ಮೂಡುಬಿದಿರೆ: ಸರಕಾರದಿಂದ ನಡೆಸಲ್ಪಡುವ ಬಡವರ ಹೆಣ್ಣು ಮಕ್ಕಳ ವಸತಿ ಶಾಲೆ ಕಲ್ಲಬೆಟ್ಟು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಲಯನ್ಸ್ ಕ್ಲಬ್ ಮೂಡಬಿದಿರೆ ಇದರ ವತಿಯಿಂದ ಅಕ್ಟೋಬರ್ 27ರಂದು ದೀಪಾವಳಿ ಹಬ್ಬ ಆಚರಿಸಲಾಯಿತು.ಹಿರಿಯ ಲಯನ್ಸ್ ಸದಸ್ಯ, ಮಾಜಿ ಪ್ರಾಂತೀಯ ಅಧ್ಯಕ್ಷ ಪ್ರಮಥ್ ಕುಮಾರ್ ಅವರ ಪ್ರಾಯೋಜಕತ್ವದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲ ಸಂಗಣ್ಣ ಬಸಯ್ಯ ಹಿರೇಮಠ್ ವಹಿಸಿದ್ದರು. ಲಯನ್ಸ್ ಸದಸ್ಯ ವಿನೋದ್ ಕುಮಾರ್ ದೀಪಾವಳಿ ಆಚರಣೆ ಬಗ್ಗೆ ಸವಿಸ್ತಾರವಾಗಿ, ಸ್ವಾರಸ್ಯಪೂರ್ಣವಾಗಿ ವಿವರಿಸಿದರು. ನಿಕಟಪೂರ್ವ ಅಧ್ಯಕ್ಷ ವಿನೋದ್ ಡೇಸಾ ಅವರು ವಿದ್ಯಾರ್ಥಿಗಳಿಗೆ ವಿವಿಧ ವಿನೋದದ ಸ್ಪರ್ಧೆಗಳನ್ನು ನಡೆಸಿಕೊಟ್ಟರು. ಸ್ಪರ್ಧಾ ವಿಜೇತರಿಗೆ ಲಯನ್ಸ್ ಅಧ್ಯಕ್ಷ ಎಂ.ಕೆ. ದಿನೇಶ್ ಮತ್ತು ಹಿರಿಯ ಲಯನ್ಸ್ ಸದಸ್ಯ ಕೆ. ಶ್ರೀಪತಿ ಭಟ್ ಬಹುಮಾನ ವಿತರಿಸಿದರು. ಲಯನ್ಸ್ ಉಪಾಧ್ಯಕ್ಷರೂ ಆಗಿರುವ ಪುರಸಭೆಯ ವಾರ್ಡ್ ಸದಸ್ಯ ಜೊಸ್ಸಿ ಮಿನೇಜಸ್, ಲಯನ್ಸ್ ಕಾರ್ಯದರ್ಶಿ ಆರ್.ಎನ್. ಹೆಗ್ಡೆ, ಸದಸ್ಯರುಗಳಾದ ಶಿವಪ್ರಸಾದ್ ಹೆಗ್ಡೆ, ರೊನಾಲ್ಡ್ ಸೆರಾವೋ, ವಾಸು ಎಸ್., ರಿಚರ್ಡ್ ಪುತ್ತಿಗೆ, ಓಸ್ವಾಲ್ಡ್ ಡಿಕೋಸ್ತ, ಸುರೇಶ್ ಕೋಟ್ಯಾನ್, ಗಣೇಶ್ ಮತ್ತಿತರರು ಉಪಸ್ಥಿತರಿದ್ದರು. ಶಿವಪ್ರಸಾದ್ ಹೆಗ್ಡೆ ನಿರೂಪಿಸಿದ ಕಾರ್ಯಕ್ರಮದಲ್ಲಿ ಸೌಮ್ಯಶ್ರೀ ಸ್ವಾಗತಿಸಿ ಕಸ್ತೂರಿ ಜೈನ್ ವಂದಿಸಿದರು. ದೀಪಾವಳಿ ಆಚರಣೆಯ ಅಂಗವಾಗಿ ಲಯನ್ಸ್ ಕ್ಲಬ್ ವತಿಯಿಂದ ಮಕ್ಕಳಿಗೆ ಅರಶಿನ ಎಲೆಯ ಗಟ್ಟಿ ಮತ್ತು ಸಿಹಿ ವಿತರಿಸಲಾಯಿತು.






