ಮೂಡುಬಿದಿರೆ: ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಮನೆಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸುವ ಸದುದ್ದೇಶಕ್ಕೆ ಪೂರಕವಾಗಿ ಮೂಡುಬಿದಿರೆಯ ಹಿರಿಯ ಉದ್ಯಮಿ ಧನಲಕ್ಷ್ಮಿ ಕ್ಯಾಶ್ಯೂಸ್‌ನ ಮಾಲಕ ಲಯನ್ ಕೆ. ಶ್ರೀಪತಿ ಭಟ್ ಅವರು ಕೊಡುಗೆಯಾಗಿ ನೀಡಿರುವ 500ಕ್ಕೂ ಹೆಚ್ಚು ತ್ರಿವರ್ಣ ಧ್ವಜಗಳನ್ನು ಧನಲಕ್ಷ್ಮಿ ಸಮೂಹ ಉದ್ಯಮದ ಸುಮಾರು 300 ಕಾರ್ಮಿಕರಿಗೆ ಹಾಗೂ ಕಲ್ಲಬೆಟ್ಟು ಸರಕಾರಿ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮೂಡುಬಿದಿರೆ ಲಯನ್ಸ್ ಕ್ಲಬ್ ವತಿಯಿಂದ ಆಗಸ್ಟ್ 12ರಂದು ವಿತರಿಸಲಾಯಿತು.ಈ ಸಂದರ್ಭ ಮಾತನಾಡಿದ ಕೆ. ಶ್ರೀಪತಿ ಭಟ್, ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಹರ್ ಘರ್ ತಿರಂಗಾದ ಮೂಲಕ ಆಚರಿಸುವ ಸದುದ್ದೇಶವನ್ನು ಹೊಂದಿದ್ದು, ಅವರ ಕನಸನ್ನು ನನಸಾಗಿಸಲು ಕಾರ್ಖಾನೆ ಕಾರ್ಮಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಉಚಿತವಾಗಿ ತ್ರಿವರ್ಣ ಧ್ವಜವನ್ನು ವಿತರಿಸಲಾಗುತ್ತಿದೆ. ತ್ಯಾಗ, ಸಮೃದ್ಧಿ, ಶಾಂತಿ ಮತ್ತು ಸತ್ಯದ ಪ್ರತೀಕವಾಗಿರುವ ತ್ರಿವರ್ಣಧ್ವಜವನ್ನು ಧ್ವಜಕ್ಕೆ ಮತ್ತು ದೇಶಕ್ಕೆ ಅಪಮಾನವಾಗದ ರೀತಿಯಲ್ಲಿ ಧ್ವಜವನ್ನು ಆಗಸ್ಟ್ 13 ಮುಂಜಾನೆಯಿಂದ ಆಗಸ್ಟ್ 15 ಸೂರ್ಯಾಸ್ತದವರೆಗೆ ತಮ್ಮ ತಮ್ಮ ಮನೆಮನೆಗಳಲ್ಲಿ ಹಾರಿಸಿ ನಂತರ ಜೋಪಾನವಾಗಿ ತೆಗೆದಿಡುವ ಮೂಲಕ ಈ ಸಂಭ್ರಮಾಚರಣೆಯಲ್ಲಿ ಭಾಗಿಗಳಾಗಬೇಕು ಎಂದು ವಿನಂತಿಸಿದರು.ಶಾಸಕ ಉಮಾನಾಥ ಎ. ಕೋಟ್ಯಾನ್, ಎ.ಪಿ.ಎಂ.ಸಿ. ಅಧ್ಯಕ್ಷ ಕೆ. ಕೃಷ್ಣರಾಜ ಹೆಗ್ಡೆ, ಲಯನ್ಸ್ ಅಧ್ಯಕ್ಷ ದಿನೇಶ್ ಎಂ.ಕೆ., ವಲಯಾಧ್ಯಕ್ಷ ಮೆಲ್ವಿನ್ ಡಿ’ಕೋಸ್ತ, ಪದಾಧಿಕಾರಿಗಳಾದ ಶಿವಪ್ರಸಾದ್ ಹೆಗ್ಡೆ, ಆಲ್ವಿನ್ ಮಿನೇಜಸ್, ಹರೀಶ್ ತಂತ್ರಿ, ಧನಲಕ್ಷ್ಮಿ ಉದ್ಯಮ ಸಮೂಹದ ಆಡಳಿತ ವರ್ಗ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಶಿಕ್ಷಕವೃಂದ, ಪುರಸಭೆ ಉಪಾಧ್ಯಕ್ಷೆ ಸುಜಾತಾ ಶಶಿಧರ್, ಕಲ್ಲಬೆಟ್ಟು ಗಣೇಶ ಸೇವಾ ಟ್ರಸ್ಟ್ ಅಧ್ಯಕ್ಷ ಶಿಕಾರಿಪುರ ಈಶ್ವರ ಭಟ್ ಮತ್ತಿತರರು ಉಪಸ್ಥಿತರಿದ್ದರು.






