶಿ ಶ್ರೀಧರ ಎಣ್ಮಕಜೆ ವಿನಯಚಂದ್ರ, ಸಾಂತೂರು ಶ್ರೀನಿವಾಸ ತಂತ್ರಿ ಮತ್ತಿತರರು ಉಪಸ್ಥಿತರಿದ್ದರು. ತಾಲೂಕು ಘಟಕದ ಕಾರ್ಯದರ್ಶಿ ರಮೇಶ್ ಮಯ್ಯ ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.






