‘ಪುಂಜಾಲಕಟ್ಟೆ-ಚಾರ್ಮಾಡಿ ರಸ್ತೆ ಅಭಿವೃದ್ಧಿಗೆ 718 ಕೋಟಿ ರೂ. ಅನುದಾನ’

‘ಪುಂಜಾಲಕಟ್ಟೆ-ಚಾರ್ಮಾಡಿ ರಸ್ತೆ ಅಭಿವೃದ್ಧಿಗೆ 718 ಕೋಟಿ ರೂ. ಅನುದಾನ’
Facebook
Twitter
LinkedIn
WhatsApp

ಬೆಳ್ತಂಗಡಿ: ಸರ್ಕಾರದ ಚಿಂತನೆಯಂತೆ ಸಂಜೀವಿನಿ ಒಕ್ಕೂಟಕ್ಕೆ ಶಕ್ತಿಯನ್ನು ಕೊಟ್ಟಂತಹ ಸಂದರ್ಭದಲ್ಲಿ ಮಹಿಳೆಯರು ಸೇರಿಕೊಂಡು ಏನಾದರೊಂದು ಪರಿವರ್ತನೆ ಮಾಡಬಹುದು ಎಂಬುವುದನ್ನು ಲಾಯಿಲ ಸಮಗ್ರ ಸಂಜೀವಿನಿ ಒಕ್ಕೂಟದವರು ತೋರಿಸಿಕೊಟ್ಟಿದ್ದಾರೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತಿದ್ದೇನೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು. ಅವರು ಮಾರ್ಚ್ 26ರಂದು ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿ ಪಂಗಡದ ಅರ್ಹ ಫಲಾನುಭವಿಗಳಿಗೆ ಚೆಕ್ ವಿತರಣೆ, ಸ್ವಚ್ಛತಾ ವಾಹನದ ಲೋಕಾರ್ಪಣೆ, ಗ್ರಂಥಾಲಯ ಕಟ್ಟಡಕ್ಕೆ ಶಿಲಾನ್ಯಾಸ, ಎನ್‌ಆರ್‌ಎಲ್‌ಎಮ್ ಕಟ್ಟಡ ಉದ್ಘಾಟನೆ, ಸಮಗ್ರ ಸಂಜೀವಿನಿ ಮಹಿಳಾ ಒಕ್ಕೂಟದ ಕಾರ್ಯಾಲಯಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಮುಂದಿನ ದಿನಗಳಲ್ಲಿ ಸಂಜೀವಿನಿ ಒಕ್ಕೂಟಕ್ಕೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡುತ್ತೇನೆ. ಅದಲ್ಲದೇ ಸರ್ಕಾರದಿಂದ ಏನಾದರೂ ಯೋಜನೆಗಳಿದ್ದರೂ ಸಂಪೂರ್ಣ ಸಹಕಾರ ನೀಡಲಾಗುವುದು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಸಮಗ್ರ ಗ್ರಾಮೀಣಾಭಿವೃದ್ಧಿ ಎಂಬ ಪುಸ್ತಕವನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಈಗಿನ ವ್ಯವಸ್ಥೆಗೆ ಅದು ಭಗವದ್ಗಿತೆ ಇದ್ದಂತೆ. ಈ ನಿಟ್ಟಿನಲ್ಲಿ ಸಮಗ್ರವಾದ ವಿವರಗಳ ಕೈಗನ್ನಡಿಯನ್ನು ಪುಸ್ತಕ ರೂಪದಲ್ಲಿ ಹೊರತಂದ್ದ ಅವರಿಗೆ ಅಭಿನಂದನೆಗಳು. ಅವರು ಬೆಳ್ತಂಗಡಿ ಮೇಲೆ ಅಪಾರವಾದ ಅಭಿಮಾನ ಹೊಂದಿದ್ದು ಈಗಾಗಲೇ ಮೂರು ಗ್ರಂಥಾಲಯ ರಚನೆಗೆ ಸಹಕಾರ ನೀಡಿದ್ದಾರೆ. ಗ್ರಾಮದ ಸ್ಚಚ್ಚತೆಯ ನಿಟ್ಟಿನಲ್ಲಿ ದಾನಿಗಳ ಸಹಕಾರದ ಮೂಲಕ ಹೊಸ ಸ್ಚಚ್ಚತಾ ವಾಹನವನ್ನು ಖರೀದಿಸಿ ಲಾಯಿಲ ಪಂಚಾಯತ್ ಲೋಕಾರ್ಪಣೆ ಮಾಡಿರುವುದು ತುಂಬಾ ಸಂತೋಷವನ್ನುಂಟು ಮಾಡಿದೆ. ಬಹುವರುಷಗಳ ಜನರ ಬೇಡಿಕೆಯಾಗಿದ್ದ ಪುಂಜಾಲಕಟ್ಟೆ-ಚಾರ್ಮಾಡಿ ರಸ್ತೆ ಅಗಲೀಕರಣ ಕಾಮಗಾರಿಗೆ 718 ಕೋಟಿ ರೂಪಾಯಿಯನ್ನು ಸಂಸದ ನಳೀನ್ ಕುಮಾರ್ ಕಟೀಲ್ ಅವರ ಮುತುವರ್ಜಿ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ನಿತೀನ್ ಗಡ್ಕರಿಯವರ ಮೂಲಕ ಮಂಜೂರಾಗಿದ್ದು, ಇದರಿಂದ ಗುರುವಾಯನಕೆರೆ-ಬೆಳ್ತಂಗಡಿ-ಉಜಿರೆ ಚತುಷ್ಪಥ ರಸ್ತೆ ನಿರ್ಮಾಣಗೊಂಡು ಬೆಳ್ತಂಗಡಿಯಲ್ಲಿ ಹೊಸ ಶಕೆ ಪ್ರಾರಂಭವಾಗಿದೆ. ಈ ಮೂಲಕ ನವ ಬೆಳ್ತಂಗಡಿ ನಿರ್ಮಾಣದ ಕಲ್ಪನೆ ಸಾಕಾರಗೊಂಡು ಜನರ ಬಹುದಿನಗಳ ಕನಸು ನನಸಾಗುತ್ತದೆ ಎಂದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಮಾತನಾಡಿ ರಾಜ್ಯಕ್ಕೆ ಮಾದರಿಯಾಗುವಂತಹ ರೀತಿಯಲ್ಲಿ ಗ್ರಂಥಾಲಯವೊಂದು ಬೆಳ್ತಂಗಡಿಯಲ್ಲಿ ನಿರ್ಮಾಣವಾಗುತ್ತಿದ್ದು ಶಾಸಕರು ಶಿಕ್ಷಣದ ಜ್ಞಾನದ ಕ್ಷೇತ್ರಕ್ಕೆ ಬಹಳ ಒತ್ತನ್ನು ನೀಡುತ್ತಿರುವುದರಿಂದ ಮೂರು ಗ್ರಂಥಾಲಯವನ್ನು ತಲಾ 5 ಲಕ್ಷ ರೂಪಾಯಿ ಅನುದಾನದಲ್ಲಿ ಬೆಳ್ತಂಗಡಿಯ ಮೂರು ಗ್ರಾಮ ಪಂಚಾಯತ್ ನಲ್ಲಿ ನಿರ್ಮಿಸಲಾಗುತಿದ್ದು ಲಾಯಿಲದಲ್ಲಿ ಶಿಲಾನ್ಯಾಸ ಶಾಸಕರ ಮೂಲಕ ಮಾಡಲಾಗಿದೆ. ಯುವ ಮನಸ್ಸು ಸದಾ ಅಭಿವೃದ್ಧಿ ಪರ ಚಿಂತನೆಯಲ್ಲಿರುವ ಶಾಸಕರ ಕಾರ್ಯಕ್ಕೆ ಅಭಿನಂದನೆಗಳನ್ನು ಸಲ್ಲಿಸುತಿದ್ದೇನೆ. ಅಭಿವೃದ್ಧಿ ಹಾಗೂ ಉತ್ತಮ ಕಾರ್ಯಚಟುವಟಿಕೆಗಳ ಮೂಲಕ ಲಾಯಿಲ ಗ್ರಾಮ ಪಂಚಾಯಿತ್ ಮೊದಲಿನಿಂದಲೂ ಒಳ್ಳೆಯ ಹೆಸರನ್ನು ಗಳಿಸಿಕೊಂಡು ಬಂದಿದೆ. ಪಂಚಾಯತ್ ಸಮರ್ಪಕವಾಗಿ ಅಭಿವೃದ್ಧಿ ಹೊಂದಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡುವೆ ಉತ್ತಮ ಸಾಮರಸ್ಯ ಇರಬೇಕು. ಸ್ನೇಹ ಸಮಗ್ರ ಸಂಜೀವಿನಿ ಒಕ್ಕೂಟದ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಮಹಿಳೆಯರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲೀಕರಣಗೊಳ್ಳಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಪ್ರಧಾನ ಮಂತ್ರಿ ಕಿರು ಆಹಾರ ಯೋಜನೆ ಲಾಯಿಲದ ಸಮಗ್ರ ಸಂಜೀವಿನಿ ಸದಸ್ಯರು ಪ್ರಾರಂಭಿಸುತ್ತಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಛ ಪ್ರಸ್ತಾವನೆಗೈದರು. ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕ್ರತ ಜಯಾನಂದ ಲಾಯಿಲ ಅವರನ್ನು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರ್ ಅವರನ್ನು ಶಾಸಕರ ಮೂಲಕ ಪಂಚಾಯತ್ ವತಿಯಿಂದ ಗೌರವಿಸಲಾಯಿತು. ಸ್ವಚ್ಛತಾ ವಾಹನಕ್ಕೆ ನೆರವು ನೀಡಿದವರನ್ನು ಗುರುತಿಸಲಾಯಿತು ಪಂಚಾಯತ್ ಅಧ್ಯಕ್ಷೆ ಬೆನಡಿಕ್ಟ ಸಲ್ದಾನ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಗಣೇಶ್ ಆರ್. ಸ್ವಾಗತಿಸಿದರು ಸದಸ್ಯ ಅರವಿಂದ ಸಮ್ಮಾನ ಪತ್ರ ವಾಚಿಸಿದರು ಕಾರ್ಯದರ್ಶಿ ಯಶೋದರ ಶೆಟ್ಟಿ ಧನ್ಯವಾದವಿತ್ತರು.ತಾಲೂಕು ಪಂಚಾಯತ್ ಕಾರ್ಯಕ್ರಮ ಸಂಯೋಜಕ ಜಯಾನಂದ ಲಾಯಿಲನಿರೂಪಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕುಸಮಾಧರ್, ಗ್ರಾಮ ಪಂಚಾಯತ್ ಸದಸ್ಯರುಗಳು ಪಂಚಾಯತ್ ಸಿಬ್ಬಂದಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.

Latest 5

Related Posts