ಬೆಳ್ತಂಗಡಿ: ನಾಡಿನ ಯುವಸಮೂಹಕ್ಕೆ ಬೆಂಗಳೂರು ಶಿಲ್ಪಿ ನಾಡಪ್ರಭು ಕೆಂಪೇಗೌಡರು ಆದರ್ಶವಾಗಬೇಕು. ಉತ್ತಮ ವ್ಯಕ್ತಿತ್ವ ನಿರ್ಮಿಸಿಕೊಂಡು ಬದುಕಲ್ಲಿ ಸಾಧನೆಗೈಯಲು ಕೆಂಪೇಗೌಡರ ಬದುಕು ಪ್ರೇರಣೆಯಾಗಬೇಕು. ದೂರದೃಷ್ಟಿ ಇದ್ದ ಕೆಂಪೇಗೌಡರು ಅಂದು ಬೆಂಗಳೂರು ನಗರವನ್ನು ಪ್ರಾಕೃತಿಕ ಸಮತೋಲನದಿಂದ ಅಭಿವೃದ್ಧಿಪಡಿಸಲು ನಗರದಲ್ಲಿ ಕೆರೆಗಳ ನಿರ್ಮಾಣ, ಉದ್ಯಾನವನಗಳ ನಿರ್ಮಾಣ, ರಸ್ತೆ ಬದಿಯ ಸಾಲುಮರಗಳ ಕಲ್ಪನೆಯೊಂದಿಗೆ ನಗರವನ್ನು ಕಟ್ಟಿ ಬೆಳೆಸಿದವರು ಎಂದು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ಹೇಳಿದರು.ಅವರು ಜೂನ್ 27ರಂದು ಬೆಳ್ತಂಗಡಿಯ ಶ್ರೀ ಮಂಜುನಾಥಸ್ವಾಮಿ ಕಲಾಭವನದಲ್ಲಿ ಬೆಳ್ತಂಗಡಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಆಶ್ರಯದಲ್ಲಿ ನಡೆದ ನಾಡಪ್ರಭು ಕೆಂಪಾಎಗೌಡರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಬೆಳ್ತಂಗಡಿ ವಾಣಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಮೀನಾಕ್ಷಿ ಪ್ರಧಾನ ಭಾಷಣ ಮಾಡಿ ನಾಡಪ್ರಭು ಕೆಂಪೇಗೌಡರ ಬದುಕಿನ ವಿವಿಧ ಮಜಲುಗಳನ್ನು ಸವಿವರವಾಗಿ ವಿವರಿಸಿದರು. ವಿಧಾನ ಪರಿಷತ್ ಸದಸ್ಯ ಪ್ರತಾಪ್ಸಿಂಹ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಶುಭ ಹಾರೈಸಿದರು.ಬೆಳ್ತಂಗಡಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡರ ಅಧ್ಯಕ್ಷತೆಯಲ್ಲಿ ನಡೆದ ಈ ಸರಕಾರಿ ಕಾರ್ಯಕ್ರಮದಲ್ಲಿ ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹೆಚ್. ಪದ್ಮ ಗೌಡ, ಬೆಳ್ತಂಗಡಿಯ ತಹಶೀಲ್ದಾರ್ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷ ಮಹೇಶ್ ಜೆ., ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶಿಕ್ಷಕ ರಮೇಶ್ ಪೈಲಾರ್ ಮತ್ತು ತಾಲೂಕು ಪಂಚಾಯತ್ ಕಾರ್ಯಕ್ರಮ ಸಂಯೋಜಕ ಜಯಾನಂದ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಬೆಳ್ತಂಗಡಿಯ ಸಮಾಜ ಕಲ್ಯಾಣ ಇಲಾಖಾ ವಿದ್ಯಾರ್ಥಿನಿಯರ ವಸತಿ ನಿಲಯದ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್ ಸ್ವಾಗತಿಸಿದರು.






