ಆವಿಷ್ಕಾರಗಳಿಂದ ಹೊಸ ವಿಷಯ ಪರಿಚಯವಾಗಬೇಕು;ನ್ಯಾಶನಲ್ ಬಯೋಫ್ಯುಯೆಲ್ ಎನರ್ಜಿ ಸೊಸೈಟಿ ಉದ್ಘಾಟಿಸಿ ಧರ್ಮಪಾಲಶ್ರೀಗಳು.

ಆವಿಷ್ಕಾರಗಳಿಂದ ಹೊಸ ವಿಷಯ ಪರಿಚಯವಾಗಬೇಕು;ನ್ಯಾಶನಲ್ ಬಯೋಫ್ಯುಯೆಲ್ ಎನರ್ಜಿ ಸೊಸೈಟಿ ಉದ್ಘಾಟಿಸಿ ಧರ್ಮಪಾಲಶ್ರೀಗಳು.
Facebook
Twitter
LinkedIn
WhatsApp

ಬೆಳ್ತಂಗಡಿ: ಯೋಜನೆ ಹಾಗೂ ಯೋಚನೆಗಳನ್ನು ಸಹಕಾರಿ ರೂಪದಲ್ಲಿ ಮನೆ ಹಾಗೂ ಮನಗಳಲ್ಲಿ ಯಾವ ಸಂಸ್ಥೆಯು ಮಾಡುತ್ತದೋ ಆದು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಂಗಳೂರು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ಧರ್ಮಪಾಲನಾಥ ಸ್ವಾಮೀಜಿ ಹೇಳಿದರು ಅವರು ಜನವರಿ 12ರಂದು ಲಾಯ್ಲ ಗ್ರಾಮದ ಟಿ.ಬಿ. ಕ್ರಾಸ್‌ನಲ್ಲಿರುವ ಗಣೇಶ್ ಪ್ರಸಾದ್ ಕಾಂಪ್ಲೆಕ್ಸ್‌ನಲ್ಲಿ ನ್ಯಾಶನಲ್ ಬಯೋಫ್ಯುಯೆಲ್ ಎನರ್ಜಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಇದರ ಕಚೇರಿ ಉದ್ಘಾಟಿಸಿ, ಹಳೆಪೇಟೆಯ ಶ್ರೀ ಸೀತಾರಾಮ ಕಲಾಮಂದಿರದಲ್ಲಿ ನಡೆದ ಉದ್ಘಾಟನಾ ಸಭಾರಂಭದಲ್ಲಿ ಆಶೀರ್ವಚನ ನೀಡುತ್ತಿದ್ದರು.ಭಗವಂತನು ಭೂಗರ್ಭದಲ್ಲಿ ಅನೇಕಾನೇಕ ವಿಶೇಷ ವಸ್ತುಗಳನ್ನು ಇಟ್ಟಿದ್ದಾನೆ. ಪ್ರಕೃತಿಯಲ್ಲಿ ಹುದುಗಿರುವ ಒಳಮರ್ಮವನ್ನು ಯಾರಿಂದಲೂ ಅರಿತುಕೊಳ್ಳಲು ಸಾಧ್ಯವಿಲ್ಲ. ಮನುಷ್ಯ ವಸ್ತುಶಃ ಅನ್ವೇಷಕನಾಗಿರುವುದರಿಂದ ಪ್ರತಿಯೊಂದರಲ್ಲೂ ಅನ್ವೇಷಣೆ, ಶೋಧನೆ, ಸಂಶೋಧನೆ ಮಾಡುವಲ್ಲಿ ಕಾರ್ಯತತ್ಪರರಾಗಬೇಕು ಎಂದು ಸ್ವಾಮೀಜಿ ನುಡಿದರು. ಮುಂದಿನ ಯುವ ಜನತೆಗೆ ಹೊಸ ಆವಿಷ್ಕಾರಗಳ ಮೂಲಕ ಹೊಸ ವಿಷಯಗಳು ಹಾಗೂ ಉತ್ಪನ್ನಗಳ ಪರಿಚಯವಾಗಬೇಕು. ಜನಪರ ಕಾಳಜಿ, ಜನಸೇವೆ, ನಂಬಿಕೆ, ವಿಶ್ವಾಸ, ಶುದ್ಧ ಭಾವನೆ, ನಿಶ್ಕಲ್ಮಷ ಸೇವೆಯಿಂದ ಮಾತ್ರ ಸಂಸ್ಥೆಗಳು ಅಭಿವೃದ್ಧಿ ಹೊಂದಲು ಸಾಧ್ಯ. ಇಂತಹ ಸೇವೆ ನೀಡುವುದರಿಂದ ಭಗವಂತನ ಪೂರ್ಣಾಗ್ರಹ ದೊರೆಯುವುದೆಂದು ಡಾ. ಧರ್ಮಪಾಲನಾಥ ಸ್ವಾಮೀಜಿಯವರು ನುಡಿದರು.ಬೆಳ್ತಂಗಡಿ ವಾಣಿ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿ ಅಧ್ಯಕ್ಷ ಹೆಚ್. ಪದ್ಮ ಗೌಡ ಸಾಲದ ಚೆಕ್ ವಿತರಣೆಯನ್ನು ಮಾಡಿ ಮಾತನಾಡುತ್ತಾ, ದಕ್ಷಿಣ ಕನ್ನಡ ಜಿಲ್ಲೆ ಸಹಕಾರಿ ಕ್ಷೇತ್ರದ ತವರು ಮನೆ. ಬೆಳ್ತಂಗಡಿ ತಾಲೂಕಿನಲ್ಲಿ ನೂರಕ್ಕೂ ಅಧಿಕ ಸಹಕಾರಿ ಸಂಘಗಳಿದ್ದು ಪ್ರಾಮಾಣಿಕ ಸೇವೆ ನೀಡುತ್ತಿರುವುದರಿಂದ ಎಲ್ಲವೂ ಲಾಭದಲ್ಲಿ ನಡೆಯುತ್ತಿದೆ. ಜೈವಿಕ ಇಂಧನದ ಸಹಕಾರಿ ಸಂಘವು ತಾಲೂಕಿನಲ್ಲಿ ಪ್ರಾರಂಭವಾಗಿರುವುದು ರೈತರಿಗೆ ಮತ್ತಷ್ಟು ಆಶಾದಾಯಕವಾಗಿದೆ. ಇದರ ಸದುಪಯೋಗವನ್ನು ಈ ಭಾಗದ ರೈತರು ಪಡೆದುಕೊಳ್ಳಲಿ ಎಂದು ಆಶಿಸಿದರು. ಉಳಿತಾಯ ಖಾತೆ ಪುಸ್ತಕ ವಿತರಣೆಯನ್ನು ಮಾಡಿ ಮಾತನಾಡಿದಸಹಕಾರಿ ಸಂಘಗಳ ಉಪ ನಿಬಂಧಕ ರಮೇಶ್ ಹೆಚ್. ಎನ್., ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 845 ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಈ ಸಹಕಾರಿ ಸಂಘವು ವಿಶೇಷವಾದುದು ಎಂದು ಅಭಿಪ್ರಾಯ ಪಟ್ಟರು. ಜೈವಿಕ ಉತ್ಪನ್ನಗಳನ್ನು ಬಳಸಿ, ಸಂಸ್ಕರಿಸುವುದರಿಂದ ಕೃಷಿಕರು ಆರ್ಥಿಕವಾಗಿ ಸದೃಢರಾಗಲು ಸಾಧ್ಯ ಎಂದು ಅವರು ಅಭಿಪ್ರಾಯಿಸಿದರು.ಬಯೋಡೀಸೆಲ್ ಇಂಧನ ಘಟಕ ಪ್ರಾತ್ಯಕ್ಷಿಕೆ ಉದ್ಘಾಟಿಸಿ ಷೇರು ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ಇತ್ತೀಚಿನ ದಿನಗಳಲ್ಲಿ ಕಚ್ಚಾ ತೈಲ ಬೆಲೆ ಗಗನಕ್ಕೇರುತ್ತಿದ್ದು, ಈ ನಿಟ್ಟಿನಲ್ಲಿ ಜೈವಿಕ ಇಂಧನ ಬಗ್ಗೆ ಹೊಸ ಸಂಶೋಧನೆ ಹಾಗೂ ಆವಿಷ್ಕಾರಗಳು ಅಗತ್ಯವಿದೆ. ಈ ದಿಸೆಯಲ್ಲಿ ಈ ಸಂಸ್ಥೆ ಪ್ರಾರಂಭಗೊಂಡಿರುವುದು ಆಶಾದಾಯಕ ಬೆಳವಣಿಗೆ ಎಂದರು.ನ್ಯಾಶನಲ್ ಬಯೋಫ್ಯುಯೆಲ್ ಎನರ್ಜಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ. ಎಂ. ನಾಗೇಶ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವೆಲ್ಲ ಜೈವಿಕ ಇಂಧನ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ಸರಕಾರವೂ ಜೈವಿಕ ಇಂಧನ ಬೆಳೆಯುವ ರೈತರಿಗೆ ಸಬ್ಸಿಡಿ ದರದಲ್ಲಿ ಉಪಕರಣಗಳನ್ನು ಖರೀದಿಸಲು ಸಹಾಯ ಮಾಡಬೇಕು ಎಂದರು. ಇದೇ ಸಂದರ್ಭದಲ್ಲಿ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶರತ್‌ಕೃಷ್ಣ ಪಡ್ವೆಟ್ಣಾಯ ಗಣಕಯಂತ್ರ ಉದ್ಘಾಟನೆಯನ್ನು; ಭದ್ರತಾಕೋಶ-ಕ್ಯಾಶ್ ಕೌಂಟರ್ ಉದ್ಘಾಟನೆಯನ್ನು ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ನೆರವೇರಿಸಿದರೆ; ನಿರಖು ಠೇವಣಿ ಪ್ರಮಾಣ ಪತ್ರ ಹಾಗೂ ಷೇರು ಪ್ರಮಾಣಪತ್ರ ವಿತರಣೆಯನ್ನು ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪಿ.ಕುಶಾಲಪ್ಪ ಗೌಡ ಮಾಡಿದರು. ವೇದಿಕೆಯಲ್ಲಿ ಮಾಜಿ ಸಚಿವ ಕೆ. ಗಂಗಾಧರ ಗೌಡ, ಲಾಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾ ಬೆನಡಿಕ್ಟ ಸಲ್ಡಾನ, ಗಣೇಶ್ ಪ್ರಸಾದ್ ಡ್ರೈವಿಂಗ್ ಸ್ಕೂಲ್‌ನ ಪಾಂಡುರಂಗ ಭಂಡಾರ್ಕರ್, ಸೊಸೈಟಿ ಉಪಾಧ್ಯಕ್ಷ ವಿಶ್ವನಾಥ್ ಕೆ., ನಿರ್ದೇಶಕರುಗಳಾದ ಆನಂದಕೃಷ್ಣ ಎನ್., ಶರತ್ ಪಿ.ಎನ್., ಸುಧಾ ಪಿ., ಹೇಮಾವತಿ, ಮೋಹನ ಗೌಡ, ನಿತ್ಯಾನಂದ ಗೌಡ, ಡಿ. ದಿನೇಶ ಗೌಡ, ಜಗದೀಶ್ ಶೆಟ್ಟಿ ಎಂ., ಲಕ್ಷ್ಮೀಕಾಂತ, ಮುಖ್ಯ ಕಾರ್ಯನಿರ್ವಹಣಾದಿಕಾರಿ ಮಂಜುನಾಥ ಕೆ. ಉಪಸ್ಥಿತರಿದ್ದರು. ಸಮಾರಂಭದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಬೆಳಾಲು ಪ್ರಾಥಮಿಕ ಕೃಷಿ ಪತ್ರಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಕ್ಷ್ಮಯ್ಯ ಗೌಡ ಹಾಗೂ ಸಹಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಜನಾರ್ದನ ಗೌಡ ಅವರನ್ನು ಸ್ವಾಮೀಜಿಯವರು ಹಾಗೂ ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು.. ಶಿವಶಂಕರ್ ಪ್ರಾರ್ಥಿಸಿದರು. ಬೆಳಾಲು ಗ್ರಾಮ ಪಂಚಾಯತ್ ಸದಸ್ಯೆ ವಿದ್ಯಾ ಶೀನಿವಾಸ ಗೌಡ ಸ್ವಾಗತಿಸಿದರು. ನಿರ್ದೇಶಕಿ ಸುಧಾ ಪಿ. ಪ್ರಸ್ತಾವಿಕವಾಗಿ ಮಾತನಾಡಿದರು. ಧನಂಜಯ ಕಾರ್ಯಕ್ರಮ ನಿರೂಪಿಸಿದರು.

Latest 5

Related Posts