ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಚಾರ್ಮಾಡಿ ಘಾಟಿಯ ಒಂದನೇ ತಿರುವಿನ ಬಳಿ ಒಂಟಿ ಸಲಗ ಮೇ 12ರ ರಾತ್ರಿ ಕಂಡುಬಂದಿದೆ.ಮೇ 12ರ ರಾತ್ರಿ ಗಂಟೆ 8ರ ಸುಮಾರಿಗೆ ಒಂಟಿ ಸಲಗ ರಸ್ತೆಯ ತೀರಾ ಬದಿಯಲ್ಲಿ ಇದ್ದು ಕೊಂಚ ಹೊತ್ತು ವಾಹನ ಸವಾರರು ಎರಡು ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿದ್ದರು. ಆನೆ ಕಾಡಿನತ್ತ ತಿರುಗುತ್ತಿದ್ದಂತೆ ವಾಹನಗಳು ಓಡಾಟ ನಡೆಸಿದವು. ಕಳೆದ ಎರಡು ದಿನಗಳ ಹಿಂದೆ ಇದೇ ಘಾಟಿ ಪ್ರದೇಶದಲ್ಲಿ ಹಗಲು ಹೊತ್ತು ಒಂಟಿ ಸಲಗ ಕಂಡುಬಂದಿತ್ತು.ಘಾಟಿ ಪರಿಸರದಲ್ಲಿ ಮೇ 12ರಂದು ಉತ್ತಮ ಮಳೆಯಾಗಿದ್ದು; ಮಂಜು ಕವಿದ ವಾತಾವರಣವು ಇದ್ದುದರಿಂದ ಆನೆ ಇರುವುದು ತೀರ ಸಮೀಪಕ್ಕೆ ಬರುತ್ತಿದ್ದಂತೆ ವಾಹನ ಸವಾರರಿಗೆ ತಿಳಿದುಬಂದಿತ್ತು. ಒಂಟಿ ಸಲಗವನ್ನು ಕಂಡ ಜೀಪೊಂದರ ಚಾಲಕ ಗಲಿಬಿಲಿಗೊಂಡ ಕಾರಣ ಒಂಟಿ ಸಲಗದ ಸಮೀಪವೇ ವಾಹನ ಚರಂಡಿಗೆ ಇಳಿದ ಘಟನೆಯು ನಡೆಯಿತು. ಸುದೈವವಶಾತ್ ಒಂಟಿ ಸಲಗ ವಾಹನ ಸವಾರರಿಗೆ ಯಾವುದೇ ರೀತಿಯ ತೊಂದರೆ ಕೊಟ್ಟಿಲ್ಲ ಎಂದು ತಿಳಿದುಬಂದಿದೆ.






