ಬೆಳ್ತಂಗಡಿ: ಲಾಯ್ಲದ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಇದರ ರಜತವರ್ಷದ ವಾರ್ಷಿಕೋತ್ಸವ, ಮಹಾಸಭೆ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭವು ಜುಲೈ 17ರಂದು ಲಾಯ್ಲ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಸಭಾಭವನದಲ್ಲಿ ಸಂಘದ ಅಧ್ಯಕ್ಷ ರಾಧಾಕೃಷ್ಣ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸುಮಾರು 150 ಸದಸ್ಯರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಮಕ್ಕಳಿಂದ 60ವರ್ಷದ ವಯಸ್ಕರವರೆಗೆ ಎಲ್ಲರಿಗೂ ವಿವಿಧ ರೀತಿಯ ಒಳಾಂಗಣ ಕ್ರೀಡೆಗಳು ಕ್ರೀಡಾ ಸಂಚಾಲಕ ದಿನೇಶ್ ಕುಮಾರ್ ರವರ ಮುಂದಾಳುತ್ವದಲ್ಲಿ ನಡೆಯಿತು. ಸಭಾದ ಉಪಾಧ್ಯಕ್ಷ ವಸಂತ್ ಭಟ್ ದಂಪತಿಗಳು ಕ್ರೀಡಾಕೂಟ ಉದ್ಘಾಟಿಸಿದರು. ಮಧ್ಯಾಹ್ನ ವಾರ್ಷಿಕೋತ್ಸವ ಹಾಗೂ ಮಹಾಸಭೆಯು ಸಭಾದ ಅಧ್ಯಕ್ಷರಾದ ಪಿ. ರಾಧಾಕೃಷ್ಣ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನಡೆಯಿತು. ಮುಖ್ಯ ಅತಿಥಿಗಳಾಗಿ ಕಾರ್ಕಳ ಶಂಕರ ಪ್ರತಿಷ್ಠಾನದ ಅಧ್ಯಕ್ಷ ಕೇಶವ ರಾವ್ ಭಾಗವಹಿಸಿದ್ದರು. 2021-22ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾದ ಸಮಾಜದ ವಿದ್ಯಾರ್ಥಿಗಳಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಪುರಸ್ಕರಿಸಿ ಅವರಿಗೆ ಉಜ್ವಲ ಭವಿಷ್ಯ ಹಾರೈಸಲಾಯಿತು.ತಾಲೂಕಿನ ಸಮಾಜದ 24 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಟ್ಟು ರೂಪಾಯಿ 2,50,000/- ವಿದ್ಯಾರ್ಥಿ ಪ್ರೋತ್ಸಾಹ ನಿಧಿಯನ್ನು ವಿತರಿಸಲಾಯಿತು.ಮುಖ್ಯ ಅತಿಥಿ ಕೇಶವ ರಾವ್ ಮಾತನಾಡಿ, ಬೆಳ್ತಂಗಡಿ ಸಂಘವು ಸಮಾಜದ ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸುವುದ ರೊಂದಿಗೆ, ಸಮಾಜದ ದೇವಸ್ಥಾನಗಳಿಗೆ ಕೂಡಾ ಆರ್ಥಿಕ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು.ಅಧ್ಯಕ್ಷ ರಾಧಾಕೃಷ್ಣ ರಾವ್ ಮಾತನಾಡಿ, ರಜತ ಮಹೋತ್ಸವದ ಈ ವರ್ಷದಲ್ಲಿ ತಿಂಗಳಿಗೊಂದು ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ವಿಪ್ರ ಭಜನಾಸಾಮ್ರಾಟ್, 6 ದೇವಸ್ಥಾನಗಳಿಗೆ ತಲಾ 80ಲೀ ದೀಪದ ಎಣ್ಣೆ ಹಾಗೂ ಒಂದು ಕ್ವಿಂಟಾಲ್ ಅಕ್ಕಿ ವಿತರಣೆ, ತ್ರಿಕಾಲ ಪೂಜೆ, ಮೂರು ಮುತ್ತುಗಳು ಎಂಬ ಹಾಸ್ಯಮಯ ನಾಟಕ, ಡಿಜಿಟಲ್ ಪತ್ರಿಕೆ, ಸಭಾದ ಅಂಗಳಕ್ಕೆ ಇಂಟರ್ಲಾಕ್ ಅಳವಡಿಕೆ, ಸಭಾಭವನದ ವಿಸ್ತರಣೆ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಈ ವರ್ಷ ಪೂರೈಸಲಾಗಿದೆ. ಇವೆಲ್ಲಾ ಕಾರ್ಯಕ್ರಮಗಳಿಗೆ ಸಹಕಾರ ನೀಡಿದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.ವೇದಿಕೆಯಲ್ಲಿ ಕಾರ್ಯದರ್ಶಿ ಶ ರೇಖಾ, ಮಹಿಳಾ ಅಧ್ಯಕ್ಷೆ ಹೇಮಲತಾ, ಯುವ ವೇದಿಕೆ ಅಧ್ಯಕ್ಷರಾದ ಪವನ್ ಕುಮಾರ್, ಮಹಿಳಾ ವೇದಿಕೆಯ ಗೌರವಾಧ್ಯಕ್ಷೆ ಶಾಂತಾ ಸುರೇಶ್, ಆರ್ಥಿಕ ಸಮಿತಿ ಸಂಚಾಲಕ ಪಿ. ಲಕ್ಷ್ಮೀನಾರಾಯಣ ರಾವ್, ಸಾಂಸ್ಕೃತಿಕ ಸಮಿತಿಯ ಸಂಚಾಲಕ ಬಿ.ಕೆ. ಧನಂಜಯ ರಾವ್, ಧಾರ್ಮಿಕ ಸಮಿತಿ ಸಂಚಾಲಕ ಎಂ.ಎಸ್. ಅರುಣ್ ಕುಮಾರ್, ಕ್ರೀಡಾ ಸಂಚಾಲಕರಾದ ದಿನೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ನಿಶಾ, ಶುಭಾ, ರೂಪಾ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಬಿ.ಕೆ. ಧನಂಜಯ ರಾವ್ ಸ್ವಾಗತಿಸಿದರು. ಪವನ್ ರಾವ್ ವಂದಿಸಿದರು.






