ಬೆಳ್ತಂಗಡಿ: ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಭಾರತೀಯರನ್ನು ಸಂಘಟಿಸಲು ಅಂದು ಬಾಲಗಂಗಾಧರ ತಿಲಕರು ನೀಡಿದ ಕರೆಯಂತೆ ದೇಶದ ಮೂಲೆಮೂಲೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಿಸಲಾಯಿತು. ಆದರೆ ಸ್ವಾತಂತ್ರ್ಯದ ಅಮೃತ ವರ್ಷಾಚರಣೆಯ ಸಂಭ್ರಮದಲ್ಲಿರುವ ಇಂದು ಸಾರ್ವಜನಿಕ ಗಣೇಶೋತ್ಸವಗಳು ಸಂಘಟನೆಯ ಬದಲಾಗಿ ಸಮಾಜವನ್ನು ವಿಭಜಿಸಲು ವೇದಿಕೆಯಾಗುತ್ತಿರುವುದು ವಿಷಾದನೀಯ. ಇದನ್ನು ಸರಿಪಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಗಳು ಮತ್ತೊಮ್ಮೆ ಬಲಿಷ್ಠ ಸಮಾಜ ನಿರ್ಮಿಸುವ ವೇದಿಕೆಯಾಗಲಿ ಎಂದು ಉಜಿರೆ ಶ್ರೀ ಜನಾರ್ದನಸ್ವಾಮಿ ದೇವಸ್ಥಾನದ ಮೊಕ್ತೇಸರರಾದ ಶರತ್‌ಕೃಷ್ಣ ಪಡುವೆಟ್ಣಾಯ ಹೇಳಿದರು.ಅವರು ಆಗಸ್ಟ್ 30ರಂದು ಬೆಳ್ತಂಗಡಿಯ ಶ್ರೀ ಗುರುನಾರಾಯಣ ಸಭಾಭವನದಲ್ಲಿ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಗಣೇಶೋತ್ಸವ ಸೇವಾ ಸಮಿತಿಯ ಆಶ್ರಯದಲ್ಲಿ ನಡೆದ 12ನೇ ವರ್ಷದ ಸಾರ್ವಜನಿಕ ಗೌರೀಗಣೇಶೋತ್ಸವದ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜನ್ ಜಿ.ಗೌಡ ಮಾತನಾಡಿ, ಶ್ರದ್ಧಾಭಕ್ತಿಯಿಂದ ಆಚರಿಸಬೇಕಾದ ಸಾರ್ವಜನಿಕ ಗಣೇಶೋತ್ಸವಗಳಿಂದು ಜಾತಿ-ಧರ್ಮದ ಹೆಸರಲ್ಲಿ ಸಮಾಜವನ್ನು ಒಡೆಯಲು ವೇದಿಕೆಯಾಗುತ್ತಿರುವುದು ದುರಂತ. ಆದರೆ ಇಲ್ಲಿ ಸರ್ವಧರ್ಮೀಯರು ಸೇರಿ ನಿಜ ಅರ್ಥದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಿಸುತ್ತಿರುವುದು ಇಡೀ ನಾಡಿಗೇ ಮಾದರಿ ಎಂದರು.ಬೆಳ್ತಂಗಡಿ ತಾಲೂಕು ಸಾರ್ವಜನಿಕ ಗಣೇಶೋತ್ಸವ ಸೇವಾ ಸಮಿತಿಯ ಗೌರವಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್‌ರ ಅಧ್ಯಕ್ಷತೆಯಲ್ಲಿ ನಡೆದ ಈ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ 75 ಮಂದಿ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು. ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಕೇಶವ ಪಿ. ಬೆಳಾಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಜ್ಞಾ ಓಡಿಲ್ನಾಳ ನಿರೂಪಿಸಿದ ಕಾರ್ಯಕ್ರಮಕ್ಕೆ ಅರ್ಚಕರು ಪ್ರಾರ್ಥನೆಯ ಮೂಲಕ ಚಾಲನೆ ನೀಡಿದರು. ಹರೀಶ್ ಕುಮಾರ್ ಸ್ವಾಗತಿಸಿದರು. ಕೇಶವ ಪಿ. ಬೆಳಾಲು ವಂದಿಸಿದರು.






