ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ, ಧರ್ಮೋತ್ಥಾನ ಟ್ರಸ್ಟ್‌ನಿಂದ ನವೀಕರಣಗೊಳ್ಳುತ್ತಿರುವ ಮೂಡುಬಿದಿರೆ ತಾಲೂಕು ದರೆಗುಡ್ಡೆಯ ಮಹತೋಭಾರ ಇಟಲ ಶ್ರೀ ಸೋಮನಾಥೇಶ್ವರ ದೇವಾಲಯದ ನೂತನ ಧ್ವಜಸ್ತಂಭವು ಸಿದ್ಧಗೊಂಡಿದ್ದು ಇಂದು ಅಕ್ಟೋಬರ್ 4ರ ಶುಕ್ರವಾರ ಅಪರಾಹ್ನ ಸುಳ್ಯ ತಾಲೂಕಿನ ಗೂನಡ್ಕದಿಂದ ಹೊರಡಲಿರುವ ಧ್ವಜಸ್ತಂಭವು ರಾತ್ರಿವೇಳೆಗೆ ಮೂಡುಬಿದಿರೆ ತಲುಪಿ, ಇಲ್ಲಿನ ಜೈನ ಪದವಿ ಪೂರ್ವ ಕಾಲೇಜಿನಲ್ಲಿ ತಂಗಿ ಅಕ್ಟೋಬರ್ 6ರ ಭಾನುವಾರ ಭವ್ಯ ಮರವಣಿಗೆಯ ಮೂಲಕ ಸಾಗಿ ಸಂಜೆ ಇಟಲ ಶ್ರೀ ಸೋಮನಾಥೇಶ್ವರ ದೇವಸ್ಥಾನ ತಲುಪಲಿದೆ ಎಂದು ಕ್ಷೇತ್ರದ ಅನುವಂಶೀಯ ಮೊಕ್ತೇಸರ ಬಿ. ವಿಮಲ್ ಕುಮಾರ್ ಶೆಟ್ಟಿ , ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಸುಕೇಶ್ ಶೆಟ್ಟಿ ಪತ್ರಿಕೆಗೆ ತಿಳಿಸಿದ್ದಾರೆ.ಮಹತೋಭಾರ ಇಟಲ ಶ್ರೀ ಸೋಮನಾಥೇಶ್ಚರ ದೇವರು ಪಣಪಿಲ ಅರಮನೆಯ ಪಟ್ಟದ ದೇವರು ಮತ್ತು ಕೊನ್ನಾರ ಮಾಗಣೆಯ ಇಷ್ಟದ ದೇವರು ಎಂಬ ಪ್ರಸಿದ್ಧಿಯನ್ನು ಪಡೆದಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆಯವರು ಮತ್ತು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾಗಿದ್ದ ದಿ. ಡಾ. ಬಿ. ಯಶೋವರ್ಮ ಅವರು ಕ್ಷೇತ್ರದ ಜೀರ್ಣೋದ್ಧಾರದ ಸಂಕಲ್ಪ ತೊಟ್ಟವರಾಗಿದ್ದು ಜುಲೈ 5ರಂದು ದೇವಳದ ಸಂಕೋಚ ಕಾರ್ಯ ನೆರವೇರಿಸಿ, ಮೂಲಬಿಂಬಕ್ಕೆ ಪಂಜರ ಅಳವಡಿಸಲಾಗಿತ್ತು. ಇದೀಗ ಕಾಲ ಕೂಡಿಬಂದಿದ್ದು ಕ್ಷೇತ್ರದ ಜೀರ್ಣೋದ್ಧಾರ ಕಾರ್ಯವು ಊರ-ಪರವೂರ ಸಮಸ್ತ ದಾನಿಗಳ ಸಹಕಾರದಿಂದ ಸಂಪನ್ನಗೊಳ್ಳುತ್ತಿದೆ. ಸುಳ್ಯ ತಾಲೂಕು ಗೂನಡ್ಕದ ವರದರಾಜ್ ಎಂಬವರು ಈ ಧ್ವಜಸ್ತಂಭಕ್ಕೆ ಅಗತ್ಯವಿರುವ ಮರವನ್ನು ಒದಗಿಸಿದ್ದು, ನವೆಂಬರ್ 4ರಂದು ಅಪರಾಹ್ನ ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಅವರು ಪುಷ್ಪಾರ್ಚನೆಯ ಮೂಲಕ ಮೆರವಣಿಗೆಗೆ ಚಾಲನೆ ನೀಡಿದ್ದಾರೆ. ನಂತರ ಧ್ವಜಸ್ತಂಭವು ಮೆರವಣಿಗೆಯ ಮೂಲಕ ಪುತ್ತೂರು, ಬಂಟ್ವಾಳ, ಸಿದ್ಧಕಟ್ಟೆ ಮಾರ್ಗವಾಗಿ ಮೂಡುಬಿದಿರೆ ತಲುಪಿದ್ದು; ಇಲ್ಲಿನ 18 ಬಸದಿಗಳ ಮೊಕ್ತೇಸರ ಪಟ್ಣಶೆಟ್ಟಿ ಸುದೇಶ್ ಕುಮಾರ್ ಅವರು ಪುಷ್ಪಾರ್ಚನೆಯ ಮೂಲಕ ಧ್ವಜಸ್ತಂಭದ ಮೆರವಣಿಗೆಯನ್ನು ಬರಮಾಡಿಕೊಂಡಿದ್ದಾರೆ.ಅಕ್ಟೋಬರ್ 6ರ ಆದಿತ್ಯವಾರ ಬೆಳಿಗ್ಗೆ 9ಕ್ಕೆ ಧ್ವಜಸ್ತಂಭದ ಭವ್ಯ ಮೆರವಣಿಗೆಯು ವಾಹನ ಜಾಥಾದ ಮೂಲಕ ಹೊರಟು ಕೋಟೆಬಾಗಿಲು, ಮರಿಯಾಡಿ, ಹೌದಾಲು, ಏರೋಡಿ, ಅಶ್ವತ್ಥಕಟ್ಟೆ, ಮಾವಿನಕಟ್ಟೆ, ಶಿರ್ತಾಡಿ, ಮಾಡದಂಗಡಿ, ಅಳಿಯೂರು ಮಾರ್ಗವಾಗಿ ಉಮಲತ್ತಡೆ ಗರಡಿ ತಲುಪಲಿದೆ. ಮಧ್ಯಾಹ್ನ ಅಲ್ಲಿ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಲಿದ್ದು, ಅಪರಾಹ್ನ ಉಮಲತ್ತಡೆ ಗರಡಿಯಿಂದ ಹೊರಟು ವಿಕಾಸನಗರ, ಕುಡುವರಂಗಡಿ, ಅರಸುಕಟ್ಟೆ, ದರೆಗುಡ್ಡೆ ಮಾರ್ಗವಾಗಿ ಇಟಲ ಶ್ರೀ ಸೋಮನಾಥೇಸ್ವರ ದೇವಸ್ಥಾನ ತಲುಪಲಿದೆ. ನಂತರ ಅಲ್ಲಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.






