ಮೂಡುಬಿದಿರೆ: ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಯವರು ತಮ್ಮ ದುರಾಡಳಿತದ ವಿರುದ್ಧ ಹೋರಾಟ ನಡೆಸುವವರನ್ನು ಗೂಂಡಾಗಿರಿಯ ಮೂಲಕ ದಮನಿಸುವ ಕೆಲಸ ಮಾಡುತ್ತಿದ್ದಾರೆ. ಅನಧಿಕೃತ ಟೋಲ್ ಮತ್ತಿತರ ಅನಧಿಕೃತ ಮೂಲಗಳಿಂದ ಸಂಗ್ರಹಿಸಿರುವ ಹಣವನ್ನು ತಮ್ಮ ಕ್ರಿಮಿನಲ್ ಚಟುವಟಿಕೆಗಳಿಗೆ ಬಳಸುತ್ತಿದ್ದಾರೆ ಎಂದು ಮಾಜಿ ಸಚಿವ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಕೆ. ಅಭಯಚಂದ್ರ ಜೈನ್ ಗಂಭೀರ ಆರೋಪ ಮಾಡಿದರು.ಅಕ್ಟೋಬರ್ 18ರಂದು ಹಮ್ಮಿಕೊಳ್ಳಲಾಗಿರುವ ಐತಿಹಾಸಿಕ ಸುರತ್ಕಲ್ ಟೋಲ್ ತೆರವು ಹೋರಾಟದ ಸಿದ್ಧತೆಗಾಗಿ ಮೂಡುಬಿದಿರೆಯ ಸಮಾಜಮಂದಿರದಲ್ಲಿ ಅಕ್ಟೋಬರ್ 10ರಂದು ಕರೆಯಲಾಗಿದ್ದ ಸಮಾನ ಮನಸ್ಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಇಂತಹ ಬೃಹತ್ ಹೋರಾಟದಲ್ಲಿ ಜನಸಾಮಾನ್ಯರನ್ನು ಮತ್ತು ಕಾರ್ಯಕರ್ತರನ್ನು ಬಲಿಕೊಡಲು ಬಯಸುವುದಿಲ್ಲ. ಈ ಹೋರಾಟದಲ್ಲಿ ಭಾಗವಹಿಸುವ ನಾಯಕರೇ ಹೋರಾಟದ ಮುಂಚೂಣಿಯಲ್ಲಿರುತ್ತೇವೆ. ಟೋಲ್ ತೆರವು ಪ್ರಕ್ರಿಯೆ ವಿಳಂಬವಾದರೆ ತೀವ್ರ ಹೋರಾಟದ ಮೂಲಕ ಎಲ್ಲರಿಗಿಂತ ಮುಂಚಿತವಾಗಿ ಬಂಧನಕ್ಕೊಳಗಾಗಲು ತಾನು ಸಿದ್ಧ ಎಂದು ತಿಳಿಸಿದರು.ಡಿ.ವೈ.ಎಫ್.ಐ. ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ ಇಲ್ಲಿನ ಸಂಸದರು, ಸಚಿವರುಗಳು ಮತ್ತು ಜಿಲ್ಲಾಧಿಕಾರಿಗಳ ಸಹಿತ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹಲವು ಬಾರಿ ಸುರತ್ಕಲ್ನಲ್ಲಿರುವ ಅನಧಿಕೃತ ಟೋಲ್ ತೆರವುಗೊಳಿಸುವ ಭರವಸೆ ನೀಡಿದ್ದಾರೆ. ಆದರೆ ಈ ಭರವಸೆ ಭರವಸೆಯಾಗಿಯೇ ಉಳಿದಿದೆಯೇ ಹೊರತು ಈ ಅನಧಿಕೃತ ಟೋಲ್ ಮುಖಾಂತರ 400ಕೋಟಿ ರೂಪಾಯಿ ಸಂಗ್ರಹವಾಗಿದ್ದರೂ ಇದುವರೆಗೂ ಇದು ತೆರವುಗೊಂಡಿಲ್ಲ. ಕೊನೆಗೂ ಇದರ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗಿದ್ದು ಈ ಟೋಲ್ ನಿಂದ ತೊಂದರೆಗೊಳಗಾಗಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ನಾಗರಿಕರಿಂದ ಹೋರಾಟಕ್ಕೆ ಉತ್ತಮ ಬೆಂಬಲ ಲಭಿಸಿದೆ. ಅಕ್ಟೋಬರ್ 18ರಂದು ಶಾಂತಿಯುತ ಮೆರವಣಿಗೆಯ ಮೂಲಕ ಪ್ರತಿಭಟನೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.ಸಿ.ಪಿ.ಐ.ಎಂ. ನಾಯಕ ಕೆ. ಯಾದವ ಶೆಟ್ಟಿ ಅಕ್ಟೋಬರ್ 18ರಂದು ನಡೆಯುವ ಪ್ರತಿಭಟನಾ ಮೆರವಣಿಗೆಯ ರೂಪುರೇಷೆಯನ್ನು ವಿವರಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ ಮತ್ತಿತರರು ಸೂಕ್ತ ಸಲಹೆ ಸೂಚನೆಗಳನ್ನಿತ್ತರು.ರೈತ ಮುಖಂಡರುಗಳಾದ ಸುಂದರ ಶೆಟ್ಟಿ, ಆಲ್ವಿನ್ ಮಿನೇಜಸ್, ಜೆಡಿಎಸ್ ರಾಜ್ಯ ಯುವ ನಾಯಕ ಎಂ.ಎ.ಎಸ್. ಆಸಿಫ್ ಇಕ್ಬಾಲ್ ತೋಡಾರು, ಪುರಸಭಾ ಸದಸ್ಯರಾದ ಸುರೇಶ್ ಕೋಟ್ಯಾನ್, ಜೊಸ್ಸಿ ಮಿನೇಜಸ್, ಸುರೇಶ್ ಪ್ರಭು, ಪುರಂದರ ದೇವಾಡಿಗ, ಇಕ್ಬಾಲ್ ಕರೀಂ, ಸಾಮಾಜಿಕ ಧುರೀಣ ಅರುಣ್ ಪ್ರಕಾಶ್ ಶೆಟ್ಟಿ, ಕಾಂಗ್ರೆಸ್ ನಾಯಕರಾದ ಮಹಮ್ಮದ್ ಅಸ್ಲಂ, ಅರುಣ್ ಕುಮಾರ್ ಶೆಟ್ಟಿ, ವಾಸುದೇವ ಪಿ. ನಾಯಕ್, ಮುರಳೀಧರ ಕೋಟ್ಯಾನ್, ಪ್ರವೀಣ್ ಶೆಟ್ಟಿ, ರಾಜೇಶ್ ಕಡಲಕೆರೆ, ಸಿಪಿಐಎಂ ನಾಯಕರಾದ ಸೀತಾರಾಮ ಶೆಟ್ಟಿ, ರಮಣಿ, ಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು. ಅಕ್ಟೋಬರ್ 18ರಂದು ಸುರತ್ಕಲ್ ಟೋಲ್ ಬಳಿ ನಡೆಯಲಿರುವ ಬೃಹತ್ ಪ್ರತಿಭಟನೆಗೆ ಪೂರ್ವಭಾವಿಯಾಗಿ ಅಕ್ಟೋಬರ್ 14 ಶುಕ್ರವಾರ ಮೂಡುಬಿದಿರೆ ಕಲ್ಸಂಕ ಬಳಿಯ ಭಾರತ್ ಕೋ. ಆಪರೇಟಿವ್ ಬ್ಯಾಂಕ್ ಬಳಿಯಿಂದ ಮೂಡುಬಿದಿರೆ ತಾಲೂಕು ಆಡಳಿತ ಸೌಧದವರೆಗೆ ಮೆರವಣಿಗೆಯಲ್ಲಿ ಸಾಗಿ ಸಾಂಕೇತಿಕ ಪ್ರತಿಭಟನೆ ನಡೆಸುವುದೆಂದು ಸಭೆಯಲ್ಲಿ ನಿರ್ಧರಿಸಲಾಯಿತು.






