ಬೆಳ್ತಂಗಡಿ: ಗರ್ಡಾಡಿ ಸಮೀಪದ ನಂದಿಬೆಟ್ಟ ಸಮೀಪ ದ್ವಿಚಕ್ರ ವಾಹನಕ್ಕೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರಿಬ್ಬರೂ ಸಾವನ್ನಪ್ಪಿದ ಘಟನೆ ಮಾರ್ಚ್ 18ರ ಮಧ್ಯಾಹ್ನ ವರದಿಯಾಗಿದೆ. ಮೃತರನ್ನು ಉಪ್ಪಿನಂಗಡಿ ಸಮೀಪದ ಹಿರೇಬಂಡಾಡಿಯವರು ಎಂದು ಗುರುತಿಸಲಾಗಿದೆ. ಧರ್ಮಸ್ಥಳದಿಂದ ಉಡುಪಿ ಕಡೆ ಚಲಿಸುತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿಗೆ ವೇಣೂರಿನಿಂದ ಗುರುವಾಯನಕೆರೆ ಕಡೆ ಬರುತಿದ್ದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದ್ದೆನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಸವಾರರಿಬ್ಬರೂ ರಸ್ತೆಗೆ ಎಸೆಯಲ್ಪಟ್ಟು ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೊರ್ವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತರನ್ನು ಉಪ್ಪಿನಂಗಡಿ ಸಮೀಪದ ಹಿರೇಬಂಡಾಡಿಯ ನಿವೃತ್ತ ಶಿಕ್ಷಕ ಮಹ್ರೂಮ್ ಅಬ್ದುಲ್ ರಝಾಕ್ ಅವರ ಪುತ್ರರಾದ ಹಮ್ಮಬ್ಬ ಸಿರಾಜ್ ಮತ್ತು ಕತುಬುದ್ಧಿನ್ ಸಾದಿಕ್ ಎಂದು ಗುರುತಿಸಲಾಗಿದೆ. ಅವರು ಮಾರ್ಚ್ 17ರಂದು ಅನಾರೋಗ್ಯದಿಂದ ಮೃತಪಟ್ಟ ಅಣ್ಣನ ಮಗನ ಮರಣ ಕಾರ್ಯ ಮುಗಿಸಿ ಹಿಂದಿರುಗಿ ಬರುತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ .






