ಮೂಡುಬಿದಿರೆ: ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್ 2.0 ಯೋಜನೆಯ ಸ್ವಚ್ಛ ಸರ್ವೇಕ್ಷಣೆ 2022-23ನೇ ಸಾಲಿಗೆ 9 ಸ್ವಚ್ಛತಾ ರಾಯಭಾರಿಗಳನ್ನು ನೇಮಕ ಮಾಡಲಾಗಿದ್ದು, ಅವರಿಗೆ ಘನತ್ಯಾಜ್ಯ ನಿರ್ವಹಣೆ ಮತ್ತು ಘನತ್ಯಾಜ್ಯ ಕಡಿಮೆಗೊಳಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಾಗಿ ಆಗಸ್ಟ್ 9ರಂದು ಪುರಸಭೆ ಸಭಾಂಗಣದಲ್ಲಿ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ಬೆಂಗಳೂರು ವೇದನ್ ಟ್ರಸ್ಟ್ ಸಂಸ್ಥೆಯ ಸ್ವಯಂಸೇವಕಿ ಸುಹಾಸಿನಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಅಗತ್ಯ ಮಾಹಿತಿ ನೀಡಿದರು. ಈ ಕಾರ್ಯಾಗಾರದಲ್ಲಿ ಪುರಸಭೆಯ ಸ್ವಚ್ಛತಾ ರಾಯಭಾರಿಗಳಾಗಿರುವ ವಿದ್ಯಾರ್ಥಿ ಪ್ರಜ್ವಲ್ ಪಿ. ಶೆಣೈ, ಸಂಧ್ಯಾ, ನೇತಾಜಿ ಬ್ರಿಗೇಡ್ ನ ರಾಹುಲ್ ಕುಲಾಲ್, ಮೋಹನ ಹೊಸ್ಮಾರು, ಕಾಳಿಕಾಂಬಾ ದೇವಸ್ಥಾನ ಬಳಿಯ ನಿವಾಸಿ ಗೋಪಾಲ ಎಂ. ಮೊಯ್ಲಿ, ಶಾಲಿಮಾರ್ ಸಭಾಂಗಣದ ಅಬ್ಬಾಸ್, ಸಾಥ್ವಿಕ್ ಎನ್‌ಕ್ಲೇವ್ ನಿವಾಸಿ ವಿನೆಟ್ ಭಾಗವಹಿಸಿದ್ದರು. ಈ ಕಾರ್ಯಾಗಾರದಲ್ಲಿ ಸ್ವಚ್ಛತಾ ವಿಚಾರದಲ್ಲಿ ಪುರಸಭೆಯು ಸಾಗಬೇಕಾದ ಸುದೀರ್ಘ ಹಾದಿಯನ್ನು ವಿಸ್ತೃತವಾಗಿ ವಿವರಿಸಿ, ಪ್ರತಿಯೊಬ್ಬ ಸ್ವಚ್ಚತಾ ರಾಯಭಾರಿಗೆ ಅವರವರ ನೈಪುಣ್ಯತೆಗೆ ಅನುಸಾರವಾಗಿ ಒಂದೊಂದು ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ಮನವಿ ಮಾಡಲಾಯಿತು. ಎಲ್ಲರೂ ತಮ್ಮ ಅವಧಿಯನ್ನು ಸ್ವಯಂಸೇವಕರಾಗಿ ಈ ಕಾರ್ಯಕ್ಕೆ ವಿನಿಯೋಗಿಸುವ ಭರವಸೆ ನೀಡಿದ್ದಾರೆಂದು ಪುರಸಭೆಯ ಪರಿಸರ ಅಭಿಯಂತರರಾದ ಶಿಲ್ಪಾ ಎಸ್. ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಈಗ ನೇಮಕಗೊಂಡಿರುವ ಸ್ವಚ್ಛತಾ ರಾಯಭಾರಿಗಳು ಘನತ್ಯಾಜ್ಯ ನಿರ್ವಹಣೆ ಮತ್ತು ಕಡಿಮೆಗೊಳಿಸುವಿಕೆ, ಏಕಬಳಕೆ ಪ್ಲಾಸ್ಟಿಕ್ ನಿಷೇಧ, ಹಸಿಕಸದಿಂದ ಗೊಬ್ಬರ ತಯಾರಿಕೆ ಮುಂತಾದ ವಿಚಾರಗಳ ಬಗ್ಗೆ ಜನಜಾಗೃತಿ ಮೂಡಿಸುವ ವಿಶೇಷ ನೈಪುಣ್ಯತೆಯನ್ನು ಹೊಂದಿದ್ದು 2023ರ ಒಳಗೆ ಪುರಸಭೆಯು ತಲುಪಬೇಕಾದ ಗುರಿಯನ್ನು ರೂಪಿಸಲಾಗಿದ್ದು, ಸಾರ್ವಜನಿಕರು ಅವರಿಗೆ ಪೂರ್ಣ ಸಹಕಾರ ನೀಡಿ ಸ್ವಚ್ಛ ಮೂಡುಬಿದಿರೆಯ ನಿರ್ಮಾಣಕ್ಕೆ ಪಣ ತೊಟ್ಟಿರುವ ಪುರಸಭಾಡಳಿತದ ಸಂಕಲ್ಪವನ್ನು ಯಶಸ್ವಿಗೊಳಿಸಬೇಕಾಗಿ ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.






