ಮೂಡುಬಿದಿರೆ: ಸುರತ್ಕಲ್ ಅನಧಿಕೃತ ಟೋಲ್‌ಗೇಟ್ ತೆರವು ಬಗ್ಗೆ ಅನಿರ್ದಿಷ್ಟಾವಧಿ ಧರಣಿ ನಡೆಯುತ್ತಾ ಇದೆ. ಧರಣಿನಿರತರ ಹೋರಾಟವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಜಿಲ್ಲೆಯ ಸಂಸದರು ಮತ್ತು ಶಾಸಕರುಗಳ ಆಗ್ರಹ ಹಾಗೂ ಸರಕಾರದ ಆದೇಶದಂತೆ ಟೋಲ್‌ಗೇಟ್ ಸುತ್ತಮುತ್ತ ಜಿಲ್ಲಾಡಳಿತ ನಿಷೇಧಾಜ್ಞೆಯನ್ನೂ ಜಾರಿಗೊಳಿಸಿದೆ. ಆದರೂ ಜನಸಾಮಾನ್ಯರಿಂದ ನಿರಂತರವಾಗಿ ಹಣ ದೋಚುತ್ತಿರುವ ಈ ಅನಧಿಕೃತ ಟೋಲನ್ನು ಮುಚ್ಚಿಸಿಯೇ ಸಿದ್ಧ ಎಂದು ಸಂಕಲ್ಪತೊಟ್ಟು ಹೋರಾಟಕ್ಕೆ ಇಳಿದಿರುವ ಮುನೀರ್ ಕಾಟಿಪಳ್ಳ ನೇತೃತ್ವದ ಹೋರಾಟ ಸಮಿತಿಯ ಸದಸ್ಯರು ಅಕ್ಟೋಬರ್ 28ರಂದು ದಿನಪೂರ್ತಿ ಟೋಲ್‌ಗೇಟ್ ಬಳಿ ಧರಣಿ ಕುಳಿತು ಸಂಜೆಯ ಹೊತ್ತಿಗೆ ಬಹುತೇಕರು ತಮ್ಮತಮ್ಮ ಮನೆಗಳಿಗೆ ತೆರಳಿದರು. ಕೈಯಲ್ಲಿ ಹಾಸಿಗೆ ಮತ್ತು ದಿಂಬನ್ನು ಹೊತ್ತು ತಂದಿದ್ದ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ತಮ್ಮ ವಯಸ್ಸನ್ನೂ ಲೆಕ್ಕಿಸದೆ ಧರಣಿ ನಿರತರಿಗಾಗಿ ನಿರ್ಮಿಸಿರುವ ಪೆಂಡಾಲ್‌ನಲ್ಲಿ ರಾತ್ರಿಯಿಡೀ ಧರಣಿ ಕುಳಿತು ನ್ಯಾಯಕ್ಕಾಗಿ ಹೋರಾಟ ನಡೆಸಿದರು. ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಮುಖ್ಯಸ್ಥ ಮುನೀರ್ ಕಾಟಿಪಳ್ಳ ಹಾಗೂ ಕೆಲವು ಸದಸ್ಯರೂ ಅಭಯಚಂದ್ರ ಜೈನ್ ಅವರ ಜೊತೆಗಿದ್ದರು.






