ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹೆದ್ದಾರಿ ಬದಿಯ ವಿದ್ಯುತ್ ಕಂಬಗಳಲ್ಲಿ ಅಲಂಕಾರಿಕ ವಿದ್ಯುತ್ ಸಣ್ಣ ಎಲ್ಇಡಿ ಬಲ್ಬುಗಳ ಮಾಲೆಗಳನ್ನು ಕಟ್ಟುವ ಮೂಲಕ ಕಾರ್ಮಿಕರು ಅಪಾಯವನ್ನು ಆಹ್ವಾನಿಸಿದ್ದಾರೆ. ಅಂತೆಯೇ ಬೆಳ್ತಂಗಡಿಯ ಶ್ರೀ ಅಯ್ಯಪ್ಪ ದೇವಸ್ಥಾನದ ಎದುರುಗಡೆ ಇರುವ ಹೈಮಾಸ್ಟ್ ಬೀದಿ ದೀಪದ ಕಂಬಕ್ಕೇ ಫ್ಲೆಕ್ಸ್ ಬಿಗಿಯುವ ಮೂಲಕ ಕಾನೂನು ವ್ಯವಸ್ಥೆಗೇ ಸವಾಲು ಹಾಕಿದ್ದಾರೆ. ಇದು ಡಿಸೆಂಬರ್ 21ರ ಬೆಳಗ್ಗೆ ಬೆಳ್ತಂಗಡಿಯಲ್ಲಿ ಕಂಡುಬಂದ ದೃಶ್ಯ. ಇದನ್ನು ಕಂಡ ನನ್ನ ಮನಸ್ಸಲ್ಲಿ ಮೂಡಿದ್ದು ‘ಇನ್ನಷ್ಟು ಬಲಿ ಬೇಕು ಮೆಸ್ಕಾಂಗೆ ರಾಮಾ…’.ಫ್ಲೆಕ್ಸ್ ಹಾಗೂ ವಿದ್ಯುತ್ ಕಂಬಗಳ ವಿಚಾರದಲ್ಲಿ ಮೆಸ್ಕಾಂ ಹಾಗೂ ಬೆಳ್ತಂಗಡಿ ಪಟ್ಟಣ ಪಂಚಾಯತ್ ಸಹಿತ ಸ್ಥಳೀಯ ಆಡಳಿತ ವ್ಯವಸ್ಥೆ ತೋರುತ್ತಿರುವ ನಿರ್ಲಕ್ಷ್ಯ ಹಾಗೂ ಉದಾರೀಕರಣ ನೀತಿಯಿಂದ ತಾಲೂಕಿನಲ್ಲಿ ಈಗಾಗಲೇ ಒಂದೆರಡು ಅಮಾಯಕ ಜೀವಗಳ ಬಲಿಯಾಗಿದೆ. ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಬಸ್ ನಿಲ್ದಾಣದ ಬಳಿ ಕಾರ್ಮಿಕ ಪ್ರಶಾಂತ್ ಆಚಾರ್ಯನ ಜೀವಬಲಿಯಾದ ಘಟನೆ ಭೀತಿ ಇನ್ನೂ ಸಾಮಾನ್ಯ ಜನತೆಯ ಮನದಿಂದ ದೂರವಾಗಿಲ್ಲ. ಆದರೆ ಎಲ್ಲವನ್ನೂ ಮರೆತಂತೆ ನಟಿಸುವ ಬೆಳ್ತಂಗಡಿಯ ಮೆಸ್ಕಾಂ ಮತ್ತು ಪಟ್ಟಣ ಪಂಚಾಯತ್ ಆಡಳಿತ ಮತ್ತೆ ಕಾನೂನುಬಾಹಿರವಾಗಿ ದಾರಿದೀಪಗಳಿಗೆ ಫ್ಲಕ್ಸ್ ಅಳವಡಿಸಲು ಹಾಗೂ ವಿದ್ಯುತ್ ಕಂಬಗಳಲ್ಲಿ ಅಲಂಕಾರಿಕ ಬಲ್ಬ್ಗಳ ವಯರ್ ಕಟ್ಟಲು ಮೌನ ಸಮ್ಮತಿ ನೀಡಿ ಅಮಾಯಕ ಕಾರ್ಮಿಕರ ಬಾಳಲ್ಲಿ ಚೆಲ್ಲಾಟವಾಡುತ್ತಿರುವುದು ಖಂಡನೀಯ.ಸಾಮಾನ್ಯವಾಗಿ ಕೆಲವರಲ್ಲಿ ಒಂದು ಪ್ರಶ್ನೆ ಮೂಡಬಹುದು; ‘ಒಂದು ದಿನದ ಕಾರ್ಯಕ್ರಮಕ್ಕೆ ವಿದ್ಯುತ್ ಕಂಬಗಳಿಗೆ ಫ್ಲೆಕ್ಸ್ ಅಳವಡಿಸಿದರೆ ಇವರಿಗೇನು? ವಿದ್ಯುತ್ ಕಂಬಗಳಿಗೆ ಅಲಂಕಾರಿಕ ಬಲ್ಬ್ಗಳ ವಯರ್ ಕಟ್ಟಿದರೆ ಇವರಿಗೇನು ತೊಂದರೆ? ಯಾರಿಗೂ ಕಾಣದ್ದು ಯಾರಿಗೂ ತೊಂದರೆಯಾಗದ್ದು ಇವರೊಬ್ಬರಿಗೆ ಮಾತ್ರ ಯಾಕೆ ಕಾಣುತ್ತದೆ?’. ಯಾವ ವ್ಯಕ್ತಿಗೆ ಬಡವರ ಜೀವ ಹಾಗೂ ಕಾರ್ಮಿಕರ ಬದುಕಿನ ಬಗ್ಗೆ ಕಿಂಚಿತ್ ಕಾಳಜಿ ಇರುತ್ತದೋ, ಅಂತಹ ವ್ಯಕ್ತಿ ಕಾರ್ಮಿಕರು ಅಪಾಯಕಾರಿಯಾಗಿ ಕೆಲಸ ನಿರ್ವಹಿಸುವುದನ್ನು ವಿರೋಧಿಸಿಯೇ ವಿರೋಧಿಸುತ್ತಾನೆ ಎಂಬ ಸತ್ಯವನ್ನು ಅರ್ಥೈಸಿಕೊಂಡರೆ ಯಾರಲ್ಲೂ ಇಂತಹ ಪ್ರಶ್ನೆ ಮೂಡದು. ಅದಕ್ಕೇ ನಾನು ಮೊದಲಿಗೇ ಕೇಳಿದ್ದು ‘ಇನ್ನೆಷ್ಟು ಬಲಿ ಬೇಕು ಮೆಸ್ಕಾಂಗೆ ರಾಮಾ….’ ಎಂದು.ಕೆಎಸ್ಎಂಸಿಎ ಸಂಸ್ಥೆಯ ಬೆಳ್ತಂಗಡಿ ಧರ್ಮಪ್ರಾಂತ್ಯ ಘಟಕದ ಆಶ್ರಯದಲ್ಲಿ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥಸ್ವಾಮಿ ಕಲಾಭವನದಲ್ಲಿ ಡಿಸೆಂಬರ್ 21ರಂದು ನಡೆಯುವ ಸಾರ್ವಜನಿಕ ಕ್ರಿಸ್ಮಸ್ ಆಚರಣೆಯ ಸಂದರ್ಭ ನಗರ ಅಲಂಕಾರಕ್ಕಾಗಿ ಹಾಕಿದ ವಿದ್ಯುದ್ದೀಪಗಳ ವಯರ್ ವಿದ್ಯುತ್ ಕಂಬಗಳಿಗೆ ಕಟ್ಟಲಾಗಿದೆ, ಅದೂ ಹೆದ್ದಾರಿಯೊಂದಿಗೆ ಮೆಸ್ಕಾಂ ರಸ್ತೆಯ ವಿದ್ಯುತ್ ಕಂಬಗಳಲ್ಲಿ ಕಣ್ಣಿಗೆ ರಾಚುವಂತೆ ಕಾಣುತ್ತಿದೆ. ಹೆದ್ದಾರಿಯಿಂದ ಮೆಸ್ಕಾಂಗೆ ತಿರುಗುವ ರಸ್ತೆಯಲ್ಲೇ ಹೈಮಾಸ್ಟ್ ದಾರಿದೀಪಕ್ಕೆ ಕಾರ್ಯಕ್ರಮದ ಫ್ಲಕ್ಸ್ ಅಳವಡಿಸಿದ್ದಾರೆ. ಇದರೊಂದಿಗೆ ಹೆದ್ದಾರಿಗಳಲ್ಲಿ ಅಲಂಕಾರಿಕ ದೀಪ ಅಳವಡಿಸಲು ಮೆಸ್ಕಾಂ ಅನುಮತಿ ನೀಡಿದಾ…. ಅಗ್ನಿಶಾಮಕ ಇಲಾಖೆ ನಿರಪೇಕ್ಷಣಾ ಪತ್ರ ನೀಡಿದೆಯಾ…. ಪಟ್ಟಣ ಪಂಚಾಯತ್ ಫ್ಲಕ್ಸ್ ಅಳವಡಿಸಲು ಪರವಾನಿಗೆ ನೀಡಿದೆಯಾ… ಎಂಬ ಬಗ್ಗೆಯೂ ತನಿಖೆಯಾಗಬೇಕು. ಆ ಮೂಲಕ ಬಡವರ ಜೀವಕ್ಕೆ ಮತ್ತು ಕಾರ್ಮಿಕರ ಬದುಕಿಗೆ ಬೆಲೆ ಇದೆ ಎಂಬುವುದನ್ನು ಸಾಬೀತುಪಡಿಸಬೇಕಾಗಿದೆ.






