ಬೆಳ್ತಂಗಡಿ: ಇಂದಿನ ದಿನಗಳಲ್ಲಿ ಅಂತರ್ಜಾಲ ಮೂಲಕ ಸಾಕಷ್ಟು ಮಾಹಿತಿ ಸಿಗುತ್ತದೆ. ಆದರೆ ಸಂವಹನ ಮಾಧ್ಯಮ ಮೂಲಕ ಸಿಗುವ ಮಾಹಿತಿ ಹೆಚ್ಚು ವಿಶ್ವಾಸಾರ್ಹ ಹಾಗೂ ಎಲ್ಲರನ್ನೂ ತಲುಪಲು ಹೆಚ್ಚು ಉಪಯುಕ್ತ ಎಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ಕೃಷ್ಣ ಪಡುವೆಟ್ಣಾಯ ಹೇಳಿದರು.ಅವರು ಮೇ 12ರಂದು ಉಜಿರೆ ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣ ಸಂಘದ ವತಿಯಿಂದ ನಡೆದ ಶೈಕ್ಷಣಿಕ ಮಾಹಿತಿ ಕಾರ್ಯಾಗಾರಕ್ಕೆ ದೀಪ ಪ್ರಜ್ವಲಿಸಿ ಚಾಲನೆ ನೀಡಿ ಮಾತನಾಡುತ್ತಿದ್ದರು.ಬ್ರಾಹ್ಮಣರಿಗೆ ಜ್ಞಾನವೇ ಸಂಪತ್ತು. ಇದರಿಂದ ಅವರು ಸಮಾಜಕ್ಕೆ ಮಾದರಿಯಾಗಿದ್ದಾರೆ. ಅವರ ಜ್ಞಾನ ಸಂಪತ್ತು ತಲೆಮಾರುಗಳಲ್ಲಿ ಮುಂದುವರಿಯಲು ಯುವಜನತೆಗೆ ಮಾರ್ಗದರ್ಶನ ನೀಡುವ ಅಗತ್ಯವಿದೆ ಎಂದು ಅವರು ಹೇಳಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ರಾಮಕುಂಜ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸತೀಶ್ ಭಟ್, ದಂತವೈದ್ಯೆ ಡಾ| ದೀಪಾಲಿ ಡೋಂಗ್ರೆ, ಉಪನ್ಯಾಸಕ ಗಣೇಶ್ ಶೆಂಡ್ಯೆ; ಶೈಕ್ಷಣಿಕ ವಿಚಾರ, ಉನ್ನತ ಶಿಕ್ಷಣ, ಸರಕಾರದ ಸೌಲಭ್ಯ, ಪರೀಕ್ಷೆ ಎದುರಿಸುವ ಕುರಿತು, ವಿವಿಧ ತರಗತಿಗಳಿಗೆ ಇರುವ ಪ್ರವೇಶ ಪರೀಕ್ಷೆ, ಸ್ಕಾಲರ್ ಶಿಪ್,ಪಿಯುಸಿ ಬಳಿಕ ಇರುವ ವಿವಿಧ ಶಿಕ್ಷಣ ಕೋರ್ಸ್ಗಳ ಕುರಿತು ಮಾಹಿತಿ ನೀಡಿದರು.ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣ ಸಂಘದ ಅಧ್ಯಕ್ಷ ತ್ರಿವಿಕ್ರಮ ಹೆಬ್ಬಾರ್ ಸ್ವಾಗತಿಸಿ ಪ್ರಸ್ತಾವಿಸಿದರು. ಕಾರ್ಯದರ್ಶಿ ನಾರಾಯಣ ಫಡಕೆ ವಂದಿಸಿದರು.






