ಮೂಡುಬಿದಿರೆ: ಮೂಡುಬಿದಿರೆ ಪೇಟೆಯ ಸ್ವಚ್ಛತೆಗಾಗಿ ಕಳೆದ ಮೂರು ವರ್ಷಗಳಿಂದ ನಿರಂತರ ಸೇವೆಗೈಯುತ್ತಾ ಬಂದಿರುವ ಮೂಡುಬಿದಿರೆಯ ರಾಹುಲ್ ಕುಲಾಲ್ ನೇತ್ರತ್ವದ ನೇತಾಜಿ ಬ್ರಿಗೇಡ್ (ರಿ.) ಸಂಸ್ಥೆ 3ನೇ ವಾರ್ಷಿಕೋತ್ಸವವನ್ನು ಅಕ್ಟೋಬರ್ 9ರಂದು ಅದ್ದೂರಿಯಾಗಿ ಆಚರಿಸಿತು.ಇಲ್ಲಿನ ಸಮಾಜಮಂದಿರ ಸಭಾಭವನದಲ್ಲಿ ನಡೆದ ಸಂಸ್ಥೆಯ 3ನೇ ವಾರ್ಷಿಕೋತ್ಸವ ಸಮಾರಂಭವನ್ನು ಶಾಸಕ ಉಮಾನಾಥ ಎ. ಕೋಟ್ಯಾನ್ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಮಾತನಾಡಿ, ಇಲ್ಲಿನ ನೇತಾಜಿ ಬ್ರಿಗೇಡ್ ಸಂಸ್ಥೆ ಕಳೆದ 3 ವರ್ಷಗಳಿಂದ ಹಲವು ಸೇವಾ ಯೋಜನೆಗಳ ಜೊತೆಗೆ ನಗರ ಸ್ವಚ್ಛತಾ ಕಾರ್ಯದಲ್ಲಿ ನಿರಂತರವಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ರಾಜ್ಯ, ರಾಷ್ಟ್ರ ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ನಡೆಯಲಿರುವ ದೇಶದ ಅತೀ ದೊಡ್ಡ ಕಾರ್ಯಕ್ರಮ ‘ಸ್ಕೌಟ್ಸ್ ಮತ್ತು ಗೈಡ್ಸ್ ಜಂಬೂರಿ’ ಕಾರ್ಯಕ್ರಮದಲ್ಲಿ ಸುಮಾರು 50 ಸಾವಿರ ವಿದ್ಯಾರ್ಥಿಗಳು, 10 ಸಾವಿರ ಶಿಕ್ಷಕರು ಅಂತೆಯೇ ಮೂಡುಬಿದಿರೆ ಪರಿಸರದ 50 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಪ್ರತಿನಿತ್ಯ ಭಾಗವಹಿಸುವ ನಿರೀಕ್ಷೆಯಿದ್ದು ಈ ಸಂದರ್ಭದಲ್ಲಿ ಮೂಡುಬಿದಿರೆ ಪೇಟೆಯ ಸ್ವಚ್ಛತೆಯನ್ನು ಕಾಪಿಟ್ಟುಕೊಳ್ಳುವ ಜೊತೆಗೆ ಮತ್ತು ರೋಗ ರುಜಿನಗಳು ಹರಡದಂತೆ ಜಾಗ್ರತೆ ವಹಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಊರಿನ ಆರೋಗ್ಯ ಮತ್ತು ಸ್ವಚ್ಛತೆಗೆ ಆಧ್ಯತೆ ನೀಡುವ ನೇತಾಜಿ ಬ್ರಿಗೇಡ್ ನಂತಹ ಸಮಾಜಸೇವಾ ಸಂಸ್ಥೆ ಪೂರ್ಣ ಪ್ರಮಾಣದಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ಈ ಸ್ಕೌಟ್ಸ್ ಗೈಡ್ಸ್ ಜಂಬೂರಿ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಸಹಕರಿಸಬೇಕು ಎಂದು ವಿನಂತಿಸಿದರು. ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನುಡಿದರು.ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ. ಮತ್ತು ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಉಪಸ್ಥಿತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ 15 ಮಂದಿ ಸಾಧಕರನ್ನು ಸಮ್ಮಾನಿಸಲಾಯಿತು. ನೇತಾಜಿ ಬ್ರೀಗೇಡ್ ನ ಸೇವಾ ಕಾರ್ಯಗಳಲ್ಲಿ ನಿರಂತರ ಶ್ರಮಿಸುತ್ತಿರುವ ಸದಸ್ಯರನ್ನು ವಿಶೇಷವಾಗಿ ಗುರುತಿಸಿ ಗೌರವಿಸಲಾಯಿತು. ಮೂಡುಬಿದಿರೆ ಪರಿಸರದ ಬಹುತೇಕ ಧಾರ್ಮಿಕ ಮತ್ತು ಸಮಾಜಸೇವಾ ಸಂಸ್ಥೆಗಳ ಮುಖ್ಯಸ್ಥರನ್ನು ಗುರುತಿಸಿ ವೇದಿಕೆಯಲ್ಲಿ ಗೌರವಿಸಲಾಯಿತು. ಪುರಸಭಾ ಸದಸ್ಯರುಗಳಾದ ರಾಜೇಶ್ ನಾಯ್ಕ್, ಸ್ವಾತಿ ಪ್ರಭು, ದಿವ್ಯಾ ಜಗದೀಶ್, ಪುರಸಭೆ ಸ್ವಚ್ಛತಾ ಇಂಜಿನಿಯರ್ ಶಿಲ್ಪಾ, ಡಾ| ಸಚ್ಚಿದಾನಂದ ಪ್ರಭು, ಡಾ| ಮಧುಮಾಲಾ, ಸುಶ್ಮಿತಾ ಬಿ.ಆರ್., ಶುಭಕರ ಅಂಚನ್ ಉಪಸ್ಥಿತರಿದ್ದರು.







