ಬೆಳ್ತಂಗಡಿ: ಆಗಸ್ಟ್ 6ರ ಸೋಮವಾರ ಸುರಿದ ಭಾರೀ ಗಾಳಿಮಳೆಗೆ ಬೆಳ್ತಂಗಡಿ ತಾಲೂಕಿನ ಹಲವೆಡೆ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದರೆ; ನದಿ ನೀರು ಉಕ್ಕಿ ಹರಿದು ತಗ್ಗು ಪ್ರದೇಶಗಳಿಗೆ ರಭಸದಿಂದ ನುಗ್ಗಿದ ಪರಿಣಾಮ ನೀರು ಕೃಷಿ ತೋಟಗಳಿಗೆ ನುಗ್ಗಿ ಸಾಕಷ್ಟು ಕೃಷಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ.ಆಗಸ್ಟ್ 8ರ ಸೋಮವಾರ ನಸುಕಿನಿಂದಲೇ ಸುರಿದ ಭಾರೀ ಮಳೆಗೆ ಮಲವಂತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ದಿಡುಪೆಯಿಂದ ಎಳನೀರುಗೆ ಸಂಪರ್ಕಿಸುವ ರಸ್ತೆಯಲ್ಲಿ ಗುಡ್ಡದಿಂದ ಮಳೆನೀರು ರಭಸವಾಗಿ ಹರಿದ ಪರಿಣಾಮ ರಸ್ತೆ ಸಂಚಾರವೇ ಕಡಿತಗೊಂಡು ಪರಿಸರದ ನಿವಾಸಿಗರಲ್ಲಿ ಆತಂಕ ಸೃಷ್ಟಿಸಿತ್ತು. ಸುದೈವವಶಾತ್ ಹೆಚ್ಚಿನ ಅನಾಹುತ ಸಂಭವಿಸಲಿಲ್ಲ.ನೆರಿಯ ಗ್ರಾಮದ ಅಣಿಯೂರು ಹೊಳೆಯಲ್ಲಿ ಹರಿದ ಭಾರೀ ಮಳೆಗೆ ಅಣಿಯೂರು-ಕಾಟಾಜೆ-ಪರ್ಪಳ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು ಸಂಚಾರ ದುಸ್ತರವಾಗಿತ್ತು. ನೇತ್ರಾವತಿ ಹಾಗೂ ಮೃತ್ಯುಂಜಯ ಸಹಿತ ತಾಲೂಕಿನ ಇತರ ಉಪನದಿಗಳು ಹೆಚ್ಚಿದ ಮಳೆನೀರಿನ ಪರಿಣಾಮ ಉಕ್ಕಿ ಹರಿಯುತ್ತಿದ್ದು ಜನತೆಯಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದೆ.ಮುಂಡಾಜೆ ಗ್ರಾಮದ ಕಾಯರ್ತೋಡಿ ಎಂಬಲ್ಲಿ ನರಸಿಂಹ ಪ್ರಭು ಎಂಬವರ ತೋಟಕ್ಕೆ ನುಗ್ಗಿದ ನೇತ್ರಾವತಿ ನದಿ ನೀರು ಪಂಪ್ಶೆಡ್ನ್ನು ಜಲಾವೃತವಾಗಿಸಿದೆ. ಅಧಿಕ ಮಳೆಯ ಪರಿಣಾಮ ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಕೆಎಸ್ಆರ್ಟಿಸಿ ಬಸ್ ದಾರಿ ಕಾಣದೇ ಚಾಲಕನ ನಿಯಂತ್ರಣ ತಪ್ಪಿ, ಪಟ್ರಮೆಯ ಕೋಡಿಮಜಲು ಎಂಬಲ್ಲಿ ನೂತನವಾಗಿ ನಿರ್ಮಿಸಿದ ರಸ್ತೆ ಬದಿಯ ತಡೆಗೋಡೆಗೆ ತಾಗಿ ತಡೆಗೋಡೆ ಜಖಂಗೊಂಡಿತ್ತು. ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ. ಇನ್ನು ನೆರಿಯ ಗ್ರಾಮದ ಗಂಡಿಬಾಗಿಲು ನೆರಿಯಕಾಡು ನಿವಾಸಿ ಜೋಸೆಫ್ ಮೇನಾಚೇರಿಯವರ ಮನೆಯ ಚಾವಡಿ ಗೋಡೆ ಕುಸಿದ ಬಗ್ಗೆ ವರದಿಯಾಗಿದೆ. ಭಾರೀ ಮಳೆಯಿಂದ ತಾಲೂಕಿನಲ್ಲಿ ಲಕ್ಷಾಂತರ ರೂಪಾಯಿಗಳ ಕೃಷಿಹಾನಿ, ಬೆಳೆಹಾನಿ ಹಾಗೂ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದ್ದು; ಕಂದಾಯ ಇಲಾಖೆಯ ಪರಿಶೀಲನೆಯ ಬಳಿಕ ಮಳೆಹಾನಿಯ ಬಗ್ಗೆ ನಿಖರ ಮಾಹಿತಿ ದೊರೆಯಲಿದೆ.






