ಬೀದಿಬದಿ ವ್ಯಾಪಾರಿಗಳಿಗೆ ಸಾಮರ್ಥ್ಯ ಅಭಿವೃದ್ಧಿ ತರಬೇತಿ

ಬೀದಿಬದಿ ವ್ಯಾಪಾರಿಗಳಿಗೆ ಸಾಮರ್ಥ್ಯ ಅಭಿವೃದ್ಧಿ ತರಬೇತಿ
Facebook
Twitter
LinkedIn
WhatsApp

ಬೆಳ್ತಂಗಡಿ: ಪಟ್ಟಣ ಪಂಚಾಯತ್ ಬೆಳ್ತಂಗಡಿ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ ವತಿಯಿಂದ ದೀನದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ನಗರ ಬೀದಿ ವ್ಯಾಪಾರಿಗಳ ಬೆಂಬಲ ಉಪ ಘಟಕದಡಿ ಬೀದಿ ಬದಿ ವ್ಯಾಪಾರಿಗಳಿಗೆ 2 ದಿನಗಳ ಸಾಮರ್ಥ್ಯ ಅಭಿವೃದ್ದಿ ತರಬೇತಿ ಕಾರ್ಯಾಗಾರವು ಬೆಳ್ತಂಗಡಿ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಜುಲೈ 6ರಂದು ಆರಂಭಗೊಂಡಿತು. ಬೆಳ್ತಂಗಡಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಾಗಾರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಇವರು ಬೀದಿ ಬದಿ ವ್ಯಾಪಾರಿಗಳು ಸ್ವಚ್ಚತೆಯನ್ನು ಕಾಪಾಡಿಕೊಂಡು ವ್ಯಾಪಾರವನ್ನು ಮಾಡಿ; ನಿಷೇಧಿತ ಪ್ಲಾಸ್ಟಿಕ್ ಬಳಕೆಯನ್ನು ಒಂದು ವಾರದೊಳಗಾಗಿ ಸಂಪೂರ್ಣವಾಗಿ ತ್ಯಜಿಸಿ ಪರ್ಯಾಯ ವ್ಯವಸ್ಥೆಯನ್ನು ರೂಡಿಸಿಕೊಳ್ಳುವಂತೆ ಕರೆ ನೀಡಿದರು.ಪಟ್ಟಣ ಪಂಚಾಯತ್ ವ್ಯಾಪಾರ ಸಮಿತಿಯ ಅದ್ಯಕ್ಷರು ಹಾಗೂ ಬೆಳ್ತಂಗಡಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ರಾಜೇಶ್ ಕೆ. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಡೇ-ನಲ್ಮ್ ಯೋಜನೆಯ ಜಿಲ್ಲಾ ಅಭಿಯಾನ ವ್ಯವಸ್ಥಾಪಕರಾಗಿರುವ ಐರಿನ್ ರೆಬೆಲ್ಲೊ; ಡೇ-ನಲ್ಮ್ ಯೋಜನೆಯ ಹಿನ್ನೆಲೆ, ಉಪಘಟಕಗಳು, ಸ್ವಉದ್ಯೋಗ ಕಾರ್ಯಕ್ರಮ, ಪಿಎಮ್ ಸ್ವನಿಧಿ ಯೋಜನೆ, ಪಿಎಮ್ ಎಫ್‌ಎಂಇ ಯೋಜನೆ ಹಾಗೂ ಬೀದಿಬದಿ ವ್ಯಾಪಾರಿಗಳ ಜಂಟಿ ಹೊಣೆಗಾರಿಕಾ ಸಂಘ ರಚನೆ ಹಾಗೂ ನಿರ್ವಹಣೆ ಕುರಿತಾಗಿ ತರಬೇತಿ ನೀಡಿದರು. ಇನ್ನೂರ್ವ ಸಂಪನ್ಮೂಲ ವ್ಯಕ್ತಿ ಕೆನರಾ ಬ್ಯಾಂಕ್ ಪ್ರವರ್ತಿತ ಅಮೂಲ್ಯ ಆರ್ಥಿಕ ಸಂಪನ್ಮೂಲ ಕೇಂದ್ರದ ಸಮಾಲೋಚಕಿ ಉಷಾ ನಾಯಕ್ ಇವರು ಬ್ಯಾಂಕಿಂಗ್ ಸೇವೆ, ಸಾಮಾಜಿಕ ಸುರಕ್ಷಾ ಯೋಜನೆಗಳ ಕುರಿತಾಗಿ ಮಾಹಿತಿ ನೀಡಿದರು. ಬೆಳ್ತಂಗಡಿ ಪಟ್ಟಣ ಪಂಚಾಯತ್‌ನ ಸ್ಥಾಯಿ ಸಮಿತಿ ಅದ್ಯಕ್ಷ ಲೋಕೇಶ್, ಎಂಜಿನಿಯರ್ ಮಹಾವೀರ ಅರಿಗ ಮುಖ್ಯ ಅತಿಥಿಗಳಾಗಿದ್ದರು.ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿ ಸಂತೋಷ್ ಕಾರ್ಯಕ್ರಮ ನಿರೂಪಣೆ ಮಾಡಿದರು. ನೆರೆದಿದ್ದ ಅತಿಥಿ ಅಭ್ಯಾಗತರಿಗೆ ಮೇಟಿಲ್ಡಾ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.

Latest News

Related Posts