ಬೆಳ್ತಂಗಡಿ: ಸರಕಾರದ ಯೋಜನೆಗಳು ಜನರಿಗೆ ಪಾರದರ್ಶಕವಾಗಿ ಸಿಗಬೇಕು ಎಂಬ ಕಲ್ಪನೆಯಿಂದ ಜನರ ಬಳಿ ಆಡಳಿತ ಸೇವೆ ಎಂಬ ಹೊಸ ಕಲ್ಪನೆಯಂತೆ ತಾಲೂಕಿನಲ್ಲಿ ಅನುಷ್ಠಾನ ಮಾಡುತ್ತಿದ್ದು, ಇದರ ಪ್ರಾರಂಭಿಕವಾಗಿ ರಾಜ್ಯದಲ್ಲೇ ಪ್ರಪ್ರಥಮಬಾರಿಗೆ ಅಕ್ರಮ ಸಕ್ರಮ ಅರ್ಜಿ ವಿಲೇವಾರಿಯನ್ನು ಗ್ರಾಮ ಪಂಚಾಯತ್ ಮಟ್ಟದಲ್ಲೇ ಮಾಡಲಾಗುತ್ತಿದ್ದು ನವೆಂಬರ್ 23ರಂದು ಇದಕ್ಕೆ ಚಾಲನೆ ನೀಡಲಾಗುವುದು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.ಅವರು ನವೆಂಬರ್ 14ರಂದು ಬೆಳ್ತಂಗಡಿಯ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದುವರೆಗೆ ಒಟ್ಟು 32ಸಾವಿರ ಅರ್ಜಿಗಳು ಬಂದಿದ್ದು, ಇದರಲ್ಲಿ ಕುಮ್ಕಿ ಜಮೀನು ಅರ್ಜಿಗಳನ್ನು ಹೊರತುಪಡಿಸಿ ಸರಕಾರಿ ಭೂಮಿಯಲ್ಲಿ ಕೃಷಿ ಮಾಡಿದವರ ಅರ್ಜಿಯನ್ನು ಪರಿಗಣಿಸಲಾಗುತ್ತಿದ್ದು, ಈಗಾಗಲೇ ಗ್ರಾಮಲೆಕ್ಕಿಗರು ಹಾಗೂ ಕಂದಾಯ ಅಧಿಕಾರಿಗಳು ಅರ್ಜಿಗಳ ಪರಿಶೀಲನೆ ಮಾಡಿದ್ದಾರೆ. ಇದರಲ್ಲಿ ಆಯ್ಕೆಗೊಂಡ ಅರ್ಜಿಗಳ ಮಾಹಿತಿಯನ್ನು ಫಲಾನುಭವಿಗಳಿಗೆ ತಿಳಿಸಲಾಗುತ್ತಿದ್ದು, ಇಂತಹ ಫಲಾನುಭವಿಗಳು ನಿಗದಿ ಪಡಿಸಿದ ಅರ್ಜಿ ವಿಲೇವಾರಿ ದಿನಾಂಕದಂದು ಗ್ರಾಮ ಪಂಚಾಯತ್ಗಳಿಗೆ ಭೇಟಿ ನೀಡಿ ಅಕ್ರಮ ಸಕ್ರಮ ಸಮಿತಿಯ ಮುಂದೆ ಹಾಜರಾಗಬೇಕು. ಅಲ್ಲೇ ಅರ್ಜಿಗಳನ್ನು ವಿಲೇವಾರಿ ಮಾಡಿ ರೈತರಿಗೆ ನ್ಯಾಯ ಒದಗಿಸಲಾಗುವುದು ಎಂದು ವಿವರಿಸಿದರು.ಯಾವುದೇ ಸಂದರ್ಭದಲ್ಲಿ ಯಾರಿಗೂ ಲಂಚ ನೀಡಬೇಡಿ, ಲಂಚ ಕೇಳಿದರೆ ಮಾಹಿತಿ ಕೊಡಿ ಎಂದ ಶಾಸಕ ಹರೀಶ್ ಪೂಂಜ; ಅಕ್ರಮ ಸಕ್ರಮ ಅರ್ಜಿ ವಿಲೇವಾರಿ ಮತ್ತು 94ಸಿ ಮತ್ತು 94ಸಿಸಿ ಇದು ಸರಕಾರವು ರೈತರಿಗೆ ಮತ್ತು ನಿವೇಶನ ರಹಿತರಿಗೆ ನೀಡುವ ಸೌಲಭ್ಯವಾಗಿದೆ. ಇದನ್ನು ಪಡೆಯಲು ಯಾವುದೇ ಅಧಿಕಾರಿಗಳಿಗೆ ಲಂಚ ನೀಡಬೇಡಿ, ಅಧಿಕಾರಿಗಳಿಗೆ ಸರಕಾರವು ವೇತನ ನೀಡುತ್ತದೆ. ಅಧಿಕಾರಿಗಳು ಲಂಚ ಕೇಳಿದರೆ ನನ್ನ ಅಥವಾ ತಹಶೀಲ್ದಾರ್ರವರ ಗಮನಕ್ಕೆ ತರಬೇಕು. ತಕ್ಷಣ ಅವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಇದು ವರೆಗೆ ಯಾರಾದರೂ ಲಂಚ ಪಡೆದಿದ್ದರೆ ಅವರ ಮಾಹಿತಿಯನ್ನು ನೀಡಿದರೆ ಆ ಹಣವನ್ನು ಮರುಪಾವತಿಸಲು ಕ್ರಮ ಕೈಗೊಳ್ಳಲಾಗುವುದು. ತಾಲೂಕಿನಲ್ಲಿ ಭೃಷ್ಠಾಚಾರಕ್ಕೆ ಅವಕಾಶ ನೀಡುವುದಿಲ್ಲ. ಜನರು ಕೂಡಾ ಲಂಚ ಕೊಡದೆ ಭೃಷ್ಠಾಚಾರ ತಡೆಗೆ ಸಹಕರಿಸಬೇಕು ಎಂದು ನಾಗರಿಕರಲ್ಲಿ ವಿನಂತಿಸಿದರು.ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಮುಖ್ಯಮಂತ್ರಿಗಳು ಮತ್ತು ಸಂಬಂಧ ಪಟ್ಟ ಸಚಿವರುಗಳು ಕುಮ್ಕಿಹಕ್ಕು ನೀಡಲು ಇರುವ ಅಡ್ಡಿಯನ್ನು ನಿವಾರಿಸಲು ಕೇಂದ್ರ ಸರಕಾರದ ಗಮನಕ್ಕೆ ತಂದಿದ್ದು, ಇದಕ್ಕೆ ಸಕಾರಾತ್ಮಕ ಸ್ಪಂದನೆಯೂ ಸಿಕ್ಕಿರುತ್ತದೆ. ತಾಂತ್ರಿಕ ಅಡೆತಡೆಗಳು ಶೀಘ್ರ ನಿವಾರಣೆಯಾಗಲಿದ್ದು ಒಂದೆರಡು ತಿಂಗಳಿನಲ್ಲಿ ಸರಕಾರವು ಅಲ್ಪ ದರ ನಿಗದಿಯನ್ನು ಮಾಡಿ 10 ಎಕ್ರೆ ಒಳಗಿನ ಕುಮ್ಕಿ ಜಮೀನನ್ನು ರೈತರಿಗೆ ವಿತರಿಸಲು ಕ್ರಮ ಕೈಗೊಳ್ಳುತ್ತದೆ. ಈಗಾಗಲೇ ಅಕ್ರಮ ಸಕ್ರಮದ ಅಡಿಯಲ್ಲಿ ಕುಮ್ಕಿ ಜಮೀನಿಗೆ ಅರ್ಜಿ ಸಲ್ಲಿಸಿದರೆ ಅದರಲ್ಲಿ ಸಿಗಲಿಲ್ಲ ಎಂಬ ಆತಂಕ ರೈತರಲ್ಲಿ ಬರಬಾರದು. ಸರಕಾರವು ರೈತರ ಜೊತೆ ಸದಾ ಇರುತ್ತದೆ ಎಂದರು.ತಾಲೂಕಿನಲ್ಲಿ 2,900ರಷ್ಟು 94ಸಿ ಮತ್ತು 94ಸಿಸಿ ಅರ್ಜಿಗಳು ವಿಲೇವಾರಿಯಾಗಿದ್ದು ಇದರಲ್ಲಿ ಬಹುತೇಕ ಅರ್ಜಿಗಳು ಅರಣ್ಯ ಸಂಬಂಧಿಸಿದಂತೆ ತಕರಾರಿನಿಂದ ಬಾಕಿ ಉಳಿದಿದೆ. ಅರಣ್ಯ ಇಲಾಖೆಯೊಂದಿಗೆ ಮಾತುಕತೆ ನಡೆಸಿ ಗರಿಷ್ಠ ಮಟ್ಟದಲ್ಲಿ ನಿವೇಶನ ರಹಿತರಿಗೆ ನ್ಯಾಯ ಒದಗಿಸಲು ಪ್ರಯತ್ನಿಸಲಾಗುವುದು ಡಿಸೆಂಬರ್ ಒಳಗೆ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು ಎಂದರು.ನವೆಂಬರ್ 22ರಂದು ಬೆಳಿಗ್ಗೆ 10-30ಕ್ಕೆ ನಾರಾವಿ ಗ್ರಾಮ ಪಂಚಾಯತ್ ಆವರಣದಲ್ಲಿ, 12-30 ಅಂಡಿಂಜೆ ಗ್ರಾಮ ಪಂಚಾಯತ್, 3-30 ಆರಂಬೋಡಿ ಗ್ರಾಮ ಪಂಚಾಯತ್; ನವೆಂಬರ್ 23ರಂದು ಬೆಳಿಗ್ಗೆ 10-30ಕ್ಕೆ ಶಿಬಾಜೆ ಗ್ರಾಮ ಪಂಚಾಯತ್, 12-30ಕ್ಕೆ ಶಿಶಿಲ ಗ್ರಾಮ ಪಂಚಾಯತ್, 3-30ಕ್ಕೆ ಅರಸಿನಮಕ್ಕಿ ಗ್ರಾಮ ಪಂಚಾಯತ್ ಆವರಣದಲ್ಲಿ; ನವೆಂಬರ್ 24ಕ್ಕೆ ಬೆಳಿಗ್ಗೆ 10-00ಕ್ಕೆ ಮಲವಂತಿಗೆ ಗ್ರಾಮ ಪಂಚಾಯತ್, 12-30ಕ್ಕೆ ಕಡಿರುದ್ಯಾವರ ಗ್ರಾಮ ಪಂಚಾಯತ್, 3-30ಕ್ಕೆ ನಾವೂರು ಗ್ರಾಮ ಪಂಚಾಯತ್ ಆವರಣದಲ್ಲಿ; ನವೆಂಬರ್ 25ಕ್ಕೆ ಬೆಳಿಗ್ಗೆ 10-00ಕ್ಕೆ ಬಂದಾರು ಗ್ರಾಮ ಪಂಚಾಯತ್, 12-30ಕ್ಕೆ ಕಣಿಯೂರು ಗ್ರಾಮ ಪಂಚಾಯತ್, 3-30ಕ್ಕೆ ಬಾರ್ಯ ಗ್ರಾಮ ಪಂಚಾಯತ್; ನವೆಂಬರ್ 29ಕ್ಕೆ ಬೆಳಿಗ್ಗೆ 10-30ಕ್ಕೆ ಶಿರ್ಲಾಲು ಗ್ರಾಮ ಪಂಚಾಯತ್, 12-30ಕ್ಕೆ ಅಳದಂಗಡಿ ಗ್ರಾಮ ಪಂಚಾಯತ್; ನವೆಂಬರ್, 30ಕ್ಕೆ ಬೆಳಿಗ್ಗೆ 10-30ಕ್ಕೆ ಮುಂಡಾಜೆ ಗ್ರಾಮ ಪಂಚಾಯತ್, 12-30ಕ್ಕೆ ನೆರಿಯ ಗ್ರಾಮ ಪಂಚಾಯತ್, 3-30ಕ್ಕೆ ಕಲ್ಮಂಜ ಗ್ರಾಮ ಪಂಚಾಯತ್; ಡಿಸೆಂಬರ್ 1ರಂದು ಬೆಳಿಗ್ಗೆ 10-30ಕ್ಕೆ ಮಚ್ಚಿನ ಗ್ರಾಮ ಪಂಚಾಯತ್, 12-30ಕ್ಕೆ ಮಾಲಾಡಿ ಗ್ರಾಮ ಪಂಚಾಯತ್, 3-30ಕ್ಕೆ ಕಳಿಯ ಗ್ರಾಮ ಪಂಚಾಯತ್ನ ಆವರಣದಲ್ಲಿ ಮೊದಲ ಹಂತದಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತಿದ್ದು; ಮತ್ತೆ 15ದಿನಗಳ ನಂತರ 2ನೇ ಹಂತದಲ್ಲಿ ಅಕ್ರಮ ಸಕ್ರಮ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು ಎಂದು ಶಾಸಕ ಹರೀಶ್ ಪೂಂಜ ವಿವರಿಸಿದರು. ಈ ಸಂದರ್ಭದಲ್ಲಿ ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಜಯಂತ್ ಕೋಟ್ಯಾನ್ ಉಪಸ್ಥಿತರಿದ್ದರು.






