ಬೆಳ್ತಂಗಡಿ ಪ.ಪಂ ಅಭಿವೃದ್ಧಿ ಚರ್ಚೆಗೆ ಶಾಸಕರ ನೇತೃತ್ವದ ಸಭೆ’ಜೂನಿಯರ್ ಕಾಲೇಜು ಬಳಿಯ ಅನೈತಿಕ ಚಟುವಟಿಕೆಗೆ ಕಡಿವಾಣ ಹಾಕಿ’

ಬೆಳ್ತಂಗಡಿ ಪ.ಪಂ ಅಭಿವೃದ್ಧಿ ಚರ್ಚೆಗೆ ಶಾಸಕರ ನೇತೃತ್ವದ ಸಭೆ’ಜೂನಿಯರ್ ಕಾಲೇಜು ಬಳಿಯ ಅನೈತಿಕ ಚಟುವಟಿಕೆಗೆ ಕಡಿವಾಣ ಹಾಕಿ’
Facebook
Twitter
LinkedIn
WhatsApp

ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸರಕಾರಿ ಜೂನಿಯರ್ ಕಾಲೇಜು ಬಳಿ ರಾತ್ರಿ ಹೊತ್ತು ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಈ ಬಗ್ಗೆ ರಾತ್ರಿ ಹೊತ್ತು ಗಸ್ತು ಹೆಚ್ಚಿಸಬೇಕು ಎಂದು ಶಾಸಕ ಹರೀಶ್ ಪೂಂಜಾ ಪೋಲೀಸ್ ಇಲಾಖೆಗೆ ಸೂಚಿಸಿದರು.ಅವರು ಜುಲೈ 26ರಂದು ಬೆಳ್ತಂಗಡಿ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ನಗರ ಅಭಿವೃದ್ಧಿಯ ದೃಷ್ಠಿಯಲ್ಲಿ ಅಧಿಕಾರಿಗಳ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಗರ ಅಭಿವೃದ್ಧಿ ಕುರಿತು ಸಮಾಲೋಚನೆ ನಡೆಸುತ್ತಿದ್ದರು. ಪಟ್ಟಣದಲ್ಲಿ ಮೂಡ ಸಮಸ್ಯೆಯಿಂದ ಬಾಕಿ ವಿಲೇವಾರಿ ಅರ್ಜಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಇದಕ್ಕೆ ಅಧಿಕಾರಿಗಳು ಉತ್ತರಿಸಿ ವಿವಿಧ ಕಾರಣಗಳಿಂದ 43 ಅರ್ಜಿಗಳು ಬಾಕಿ ಇದ್ದು ಇದಕ್ಕಾಗಿ ವಿಶೇಷ ವರದಿ ತಯಾರಿಸಿ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಸರಕಾರದ ಆದೇಶ ಬಂದ ತಕ್ಷಣ ಪರಿಹರಿಸಲಾಗುವುದು ಎಂದು ತಿಳಿಸಿದರು. ಈ ಬಗ್ಗೆ ಸರಕಾರದಿಂದ ಆಗಬೇಕಾದ ಕ್ರಮಗಳ ಬಗ್ಗೆ ಸಂಬಂಧಪಟ್ಟ ಸಚಿವರ ಗಮನಕ್ಕೆ ತರಲಾಗುವುದು ಎಂದು ಶಾಸಕ ಹರೀಶ್ ಪೂಂಜಾ ತಿಳಿಸಿದರು. ನಗರದಲ್ಲಿ ರಾತ್ರಿ ಪಾಳಿಯಲ್ಲಿ ಲೈನ್‌ಮ್ಯಾನ್‌ಗಳು ಕರ್ತವ್ಯ ನಿರ್ವಹಿಸದ ಬಗ್ಗೆ ಸಾರ್ವಜನಿಕರ ದೂರು ಇದ್ದು ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ಬಗ್ಗೆ ಅಧಿಕಾರಿಗಳು ಉತ್ತರಿಸಿ ನಾಲ್ಕು ಲೈನ್‌ಮ್ಯಾನ್‌ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದಾಗ ಶಾಸಕ ಹರೀಶ್ ಪೂಂಜಾ ಮಧ್ಯ ಪ್ರವೇಶಿಸಿ, ರಾತ್ರಿ ಪಾಳಿಯಲ್ಲಿ ಲೈನ್‌ಮ್ಯಾನ್‌ಗಳು ಕರ್ತವ್ಯ ನಿರ್ವಹಿಸಬೇಕು. ಹೆಚ್ಚುವರಿ ಲೈನ್‌ಮ್ಯಾನ್‌ಗಳ ಬೇಡಿಕೆಗೆ ತಕ್ಷಣ ಪ್ರಸ್ತಾವಣೆ ನೀಡಬೇಕು. ಈ ಬಗ್ಗೆ ಸಂಬಂಧಪಟ್ಟ ಸಚಿವರ ಗಮನಕ್ಕೆ ತರುತ್ತೇನೆ. ಅಲ್ಲದೆ ನಗರದಲ್ಲಿ ವಿದ್ಯುತ್ ತಂತಿಗಳ ಮೇಲೆ ಅಪಾಯಕಾರಿ ಮರಗಳಿದ್ದು, ಇದರ ಕೊಂಬೆಗಳನ್ನು ಕತ್ತರಿಸುವ ಕೆಲಸ ತಕ್ಷಣ ಹತ್ತುದಿನಗಳೊಳಗೆ ಮಾಡಬೇಕು. ಹೆಚ್ಚುವರಿ ಸಿಬಂದಿಗಳನ್ನು ಬೇರೆ ತಾಲೂಕಿನಿಂದ ತರಿಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಬಹುವರ್ಷಗಳ ಕಾಲದ ಬೇಡಿಕೆಯಾಗಿ ನಗರಕ್ಕೆ ಹೊಸ ಫೀಡರ್ ಮಂಜೂರಾಗಿದ್ದು ಸೆಪ್ಟೆಂಬರ್ ಒಳಗೆ ಈ ಕಾಮಗಾರಿ ಮುಗಿಸಿ ಸಾರ್ವಜನಿಕರಿಗೆ ಉಪಯೋಗವಾಗುವ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ನಗರದ ಕೆಲವು ಭಾಗಗಳಲ್ಲಿ ಅಪಾಯಕಾರಿ ಮರಗಳಿದ್ದು ಇದರಿಂದ ಸಾರ್ವಜನಿಕರಿಗೆ ಹಾಗೂ ಕಟ್ಟಡಗಳಿಗೆ ಹಾನಿಯಾಗುವ ಲಕ್ಷಣಗಳಿದ್ದು ಈ ಬಗ್ಗೆ ತಕ್ಷಣ ಸರ್ವೆ ಕಾರ್ಯ ನಡೆಸಿ ಮೇಲಾಧಿಕಾರಿಗಳಿಗೆ ಪ್ರಸ್ತಾವಣೆ ಸಲ್ಲಿಸಿ ಪರವಾನಿಗೆ ಪಡೆದು ತೆರವುಗೊಳಿಸಬೇಕು ಎಂದು ಅರಣ್ಯಾಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಸರಕಾರಿ ಆಸ್ಪತ್ರೆಯ ರಸ್ತೆಯಲ್ಲಿ ವಾಹನಗಳು ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡುತ್ತಿರುವ ಕಾರಣ ಅಂಬುಲೆನ್ಸ್ ಹೋಗಲು ತೊಂದರೆಯಾಗುತ್ತಿದೆ. ಈ ಬಗ್ಗೆ ತಕ್ಷಣ ಕ್ರಮಕೈಗೊಳ್ಳಬೇಕು; ಮತ್ತು ಅಯ್ಯಪ್ಪ ಗುಡಿ ಬಳಿಯೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಶಾಸಕ ಹರೀಶ್ ಪೂಂಜ ಪೊಲೀಸರಿಗೆ ಸೂಚಿಸಿದರು. ಇದಕ್ಕೆ ಸದಸ್ಯ ಜಗದೀಶ್ ಧ್ವನಿಗೂಡಿಸಿ ನಗರದಲ್ಲಿ ಖಾಸಗಿ ಬಸ್‌ಗಳು ಕರ್ಕಶ ಹಾರ್ನ್‌ಗಳನ್ನು ಬಳಸುತ್ತಿದ್ದು ಇದರಿಂದ ತೊಂದರೆಯಾಗುತ್ತಿದೆ. ಅಲ್ಲದೆ ಅತಿಯಾದ ವೇಗದಲ್ಲಿ ವಾಹನ ಚಲಾಯಿಸುತ್ತಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದರು. ಇದಕ್ಕೆ ಶಾಸಕ ಹರೀಶ್ ಪೂಂಜಾ ಸಂಚಾರಿ ಪೋಲೀಸ್ ಹಾಗೂ ಪೋಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಕ್ರಮಕೈಗೊಳ್ಳಲು ಸೂಚಿಸಿದರು.ನಗರದಲ್ಲಿ ಸುಸಜ್ಜಿತ ಪಾರ್ಕ್ ನಿರ್ಮಾಣವಾಗುತ್ತಿದ್ದು ಇದಕ್ಕಾಗಿ ಹೆಚ್ಚುವರಿ 50ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು, ಇದರಲ್ಲಿ ಇನ್ನಷ್ಟು ಅಭಿವೃದ್ಧಿಗೊಳಿಸಿ ಸುಮಾರು 25 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಪಾರ್ಕ್ ನಿರ್ಮಾಣಗೊಳ್ಳಲಿದ್ದು ಶೀಘ್ರದಲ್ಲೇ ಸಾರ್ವಜನಿಕರ ಬಳಕೆಗಾಗಿ ಲೋಕಾರ್ಪಣೆ ಗೊಳಿಸಲಲಾಗುವುದು ಎಂದು ಪೂಂಜ ತಿಳಿಸಿದರು.ನಗರದ ನಿವಾಸಿಗರ ಮೂಲಸೌಕರ್ಯಕ್ಕೆ ಪ್ರಥಮ ಆದ್ಯತೆ ನೀಡುತ್ತಿದ್ದು, ನಗರದಲ್ಲಿ ಕಲುಷಿತ ನೀರು ಶುದ್ಧೀಕರಣ ಕಾಮಗಾರಿಗೆ 10 ಕೋಟಿ ರೂಪಾಯಿ ಮಂಜೂರಾಗಿದ್ದು, ಸಣ್ಣ ನಗರಕ್ಕೆ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಇಷ್ಟೊಂದು ಅನುದಾನ ಬಿಡುಗಡೆಯಾಗಿ ಕಾಮಗಾರಿ ಪ್ರಾರಂಭವಾಗಿದ್ದು ಕಾಮಗಾರಿಯನ್ನು ಚುರುಕುಗೊಳಿಸಿ ಆದಷ್ಟು ಬೇಗ ಮುಗಿಸಬೇಕು ಎಂದು ಸಂಬಂಧಪಟ್ಟ ಇಂಜಿನಿಯರ್‌ಗಳಿಗೆ ಶಾಸಕರು ಸೂಚಿಸಿದರು. ಕೆಆರ್‌ಡಿಎಲ್ ಯೋಜನೆಯಡಿ ಮಂಜೂರಾದ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಲ್ಲಿ ಶಾಸಕ ಪೂಂಜಾ ಮಾಹಿತಿ ಪಡೆದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು 33 ಕಾಮಗಾರಿಗಳು ಮಂಜೂರಾಗಿದ್ದು 19 ಕಾಮಗಾರಿಗಳು ಪೂರ್ಣಗೊಂಡಿದೆ. 7 ಕಾಮಗಾರಿಗಳು ಪ್ರಗತಿಯಲ್ಲಿದ್ದು 2 ಕಾಮಗಾರಿಗಳು ಪ್ರಾರಂಭಿಸಬೇಕಾಗಿದೆ ಎಂದರು. ಇದಕ್ಕೆ ಪೂಂಜಾ ಪ್ರತಿಕ್ರಿಯಿಸಿ, ಈಗಾಗಲೇ ಕೆಲವು ಕಾಮಗಾರಿಗಳನ್ನು ಅಗತ್ಯವಿರುವ ಕಡೆಗೆ ವರ್ಗಾಯಿಸಿ ಸರಕಾರದಿಂದ ಅನುಮೋದನೆ ಪಡೆದು ಕಾಮಗಾರಿ ನಡೆಸಲಾಗಿದೆ, ಎಲ್ಲಾ ಸದಸ್ಯರುಗಳು ತಮ್ಮ ವಾರ್ಡ್‌ಗಳಲ್ಲಿರುವ ಬೇಡಿಕೆಗಳಿಗೆ ಪ್ರಸ್ತಾವನೆ ಸಲ್ಲಿಸಬೇಕು ಹೆಚ್ಚುವರಿಯಾಗಿ 2ಕೋಟಿ ರೂಪಾಯಿ ಮಂಜೂರಾಗಿದ್ದು ಇದರಲ್ಲಿ ಆದ್ಯತೆ ನೆಲೆಯಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು ಎಂದರು. ಕಲ್ಲಗುಡ್ಡೆ ಬಳಿ ನಿವೇಶನಕ್ಕಾಗಿ ಕಾಮಗಾರಿ ನಡೆಯುತ್ತಿದ್ದು ಇದರ ಕಾಮಗಾರಿಯನ್ನು ಆಗಸ್ಟ್ 15ರೊಳಗೆ ಮುಗಿಸಬೇಕು ಎಂದು ಅಧಿಕಾರಿಗಳೀಗೆ ಸೂಚಿಸಿದರು. ಆಗಸ್ಟ್ 15ಕ್ಕೆ ಆಯ್ದ 36 ಕುಟುಂಬಗಳಿಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ವಿವಿಧ ಅಗತ್ಯ ಕಾರ್ಯಗಳಿಗಾಗಿ ನಗರಕ್ಕೆ ಸಾವಿರಾರು ಮಂದಿ ಬರುತ್ತಿದ್ದು ಇವರ ಬೇಡಿಕೆಗಳನ್ನು ಈಡೇರಿಸಲು ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು. ಈಗಾಗಲೇ ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ ರಸ್ತೆ ಅಭಿವೃದ್ಧಿಗೆ 718ಕೋಟಿ ರೂಪಾಯಿ ಮಂಜೂರಾಗಿದ್ದು ಕೆಲವೇ ಸಮಯದಲ್ಲಿ ಕಾಮಗಾರಿಗೆ ಚಾಲನೆಗೊಳ್ಳಲಿದೆ. ಅಲ್ಲದೆ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣಗೊಳ್ಳಲಿದ್ದು ಕೆಲವೇ ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಶಿಲಾನ್ಯಾಸ ನೆರವೇರಲಿದೆ. ಸುಸಜ್ಜಿತ ಗ್ರಂಥಾಲಯ ನಿರ್ಮಾಣಗೊಳ್ಳುತ್ತಿದೆ. ಪ್ರವಾಸಿ ಬಂಗಲೆಯ ಕಾಮಗಾರಿ ಪೂರ್ಣಗೊಳ್ಳುತ್ತಿದೆ, ಸಮುದಾಯ ಆಸ್ಪತ್ರೆಯ ಬಳಿ ಸುಸಜ್ಜಿತ ಶವಗಾರಕ್ಕೆ ಪ್ರಸ್ತಾವಣೆ ಸಲ್ಲಿಸಿದ್ದು ಮಂಜೂರಾತಿ ಹಂತದಲ್ಲಿದೆ, ವೈದ್ಯರ ಹಾಗೂ ದಾದಿಯರಿಗೆ ಸುಸಜ್ಜಿತ ವಸತಿಗೃಹ ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದ್ದು ವಿವಿಧ ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯಲು ಅಧಿಕಾರಿಗಳ ಸ್ಪಂದನೆ ಅಗತ್ಯ ಎಂದು ಅಧಿಕಾರಿಗಳಿಗೆ ಶಾಸಕ ಹರೀಶ್ ಪೂಂಜ ಸೂಚಿಸಿದರು. ಸಭೆಯಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್, ಪೊಲೀಸ್ ಇನ್‌ಸ್ಪೆಕ್ಟರ್ ಶಿವಕುಮಾರ್, ಸಬ್ ಇನ್ಸ್‌ಪೆಕ್ಟರ್ ನಂದಕುಮಾರ್, ವಲಯಾರಣ್ಯಾಧಿಕಾರಿ ತ್ಯಾಗರಾಜ್, ಸಹಾಯಕ ಕೃಷಿನಿರ್ದೇಶಕ ರಂಜಿತ್ ಟಿ.ಎನ್‌., ಮೆಸ್ಕಾಂ ಕಿರಿಯ ಸಹಾಯಕ ಇಂಜಿನಿಯರ್ ಮಧುಬಾಬು, ಕೆಆರ್‌ಡಿಎಲ್ ಅಸಿಸ್ಟೆಂಟ್ ಇಂಜಿನಿಯರ್ ಸದಾಶಿವ, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖಾಧಿಕಾರಿ ಉಬೈದುಲ್ಲಾ, ಸಂಚಾರಿ ಠಾಣಾ ಸಬ್ ಇನ್ಸ್‌ಪೆಕ್ಟರ್ ಓಡಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.

Latest 5

Related Posts