ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಪಶು ವೈದ್ಯ ಆಸ್ಪತ್ರೆಯ ಜಗಲಿಯಲ್ಲಿ ಯಾತ್ರಾರ್ಥಿಯೊಬ್ಬರು ಕೋಮಾ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡ ತಾಲೂಕು ಜಾನುವಾರು ಅಭಿವೃದ್ಧಿ ಅಧಿಕಾರಿ ಜಯಕೀರ್ತಿ ಜೈನ್, ತಕ್ಷಣ 108 ಆಂಬ್ಯುಲೆನ್ಸ್‌ಗೆ ಫೋನ್ ಕರೆಮಾಡಿ ಕರೆಯಿಸಿದ ಘಟನೆ ನವೆಂಬರ್ 7ರಂದು ವರದಿಯಾಗಿದೆ. ಸ್ಥಳಕ್ಕೆ ಧಾವಿಸಿದ 108 ಆ್ಯಂಬುಲೆನ್ಸ್ ಸಿಬ್ಬಂದಿಗಳು ಕೋಮಾ ಸ್ಥಿತಿಯಲ್ಲಿದ್ದ ಯಾತ್ರಾರ್ಥಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು ಎನ್ನಲಾಗಿದೆ. ಕೋಮಾ ಸ್ಥಿತಿಯಲ್ಲಿ ಬಿದ್ದಿದ್ದ ಯಾತ್ರಾರ್ಥಿ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದು, ರಕ್ತದಲ್ಲಿ ಸಕ್ಕರೆ ಅಂಶ ಕಮ್ಮಿಯಾಗಿ ಧರ್ಮಸ್ಥಳದ ಪಶು ವೈದ್ಯ ಆಸ್ಪತ್ರೆಯ ಜಗಲಿಯಲ್ಲಿ ಬಿದ್ದು ಕೋಮಾ ಸ್ಥಿತಿಗೆ ತಲುಪಿದ್ದರು ಎಂದು ತಿಳಿದು ಬಂದಿದೆ. ಸಕಾಲದಲ್ಲಿ ಚಿಕಿತ್ಸೆ ದೊರೆತದ್ದರಿಂದ ಯಾತ್ರಾರ್ಥಿ ಪ್ರಾಣಾಪಾಯದಿಂದ ಪಾರಾಗಿದ್ದು, ಇವರ ವಿಳಾಸದ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಾಗಿದೆ. ಆಗಂತುಕ ಯಾತ್ರಾರ್ಥಿಯು ಕೋಮಾ ಸ್ಥಿತಿಯಲ್ಲಿ ಬಿದ್ದಿದ್ದಾಗ ಪ್ರಸಂಗಾವಧಾನತೆ ತೋರಿ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಲು ಯತ್ನಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಪಶು ಆಸ್ಪತ್ರೆಯ ಜಾನುವಾರು ಅಭಿವೃದ್ಧಿ ಅಧಿಕಾರಿ ಜಯಕೀರ್ತಿ ಜೈನ್ ಹಾಗೂ ವಿಚಾರ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿ, ಸೂಕ್ತ ಪ್ರಥಮ ಚಿಕಿತ್ಸೆ ನೀಡಿದ 108 ಆ್ಯಂಬುಲೆನ್ಸ್‌ನ ಸಿಬ್ಬಂದಿ ವರ್ಗದವರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.






