ಬೆಳ್ತಂಗಡಿ: ಪ್ರಸ್ತುತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಅಡಿಕೆ, ಕಾಳುಮೆಣಸು, ರಬ್ಬರಿಗೆ ಉತ್ತಮ ಧಾರಣೆ ಬರುತ್ತಿದ್ದು; ಇದರಿಂದ ರೈತರ ಆರ್ಥಿಕ ಶಕ್ತಿ ಹೆಚ್ಚಾಗುತ್ತಿದೆ. ಅದೇ ರೀತಿಯಲ್ಲಿ ಭವಿಷ್ಯವನ್ನು ದೃಷ್ಠಿಯನ್ನಿಟ್ಟುಕೊಂಡು ವಾತಾವರಣದ ಸ್ಥಿತಿಗೆ ಅನುಗುಣವಾಗಿ ಸಮ್ಮಿಶ್ರ ಬೆಳೆಯತ್ತ ರೈತರು ಮುಂದಾಗಬೇಕು ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.ಅವರು ಮಾರ್ಚ್ 5ರಂದು ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ ಉಜಿರೆ ಇದರ ಗುರುವಾಯನಕೆರೆಯಲ್ಲಿ ನೂತನವಾಗಿ ನಿರ್ಮಿಸಿರುವ ಕಟ್ಟಡವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಸುಳ್ಯ ಎಳನೀರು ಪ್ರದೇಶದಲ್ಲಿ ಅಡಿಕೆಗೆ ಹಳದಿ ರೋಗ ಬಂದು ಅಡಿಕೆ ಬೆಳೆ ಸಂಪೂರ್ಣ ನಾಶವಾಗಿರುವುದುನ್ನು ಕಂಡಾಗ ರೈತರು ಎಚ್ಚರಿಕೆ ವಹಿಸಬೇಕಾಯಿತು. ಇಂದು ಡ್ರಾಗನ್ ಫ್ರೂಟ್ಸ್, ರ‍್ಯಾಂಬೊಟಮ್‌ನಂತಹ ಹಣ್ಣಿನ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಬರುತ್ತಿದೆ. ಅಲ್ಪ ಅವಧಿಯಲ್ಲಿ ಅಧಿಕ ಲಾಭ ಪಡೆಯಬಹುದಾದಂತಹ ಹಣ್ಣಿನ ಬೆಳೆಯನ್ನು ಅಡಿಕೆ, ರಬ್ಬರ್‌ನೊಂದಿಗೆ ಸಮ್ಮಿಶ್ರ ಬೆಳೆಯಾಗಿಸಿಕೊಂಡಾಗ ರೈತರು ಹೆಚ್ಚಿನ ಲಾಭವನ್ನು ಪಡೆಯಬಹುದು. ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ ರಬ್ಬರ್ ಬೆಳೆಗಾರರಿಗೆ ಉತ್ತಮ ಧಾರಣೆ ನೀಡುವುದಲ್ಲದೆ ಏಷ್ಯದಲ್ಲೇ ಅತೀದೊಡ್ಡ ಸಂಘ ಎಂದು ಗುರುತಿಸಿರುವುದು ತಾಲೂಕಿಗೆ ಹೆಮ್ಮೆಯಾಗಿದೆ ಎಂದರು.ಕ್ಯಾಂಪ್ಕೋ ಮಂಗಳೂರು ಇದರ ಅಧ್ಯಕ್ಷ ಕಿಶೋರ್ ಕುಮಾರ್ ಕೂಡಿಗೆ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರಕಾರವು ಅಡಿಕೆ ಬೆಳೆಗಾರರಿಗೆ ಬೆಂಬಲ ಬೆಲೆ ನೀಡಲು ಮುಂದಾಗಬೇಕು. ಅಲ್ಲದೆ ವಿದೇಶದಿಂದ ಅಕ್ರಮ ಅಡಿಕೆ ಸಾಗಾಟಕ್ಕೆ ಕಡಿವಾಣ ಹಾಕಬೇಕು. ಕೇಂದ್ರದ ಕೆಲವೊಂದು ಮಂತ್ರಿಗಳು ಅಡಿಕೆ ಹಾನಿಕಾರಕ ಎಂಬ ಅಂಶವನ್ನು ಪದೇಪದೇ ಉಲ್ಲೇಖಿಸುತ್ತಿರುವುದು ಶೋಭೆಯಲ್ಲ. ಇದಕ್ಕೆ ಕಡಿವಾಣ ಹಾಕಿ ಕೇಂದ್ರ ಸರಕಾರ ಅಡಿಕೆ ಸಂಶೋಧನೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು. ರಬ್ಬರ್ ಬೆಳೆಗಾರರ ಹಿತದೃಷ್ಠಿಯಿಂದ ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ ಹಲವಾರು ವರ್ಷಗಳಿಂದ ಶ್ರಮಿಸುತ್ತಿದ್ದು ಮುಂದಿನ ದಿನಗಳಲ್ಲಿ ರಾಜ್ಯವ್ಯಾಪ್ತಿ ವಿಸ್ತಾರಗೊಂಡು ರಬ್ಬರ್ ಬೆಳೆಗಾರರಿಗೆ ಮತ್ತು ರಬ್ಬರ್ ಬೆಳೆಗೆ ನೆರವಾಗಲಿ ಎಂದರು. ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ಅಧ್ಯಕ್ಷ ಶ್ರೀಧರ್ ಭಿಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ರಬ್ಬರ್ ಬೆಲೆ ಕುಸಿತದ ಸಂದರ್ಭದಲ್ಲಿ ನಮ್ಮ ಸಂಘವು ರಬ್ಬರ್ ಬೆಳೆಗಾರರ ಬೆನ್ನೆಲುಬಾಗಿ ನಿಂತು ರಬ್ಬರ್ ಖರೀದಿ ಮಾಡುವ ಮೂಲಕ ಪ್ರೋತ್ಸಾಹ ನೀಡಿದ ಏಕೈಕ ಸಂಘವಾಗಿದೆ. ಮುಂದೆಯೂ ರಬ್ಬರ್ ಬೆಳೆಗಾರರಿಗೆ ಉತ್ತಮ ಬೆಲೆ ನೀಡಲು ಮತ್ತು ನ್ಯಾಯ ಒದಗಿಸಲು ಸಿದ್ಧ ಎಂದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಎನ್. ಪದ್ಮನಾಭ, ಗ್ರೇಸಿಯುಸ್ ವೇಗಸ್, ವಿ. ವಿ. ಅಬ್ರಹಾಂ, ಇ. ಸುಂದರ ಗೌಡ, ಜಯಶ್ರೀ ಡಿ. ಎಂ., ಸೀತಾರತ್ನ, ಬಾಲಕೃಷ್ಣ ಗೌಡ ಕೆ., ರಾಮ ನಾಯ್ಕ ಕೆ, ಸೋಮನಾಥ ಬಂಗೇರ, ಕೆ. ಜೆ. ಅಗಸ್ಟಿನ್, ಪದ್ಮ ಗೌಡ ಎಚ್, ಭೈರಪ್ಪ ಬಿ. ಎಸ್., ಅಬ್ರಹಾಂ, ಡಾl ಶಶಿಧರ ಡೋಂಗ್ರೆ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಇಂಜಿನಿಯರ್ ಹಾಗೂ ಗುತ್ತಿಗೆದಾರರನ್ನು ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷ ಅನಂತ ಭಟ್ ಎಂ. ಸ್ವಾಗತಿಸಿ, ಶಶಿಧರ ಠೋಸರ್ ಕಾರ್ಯಕ್ರಮ ನಿರೂಪಿಸಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜು ಶೆಟ್ಟಿ ವಂದಿಸಿದರು.






