ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷರಾಗಿ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಎರಡನೇ ಬಾರಿ ಅವಿರೋಧ ಆಯ್ಕೆ

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷರಾಗಿ ಡಾ.ಎಂ.ಎನ್.ರಾಜೇಂದ್ರ ಕುಮಾರ್  ಎರಡನೇ ಬಾರಿ ಅವಿರೋಧ ಆಯ್ಕೆ
Facebook
Twitter
LinkedIn
WhatsApp

ಬೆಳ್ತಂಗಡಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ರಂಗದ ಅಗ್ರಮಾನ್ಯ ನಾಯಕರಾಗಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸಹಕಾರ ರತ್ನ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ., ಬೆಂಗಳೂರು ಇದರ ಅಧ್ಯಕ್ಷರಾಗಿ ಎರಡನೇ ಬಾರಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಬೆಂಗಳೂರಿನಲ್ಲಿ ಸೆಪ್ಟೆಂಬರ್ 19ರಂದು ನಡೆದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಡಳಿತ ಮಂಡಳಿಯ ಸಭೆಯಲ್ಲಿ ಈ ಆಯ್ಕೆ ನಡೆದಿದೆ . ಮಂಗಳೂರು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರಿ ಸಂಘದ ಪ್ರತಿನಿಧಿಯಾಗಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಚುನಾವಣೆಗೆ ಸ್ಪರ್ಧಿಸಿದ ಡಾ. ಎಂ.ಎನ್. ರಾಜೇಂದ್ರಕುಮಾರ್ ಅವಿರೋಧವಾಗಿ ಆಯ್ಕೆಗೊಂಡು, ಇದೀಗ ಅಧ್ಯಕ್ಷರಾಗಿಯೂ ಅವಿರೋಧವಾಗಿ ಪುನರಾಯ್ಕೆಗೊಂಡಿದ್ದಾರೆ.ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ಇತಿಹಾಸದಲ್ಲಿ 1945ರ ನಂತರ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಮೊದಲ ಅಧ್ಯಕ್ಷರಾಗಿ 2017ರಲ್ಲಿ ಆಯ್ಕೆಗೊಂಡಿದ್ದ ಡಾ.ಎಂ.ಎನ್ ರಾಜೇಂದ್ರ ಕುಮಾರ್, ಇದೀಗ ಎರಡನೇ ಬಾರಿಯೂ ಈ ಪ್ರತಿಷ್ಠಿತ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಗೊಳ್ಳುವುದರ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಉಪಾಧ್ಯಕ್ಷರಾಗಿ ಶಿವಕುಮಾರಗೌಡ ಪಾಟೀಲ  ಇವರು ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.*ರಾಜ್ಯದ ಧೀಮಂತ ಸಹಕಾರಿ ನಾಯಕ:*ರಾಜ್ಯದ ಧೀಮಂತ ಸಹಕಾರಿ ನಾಯಕರಲ್ಲಿ ಒಬ್ಬರಾಗಿರುವ ರಾಜೇಂದ್ರ ಕುಮಾರ್ ಅವರು ಸಹಕಾರಿ ಬ್ಯಾಂಕಿಂಗ್ ಹಾಗೂ ಸಾಮಾಜಿಕ ರಂಗದಲ್ಲಿ ಗಣನೀಯ ಸೇವೆಯನ್ನು ಸಲ್ಲಿಸಿದ್ದಾರೆ. ಸುಮಾರು 28 ವರ್ಷಗಳ ಕಾಲ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ ಬ್ಯಾಂಕ್)ನ ಅಧ್ಯಕ್ಷರಾಗಿ ಸಹಕಾರ ಕ್ಷೇತ್ರದಲ್ಲಿ ಸಾರ್ಥಕ ಸೇವೆಯನ್ನು ಗೈದಿರುವ ಇವರು ಬ್ಯಾಂಕಿನ ಸರ್ವಾಂಗೀಣ ಪ್ರಗತಿಯ ರೂವಾರಿಯಾಗಿದ್ದಾರೆ. ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಯ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಿ, ಸಹಕಾರಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಹೊಸ ಸ್ವರೂಪವನ್ನು ಕೊಟ್ಟು, ಕೇಂದ್ರ ಸಹಕಾರಿ ಬ್ಯಾಂಕನ್ನಾಗಿ  ರೂಪಿಸಿದ ಹೆಗ್ಗಳಿಕೆ ಇವರದ್ದು.ರಾಜೇಂದ್ರಕುಮಾರ್ ಅವರು 1999ರಿಂದ ಇದುವರೆಗೆ  ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನ ನಿರ್ದೇಶಕರಾಗಿದ್ದು , 2005 ರಿಂದ 2010ರವರೆಗೆ ಈ ಪ್ರತಿಷ್ಠಿತ ಬ್ಯಾಂಕಿನ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿ ಬ್ಯಾಂಕಿನ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಶಕ್ತಿಯಾಗಿ ಶ್ರಮಿಸಿದ್ದರು. ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್‌ನ ಮೇನೇಜಿಂಗ್ ಟ್ರಸ್ಟಿಯಾಗಿ, ನವೋದಯ ಸ್ವಸಹಾಯ ಸಂಘಗಳ ರಚನೆಯಲ್ಲಿ ಹಾಗೂ ಈ ಯೋಜನೆಯನ್ನು ವ್ಯಾಪಕವಾಗಿ ಅಂತರ್ ಜಿಲ್ಲಾ ಮಟ್ಟದಲ್ಲಿ ಸಂಘಟಿಸುವಲ್ಲಿ ಡಾ.ಎಂ.ಎನ್. ರಾಜೇಂದ್ರಕುಮಾರ್ ಯಶಸ್ಸು ಸಾಧಿಸಿದ್ದಾರೆ. ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿರುವ ಇವರು, ರಾಷ್ಟ್ರೀಯ ಸಹಕಾರಿ ಸಂಸ್ಥೆ ಇಫ್ಕೋ ಇದರ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.*ಪ್ರಶಸ್ತಿಗಳ ಸರಮಾಲೆ:*ರಾಜೇಂದ್ರ ಕುಮಾರ್ ಅವರ ನಾಯಕತ್ವದ ಕಾರ್ಯಕ್ಷಮತೆ ಹಾಗೂ ಬ್ಯಾಂಕಿಂಗ್ ಕ್ಷೇತ್ರದ ಅದ್ಭುತ ಸಾಧನೆಯನ್ನು ಗುರುತಿಸಿ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಇವರಿಗೆ ಲಭಿಸಿವೆ.  ಇವರು ಅಧ್ಯಕ್ಷರಾದ ಬಳಿಕ ಎಸ್‌ಸಿಡಿಸಿಸಿ ಬ್ಯಾಂಕಿಗೆ 20ಬಾರಿ ರಾಜ್ಯ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ ಹಾಗೂ 18ಬಾರಿ ನಬಾರ್ಡ್ ಪ್ರಶಸ್ತಿ , 2 ಬಾರಿ ಬ್ಯಾಂಕಿಂಗ್ ಪ್ರೋಂಟಿಯರ್ಸ್ ಪ್ರಶಸ್ತಿ ಹಾಗೂ 2 ಬಾರಿ  ಬ್ಯಾಂಕೊ ಬ್ಲೂ ರಿಬ್ಬನ್ ಪ್ರಶಸ್ತಿ ಕೂಡ ಲಭಿಸಿದೆ. ಮಾತ್ರವಲ್ಲ; ಇವರ ಸಾಮಾಜಿಕ ಸ್ಪಂದನೆಯ ಕಾರ್ಯಗಳನ್ನು ಪರಿಗಣಿಸಿ ಇವರಿಗೆ ಹಲವಾರು ರಾಷ್ಟ್ರೀಯ – ಅಂತರರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ. ಮುಖ್ಯವಾಗಿ ಶ್ರೀಲಂಕಾದ ಕೊಲಂಬೊ ಮುಕ್ತ ವಿಶ್ವವಿದ್ಯಾಲಯ ‘ಗೌರವ ಡಾಕ್ಟರೇಟ್’ ಪದವಿ, ಕರ್ನಾಟಕ ಸರಕಾರದಿಂದ ‘ಸಹಕಾರ ರತ್ನ’ ಪ್ರಶಸ್ತಿಯೂ ಲಭಿಸಿದೆ. ಮಾತ್ರವಲ್ಲ; ‘ಸಹಕಾರ ವಿಶ್ವ ಬಂಧುಶ್ರೀ’, ‘ಮದರ್ ತೆರೆಸಾ ಸದ್ಭಾವನಾ ಪ್ರಶಸ್ತಿ’, ‘ಮಹಾತ್ಮಾ ಗಾಂಧಿ ಸಮ್ಮಾನ್ ಪ್ರಶಸ್ತಿ’,  ‘ಬೆಸ್ಟ್ ಚೇರ್ ಮೆನ್ ನ್ಯಾಷನಲ್ ಎವಾರ್ಡ್’,  ‘ನ್ಯಾಷನಲ್ ಎಕ್ಸಲೆನ್ಸ್ ಎವಾರ್ಡ್’, ‘ಔಟ್ ಸ್ಟೇಂಡಿಂಗ್ ಗ್ಲೋಬಲ್ ಲೀಡರ್‌ಶಿಪ್ ಎವಾರ್ಡ್ -2019’, ‘ಬಹು ಪ್ರಭಾವಶಾಲಿ ಸಹಕಾರ ನಾಯಕ -2019ರ ಪ್ರಶಸ್ತಿ’,  ‘ಇಂಟರ್ ನ್ಯಾಷನಲ್ ಐಕಾನ್ ಅವಾರ್ಡ್-2021’  ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ನೀಡಿದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, 2022ರಲ್ಲಿ  ಔಟ್ ಸ್ಟಾಂಡಿಂಗ್ ಲೀಡರ್ ಶಿಪ್ ಅವಾರ್ಡ್, ಮೋಸ್ಟ್ ಇನ್ನೋವೇಟೀವ್ ಬಿಸಿನೆಸ್ ಅವಾರ್ಡ್ ಹಾಗೂ ಮೈಲ್ ಸ್ಟೋನ್ ಗ್ಲೋಬಲ್ ಅವಾರ್ಡ್ ಇವರಿಗೆ ದೊರೆತಿದೆ. ಮುಖ್ಯವಾಗಿ ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳ ಮೂಲಕ ಹೊಸ ಆಯಾಮವನ್ನು ಈ ಕ್ಷೇತ್ರಕ್ಕೆ ಡಾ.ಎಂ.ಎನ್. ರಾಜೇಂದ್ರಕುಮಾರ್ ಅವರು ನೀಡಿದ್ದಾರೆ. ನಾಲ್ಕೂವರೆ ದಶಕಗಳ ಕಾಲ ಸಹಕಾರ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಇವರಿಗೆ ಈ ಪ್ರತಿಷ್ಠಿತ ರಾಜ್ಯ ಮಟ್ಟದ ಸಹಕಾರಿ ಸಂಸ್ಥೆಯ ಅಧ್ಯಕ್ಷ ಹುದ್ದೆ ಎರಡನೇ ಬಾರಿ ಲಭಿಸಿರುವುದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಸಹಕಾರಿಗಳಿಗೆ ಹರ್ಷವನ್ನು ತಂದಿದೆ.*ಕೃತಜ್ಞತೆ ಸಮರ್ಪಣೆ:* ಈ ಸಂದರ್ಭದಲ್ಲಿ ಡಾ.ಎಂ.ಎನ್. ರಾಜೇಂದ್ರ ಕುಮಾರ್‌ರವರು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಹುದ್ದೆ ದೊರೆಯಲು ಕಾರಣರಾದ ರಾಜ್ಯದ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೃತಜ್ಞತೆಯನ್ನು ಸರ್ಮಪಿಸಿದ್ದಾರೆ. ಸಂಸದರು ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲು, ರಾಜ್ಯದ ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್, ದಕ್ಷಿಣ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನಿಲ್ ಕುಮಾರ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಅಂಗಾರ, ಸಚಿವರುಗಳಾದ ಮುರುಗೇಶ್ ನಿರಾಣಿ, ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಹಾಗೂ ಸಚಿವ ಸಂಪುಟದ ಸಚಿವರೆಲ್ಲರಿಗೂ ರಾಜೇಂದ್ರ ಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ.ಅಲ್ಲದೆ ಉಭಯ ಜಿಲ್ಲೆಗಳ ಎಲ್ಲಾ ಶಾಸಕರುಗಳಿಗೆ, ಅಧ್ಯಕ್ಷರ ಆಯ್ಕೆಯಲ್ಲಿ ಸಹಕರಿಸಿದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಎಲ್ಲಾ ನಿರ್ದೇಶಕರುಗಳಿಗೆ ಕೃತಜ್ಞತೆ ಸಲ್ಲಿಸಿರುವ ಡಾ.ಎಂ.ಎನ್. ರಾಜೇಂದ್ರಕುಮಾರ್, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿಗಳು ತನ್ನ ಮೇಲೆ ಇಟ್ಟ ಪ್ರೀತಿ ವಿಶ್ವಾಸದಿಂದ ರಾಜ್ಯದ ಈ ಉನ್ನತ ಸ್ಥಾನವನ್ನು ಮತ್ತೊಮ್ಮೆ ಪಡೆಯಲು ಸಾಧ್ಯವಾಯಿತು ಎಂದಿದ್ದಾರೆ .ಚುನಾವಣಾ ಪ್ರಕ್ರಿಯೆಯಲ್ಲಿ ಮಾರಾಟ ಮಹಾಮಂಡಳದ ನಿರ್ದೇಶಕರುಗಳಾದ ಜೆ.ಆರ್.ಷಣ್ಮುಖಪ್ಪ, ಎಸ್. ಎಲ್. ಮೋಹನ್, ಸಿ.ಎನ್. ಪುಟ್ಟಸ್ವಾಮಿ ಗೌಡ, ಹೆಚ್.ಕೆ. ದಿನೇಶ್ ಹೊಸೂರು, ತಿಮ್ಮಣ್ಣ ರಾ.ಮೆಳ್ಳಿ, ರವೀಂದ್ರ ಯಲಿಗಾರ, ರಾಮಚಂದ್ರ, ಮಹಾಬಲೇಶ್ವರ ಹೆಗಡೆ, ಭೀಮರಾಯ ಬಸಪ್ಪ ಗುಡ್ಡದ, ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಅಗಡಿ ಅಶೋಕ್, ಎಸ್.ಆರ್. ಗಿರೀಶ್, ಕೆ.ಎಸ್.ಸುರೇಶ್, ಎಸ್.ಜೆ. ಹನುಮಂತರಾಯ,  ಡಿ. ಹನುಮಂತಯ್ಯ,  ಉಮಾಕಾಂತ  ನಾಗಮಾರಪಳ್ಳಿ, ಗುರುನಾಥ ರಡ್ಡಿ, ಕೆ. ಅಮರೇಶ್ ಪಾಟೀಲ್, ಸಂಜಯ ಪಾಟೀಲ್ ಭಾಗವಹಿಸಿದ್ದರು. ಚುನಾವಣಾ ಪ್ರಕ್ರಿಯೆಯನ್ನು ಬೆಂಗಳೂರು ಪೌರಾಡಳಿತ ನಿರ್ದೇಶನಾಲಯದ ಜಂಟಿ ನಿರ್ದೇಶಕರಾದ  ಶಿವಸ್ವಾಮಿ ಬಿ. ಹಾಗೂ ಬೆಂಗಳೂರು ವಿಭಾಗದ ಸಹಕಾರ ಸಂಘಗಳ ಉಪ ನಿಬಂಧಕರಾದ ಎಸ್.ಜಿ. ಮಂಜುನಾಥ್ ಸಿಂಗ್  ಇವರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ  ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕರಾದ ಆರ್. ಶ್ರೀಧರ್ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕರುಗಳಾದ ಟಿ.ಜಿ. ರಾಜರಾಮ ಭಟ್, ಭಾಸ್ಕರ್ ಎಸ್. ಕೋಟ್ಯಾನ್,  ಶಶಿಕುಮಾರ್ ರೈ ಬಾಲ್ಯೋಟ್ಟು, ರಾಜು ಪೂಜಾರಿ, ಎಂ. ಮಹೇಶ್ ಹೆಗ್ಡೆ, ಮೋನಪ್ಪ ಶೆಟ್ಟಿ ಎಕ್ಕಾರು, ಎಸ್.ಬಿ. ಜಯರಾಮ್ ರೈ, ಜೈರಾಜ್ ಬಿ ರೈ,  ರಾಜೇಶ್ ರಾವ್, ಹರಿಶ್ಚಂದ್ರ, ಸದಾಶಿವ ಉಳ್ಳಾಲ್, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ಎಂಎನ್ಆರ್ ಪುತ್ರ ಮೇಘರಾಜ್ ಜೈನ್, ಕಸ್ಕಾರ್ಡ್ ನಿರ್ದೇಶಕರಾದ ರಾಜಶೇಖರ್ ಜೈನ್, ಜಯಪ್ರಕಾಶ್ ಹಾಗೂ ಉಭಯ ಜಿಲ್ಲೆಗಳ ಸಹಕಾರ ಸಂಘಗಳ ಪದಾಧಿಕಾರಿಗಳು   ಉಪಸ್ಥಿತರಿದ್ದರು.   *ಗಣ್ಯರ ಅಭಿನಂದನೆ:* ಸಚಿವರುಗಳಾದ ಮುರುಗೇಶ್ ನಿರಾಣಿ, ವಿ. ಸುನಿಲ್ ಕುಮಾರ್, ಸಂಸದರು ಹಾಗೂ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಹಿರಿಯ ಸಹಕಾರಿ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರಾದ ಜಿ.ಟಿ. ದೇವೇಗೌಡ, ಶಾಸಕರುಗಳಾದ ಯು.ಟಿ.ಖಾದರ್, ಹರೀಶ್ ಪೂಂಜಾ, ರಾಜೇಶ್ ನಾಯ್ಕ್, ಉಮಾನಾಥ್ ಕೋಟ್ಯಾನ್, ಸಂಜೀವ ಮಟಂದೂರು, ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷರಾದ ಬೆಳ್ಳಿಪ್ರಕಾಶ್  ಮೊದಲಾದವರು ರಾಜೇಂದ್ರ ಕುಮಾರ್ ಅವರನ್ನು ಮಹಾಮಂಡಳದ ಕಛೇರಿಯಲ್ಲಿ ಅಭಿನಂದಿಸಿದರು.

Latest 5

Related Posts