ಅ. 15: ಬೆಳ್ತಂಗಡಿ: ಕೊಡಗು, ಮೈಸೂರು ಸಹಿತ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯನ್ನು ಹೊಂದಿರುವ ಪುತ್ತೂರಿನಲ್ಲಿ ಪ್ರಧಾನ ಶಾಖೆ ಇರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ 11ನೇ ಶಾಖೆಯು ಬೆಳ್ತಂಗಡಿಯ ಮಿನಿ ವಿಧಾನಸೌಧದ ಬಳಿ ಇರುವ ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್ನ 1ನೇ ಮಹಡಿಯಲ್ಲಿ ಅಕ್ಟೋಬರ್ 15ರಂದು ಉದ್ಘಾಟನೆಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಭಾಸ್ಕರ ಎಂ. ಪೆರುವಾಯಿ ತಿಳಿಸಿದ್ದಾರೆ.ಅಕ್ಟೋಬರ್ 12ರಂದು ಬೆಳ್ತಂಗಡಿಯ ಪತ್ರಿಕಾಭವನದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಭಾಸ್ಕರ ಎಂ. ಪೆರುವಾಯಿ, 1958ರಲ್ಲಿ ಗ್ರಾಮೀಣ ಗುಡಿ ಕೈಗಾರಿಕೆಯಾದ ಕುಂಬಾರಿಕೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಪುತ್ತೂರಿನಲ್ಲಿ ಆರಂಭಗೊಂಡ ನಮ್ಮ ಸಂಘವು ಈಗಾಗಲೇ 10 ಶಾಖೆಗಳನ್ನು ಹೊಂದಿದ್ದು, ಬ್ಯಾಂಕಿಂಗ್ ಮತ್ತು ಕುಂಬಾರಿಕೆ ಉತ್ಪನ್ನಗಳ ಮಾರಾಟ ಮಳಿಗೆಗಳನ್ನು ಹೊಂದಿದೆ. ಪುತ್ತೂರು ಹಾಗೂ ಬಿ.ಸಿ.ರೋಡ್ಗಳಲ್ಲಿ ಕುಂಬಾರಿಕೆ ಪ್ರದರ್ಶನ ಮಳಿಗೆ ಕೂಡಾ ಇದ್ದು, ಇದರೊಂದಿಗೆ ಕುಂಬಾರಿಕೆ ಉತ್ಪಾದನಾ ತರಬೇತಿ ಕೇಂದ್ರವೂ ಕಾರ್ಯಾಚರಿಸುತ್ತಿದೆ. ಸಂಘವು ಪ್ರಕೃತ 28,266 ಸದಸ್ಯರನ್ನು ಹೊಂದಿದ್ದು, 307.93 ಲಕ್ಷ ರೂಪಾಯಿ ಪಾಲು ಬಂಡವಾಳ ಹಾಗೂ 46.96ಕೋಟಿ ರೂಪಾಯಿ ಠೇವಣಿ ಹೊಂದಿದೆ. ಕುಂಬಾರಿಕೆ ಗುಡಿ ಕೈಗಾರಿಕೆ ಪ್ರೋತ್ಸಾಹಿಸುವ ಉದ್ಧೇಶದಿಂದ ಆಸಕ್ತರಿಗೆ 9% ಬಡ್ಡಿದರದಲ್ಲಿ ಸಾಲ ಸೌಲಭ್ಯ ಹಾಗೂ ಗುಡಿ ಕೈಗಾರಿಕೆಗೆ ಪೂರಕ ಮಾಹಿತಿ ನೀಡಲಾಗುವುದು. ಸಂಘವು 2020-21ನೇ ಸಾಲಿನಲ್ಲಿ ಕೊರೋನಾದ ಸಂಕಷ್ಟದ ನಡುವೆಯೂ 214.50ಕೋಟಿ ರೂಪಾಯಿ ವ್ಯವಹಾರ ನಡೆಸಿ, ಒಟ್ಟು 90.16ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಸ್ಥೂಲ ಪರಿಚಯ ಮಾಡಿದರು.ಬೆಳ್ತಂಗಡಿಯಲ್ಲಿ ಅಕ್ಟೋಬರ್ 15ರಂದು ಉದ್ಘಾಟನೆಗೊಳ್ಳಲಿರುವ ಸಂಘದ 11ನೇ ಶಾಖೆಯ ಉದ್ಘಾಟನಾ ಕಾರ್ಯಕ್ರಮದ ವಿವರ ನೀಡಿದ ಭಾಸ್ಕರ ಎಂ. ಪೆರುವಾಯಿ, ನೂತನ ಶಾಖೆಯ ಉದ್ಘಾಟನೆಯನ್ನು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ನೆರವೇರಿಸಲಿದ್ದು, ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿ ಹಾಗೂ ಪುಟ್ಟಣ್ಣ ಕಣಗಾಲ್ ಪ್ರತಿಷ್ಠಾನದ ಅಧ್ಯಕ್ಷ ಡಾl ಅಣ್ಣಯ್ಯ ಕುಲಾಲ್ ಉಳ್ತೂರು ಭದ್ರತಾ ಕೊಠಡಿಯನ್ನು ಉದ್ಘಾಟಿಸಲಿರುವರು. ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ಮಂಗಳೂರು ಇದರ ಅಧ್ಯಕ್ಷರಾದ ಮಯೂರು ಉಳ್ಳಾಲ್ ಗಣಕ ಯಂತ್ರ ವಿಭಾಗವನ್ನು ಉದ್ಘಾಟಿಸಲಿರುವರು. ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವ, ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಹರೀಶ್ ಕಾರಿಂಜ ಹಾಗೂ ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್ನ ಮಾಲಕ ರವಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು ಎಂದು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಜನಾರ್ದನ ಮೂಲ್ಯ, ನಿರ್ದೇಶಕ ಪದ್ಮ ಕುಮಾರ್, ಪಿ. ಗಣೇಶ್, ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಹರೀಶ್ ಕಾರಿಂಜ ಉಪಸ್ಥಿತರಿದ್ದರು.






