ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ರಾಜ್ಯದ ವಿವಿದೆಡೆ ಸ್ಥಾಪಿಸಿರುವ ಶುದ್ಧಗಂಗಾ ಕುಡಿಯುವ ನೀರಿವ ಘಟಕಗಳ ಪೈಕಿ ಪ್ರಾಯೋಗಿಕವಾಗಿ ಆಯ್ದ 40ಘಟಕಗಳಿಗೆ ಉಚಿತವಾಗಿ ಸೋಲಾರ್ ಇನ್‌ವರ್ಟರ್ ಅಳವಡಿಸುವುದಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 27ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಬೀಡಿನಲ್ಲಿ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸೆಲ್ಕೊ ಪ್ರತಿಷ್ಠಾನ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಡುವೆ ಒಪ್ಪಂದ ವಿನಿಮಯ ಮಾಡಿಕೊಳ್ಳಲಾಯಿತು. ಈ ಒಪ್ಪಂದದಂತೆ ಪ್ರತೀ ಘಟಕಕ್ಕೆ ವಾರ್ಷಿಕ 6ಲಕ್ಷ ರೂಪಾಯಿ ವೆಚ್ಚದಲ್ಲಿ ಒಟ್ಟು 40ಶುದ್ಧಗಂಗಾ ಕುಡಿಯುವ ನೀರಿನ ಘಟಕಗಳಿಗೆ ಒಟ್ಟು ರೂಪಾಯಿ 2.40ಕೋಟಿ ವೆಚ್ಚದಲ್ಲಿ ಒಂದು ವರ್ಷದವರೆಗೆ ನಿರ್ವಹಣೆಯನ್ನು ಉಚಿತವಾಗಿ ಸೆಲ್ಕೊ ಪ್ರತಿಷ್ಠಾನ ಮಾಡಲಿದೆ. ಈ ಸಂದರ್ಭದಲ್ಲಿ ಮಾತನಾಡಿದ ಸೆಲ್ಕೊ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಹರೀಶ್ ಹಂದೆ, ಸೌರಶಕ್ತಿ ಬಳಕೆ ಬಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಸೇವೆ, ಸಾಧನೆ ಮತ್ತು ಯಶಸ್ಸನ್ನು ಅಭಿನಂದಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಸಂಪೂರ್ಣ ಸೌರಶಕ್ತಿಯಿಂದಲೇ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಡೆಸುವ ನೂತನ ಪ್ರಯತ್ನ ಇದಾಗಿದ್ದು, ಮಾದರಿ ಕಾರ್ಯಕ್ರಮವಾಗಿದೆ ಎಂದರಲ್ಲದೇ ಅಡುಗೆ ಮನೆಯಲ್ಲೂ ಸೌರಶಕ್ತಿಯ ಸಮರ್ಪಕ ಬಳಕೆಯ ಬಗ್ಗೆ ಮುಂದಿನ ದಿನಗಳಲ್ಲಿ ಚಿಂತಿಸಲಾಗುವುದು ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾl ಎಲ್. ಎಚ್. ಮಂಜುನಾಥ್, ರಾಜ್ಯದಲ್ಲಿ ಯೋಜನೆಯ ವತಿಯಿಂದ ಈಗಾಗಲೇ 321ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಲಾಗಿದೆ. ಸಧ್ಯ 81,000ಕ್ಕೂ ಅಧಿಕ ಬಳಕೆದಾರರು ಪ್ರತಿದಿನ 16.20ಲಕ್ಷ ಲೀಟರ್ ಶುದ್ಧ ನೀರನ್ನು ಈ ಘಟಕಗಳಿಂದ ಪಡೆದು ಬಳಕೆ ಮಾಡುತ್ತಿದ್ದಾರೆ. ಎಲ್ಲರಿಗೂ ಕಡಿಮೆ ದರದಲ್ಲಿ ಶುದ್ಧ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ ಎಂದರು.ಯೋಜನೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅನಿಲ್ ಕುಮಾರ್, ಪ್ರಾದೇಶಿಕ ಹಣಕಾಸು ನಿರ್ದೇಶಕ ಶಾಂತಾರಾಮ ಪೈ, ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಆನಂದ ಸುವರ್ಣ, ಸೆಲ್ಕೊ ಸೋಲಾರ್‌ನ ಸಿ.ಇ.ಒ. ಮೋಹನ ಭಾಸ್ಕರ ಹೆಗಡೆ, ಪ್ರಧಾನ ವ್ಯವಸ್ಥಾಪಕ ಜಗದೀಶ ಪೈ, ಗುರುಪ್ರಸಾದ್ ಶೆಟ್ಟಿ, ಸುಪ್ರಿಯಾ ಗೌಡ, ಶುದ್ಧಗಂಗಾ ವಿಭಾಗದ ನಿರ್ದೇಶಕ ಲಕ್ಷ್ಮಣ ಎಂ. ಮತ್ತು ಯೋಜನಾಧಿಕಾರಿ ಯುವರಾಜ್ ಜೈನ್ ಉಪಸ್ಥಿತರಿದ್ದರು.






