ಮುಖಪುಟ ಬೆಳ್ತಂಗಡಿ: ಏಷ್ಯಾ ಖಂಡದಲ್ಲಿ ರಬ್ಬರ್ ಖರೀದಿ, ಮಾರಾಟ ಸಹಿತ ವ್ಯವಹಾರದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ ತನ್ನ ಗ್ರಾಹಕರ ಅನುಕೂಲಕ್ಕಾಗಿ ರಬ್ಬರ್ ಹಾಲನ್ನು (ಲ್ಯಾಟೆಕ್ಸ್) ಸಂಗ್ರಹಿಸುವ ನೂತನ ಯೋಜನೆ ಆರಂಭಿಸಿದ್ದು, ಈ ನೂತನ ಯೋಜನೆಗೆ ಆಗಸ್ಟ್ 22ರಂದು ಚಾಲನೆ ನೀಡಲಾಯಿತು.ಇಂದಿನ ದಿನಗಳಲ್ಲಿ ಕಂಡು ಬರುವ ಕಾರ್ಮಿಕರ ಅಭಾವ, ಯಂತ್ರೋಪಕರಣಗಳ ತೊಂದರೆ ಮೊದಲಾದ ಸಮಸ್ಯೆಗಳಿಂದ ನಿರಾಶರಾಗುತ್ತಿರುವ ರಬ್ಬರ್ ಕೃಷಿಕರಿಗೆ ರಬ್ಬರ್ ಶೀಟುಗಳನ್ನು ಮಾಡಲು ಕಷ್ಟವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕೃಷಿಕರ ಅನುಕೂಲಕ್ಕಾಗಿ ರಬ್ಬರ್ ಹಾಲು ಖರೀದಿ ಯೋಜನೆಯನ್ನು ಆರಂಭಿಸಲಾಗಿದೆ. ತನ್ನ ಸದಸ್ಯರ ಮನೆ ಬಾಗಿಲಿಗೆ ವಾಹನ ಕಳಿಸಿ ಹಾಲು ಸಂಗ್ರಹಕ್ಕೆ ಬೇಕಾದ ಡ್ರಮ್, ರಾಸಾಯನಿಕ ಇತ್ಯಾದಿಗಳನ್ನು ಸಂಘವು ಪೂರೈಸಿ; ಸಂಗ್ರಹವಾದ ಹಾಲನ್ನು ಸಾಂದ್ರತೆಯ ಆಧಾರದಲ್ಲಿ ದರ ನಿಗದಿಪಡಿಸಿ ಖರೀದಿಸಲಾಗುತ್ತದೆ. ರಬ್ಬರ್ ಸೊಸೈಟಿಯ ಈ ಹೊಸ ಯೋಜನೆಯಿಂದ ಸಂಗ್ರಹಗೊಂಡ ಹಾಲನ್ನು ಕಂಪೆನಿಗಳಿಗೆ ಮಾರಾಟ ಮಾಡಲಾಗುತ್ತದೆ. ಇದರ ಪ್ರಥಮ ಮಾರಾಟ ಆಗಸ್ಟ್ 22ರಂದು ನಡೆಯಿತು. ಸಂಘದ ಅಧ್ಯಕ್ಷ ಶ್ರೀಧರ ಜಿ. ಭಿಡೆ, ಉಪಾಧ್ಯಕ್ಷ ಮಚ್ಚಿಮಲೆ ಅನಂತ ಭಟ್, ನಿರ್ದೇಶಕ ಸೋಮನಾಥ ಬಂಗೇರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜು ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.ರಬ್ಬರ್ ಹಾಲು ಖರೀದಿ ಕುರಿತು ಸಂಘದ ಮಹಾಸಭೆಯಲ್ಲಿ ಸದಸ್ಯರು ಬೇಡಿಕೆ ಇಟ್ಟಿದ್ದರು. ಅವರ ಅನುಕೂಲಕ್ಕಾಗಿ ಮನೆಯಿಂದಲೇ ರಬ್ಬರ್ ಹಾಲು ಖರೀದಿಸುವ ಹೊಸ ಯೋಜನೆ ರೂಪಿಸಲಾಗಿದೆ. ಯಾವ ಕಂಪನಿ ಅತ್ಯಧಿಕ ದರ ನೀಡುತ್ತದೆಯೋ ಆ ಕಂಪೆನಿಗೆ ರಬ್ಬರ್ ಹಾಲನ್ನು ಮಾರಾಟ ಮಾಡಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಶ್ರೀಧರ ಜಿ. ಭಿಡೆ ತಿಳಿಸಿದ್ದು; ಸಂಘದ ಸದಸ್ಯ ರಬ್ಬರು ಬೆಳೆಗಾರರು ಈ ಹೊಸ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕಾಗಿ ವಿನಂತಿಸಿದ್ದಾರೆ.






