ಸಂಸ್ಕೃತಿ ಉಳಿಯಲು ಕನ್ನಡ ಭಾಷೆ ಬೆಳೆಯಬೇಕು- ಶ್ರದ್ಧಾ ಅಮಿತ್

ಸಂಸ್ಕೃತಿ ಉಳಿಯಲು ಕನ್ನಡ ಭಾಷೆ  ಬೆಳೆಯಬೇಕು- ಶ್ರದ್ಧಾ ಅಮಿತ್
Facebook
Twitter
LinkedIn
WhatsApp

ಬೆಳ್ತಂಗಡಿ: ಪ್ರಾಥಮಿಕ ಶಿಕ್ಷಣ ವಿದ್ಯಾರ್ಥಿಯ ಬದುಕಿನ ಪಂಚಾಂಗ. ವಿದ್ಯಾರ್ಥಿಗಳು ಸಜ್ಜನರಾಗಿ ವ್ಯಕ್ತಿತ್ವ ರೂಪಿಸಿಕೊಂಡು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಶಿಕ್ಷಕರು ವಿದ್ಯಾರ್ಥಿಗಳನ್ನು ರೂಪಿಸುವ ಶಿಲ್ಪಿಗಳಂತೆ ಸುಂದರ ಕೈತೋಟದ ಗಿಡಗಳನ್ನು ಬೆಳೆಸುವವರು; ಪೋಷಕಾಂಶ ನೀಡಿ ಅವರ ಸಾಮರ್ಥ್ಯ ಗುರುತಿಸುವವರು. ಶಿಕ್ಷಕರ ನಿಸ್ವಾರ್ಥ ಸೇವೆಗೆ ಬೆಲೆ ಕಟ್ಟುವಹಾಗಿಲ್ಲ. ಪ್ರತಿ ಮಕ್ಕಳು ಒಂದಲ್ಲ ಒಂದು ಕಲೆಯಲ್ಲಿ ಬೆಳೆಯುತ್ತಾರೆ. ನಮ್ಮ ಸಂಸ್ಕೃತಿ ಉಳಿಯಲು ಕನ್ನಡ ಭಾಷೆ ಹಾಗೂ ಶಾಲೆಗಳನ್ನು ಉಳಿಸಿ ಬೆಳೆಸಬೇಕು. ಮಕ್ಕಳಿಗೆ ಭಾಷೆ, ಸಂಸ್ಕೃತಿ, ನೆಲ ಜಲ, ಪರಿಸರದ ಬಗ್ಗೆ ತಿಳಿಸುವ ಕನ್ನಡ ಶಾಲೆಯ ಅಗತ್ಯವಿದೆ ಎಂದು ಬೆಂಗಳೂರಿನ ಕ್ಷೇಮವನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರದ್ಧಾ ಅಮಿತ್ ಅಭಿಪ್ರಾಯಿಸಿದರು. ಅವರು ಮೇ 23ರಂದು ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಉಜಿರೆಯ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್, ಬೆಂಗಳೂರು ಇಂದಿರಾನಗರದ ರೋಟರಿ ಕ್ಲಬ್, ಬೆಳ್ತಂಗಡಿ ರೋಟರಿಕ್ಲಬ್, ಬೆಂಗಳೂರಿನ ಕ್ಯಾನ್ ಫ಼ಿನ್ ಹೋಮ್ಸ್ , ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ, ಉಜಿರೆ ಎಸ್‌ಡಿಎಂ ಕಾಲೇಜಿನ ಎನ್‌ಎಸ್‌ಎಸ್ ಘಟಕ ಹಾಗೂ ಕ್ರೀಡಾ ಸಂಘದ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಸಂಘಟನೆಗಳ ಸಹಕಾರದಲ್ಲಿ ‘ನಮ್ಮೂರ ಕನ್ನಡ ಶಾಲೆ ನಮ್ಮ ಹೆಮ್ಮೆ’ ಯೋಜನೆಯಡಿ ಉಜಿರೆ ಹಳೆಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಕಾಮಗಾರಿಗಳ ಹಸ್ತಾಂತರ ‘ಯಶೋನಮನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪರಿಸರ ಹಾಗೂ ಶಿಕ್ಷಣಪ್ರೇಮಿ ಡಾ. ಯಶೋವರ್ಮ ಅವರ ನೆನಪಿನಲ್ಲಿ ಶಾಲೆಯ ಅಭಿವೃದ್ಧಿ ಕಾಮಗಾರಿಗಳ ಹಸ್ತಾಂತರವನ್ನು ‘ಯಶೋನಮನ’ ಹೆಸರಿನಲ್ಲಿ ನಡೆಸುತ್ತಿರುವುದು ಅರ್ಥಪೂರ್ಣ. ಅವರ ಕುಟುಂಬ ಅಭಾರಿಯಾಗಿ ಉಜಿರೆಯ ನಾಗರಿಕರ ಅಭಿಮಾನಕ್ಕೆ ಋಣಿಯಾಗಿದೆ ಎಂದರು. ರೋಟರಿ ಜಿಲ್ಲಾ ಗವರ್ನರ್ ಎಚ್‌.ಆರ್. ಕೇಶವ ಮಾತನಾಡಿ; ಜೀವನದಲ್ಲಿ ಸಂಸ್ಕಾರ, ಸಂಸರ್ಗ ಮುಖ್ಯ. ಡಾ. ಯಶೋವರ್ಮ ಅವರು ವಿದ್ಯಾಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಿದವರು. ಒಳ್ಳೆಯ ಕೆಲಸಕ್ಕೆ ಟೀಕೆ ಟಿಪ್ಪಣಿ ಸಹಜ. ಆದರೆ ಬದುಕು ಕಟ್ಟೋಣ ತಂಡದ ಕಾರ್ಯವೈಖರಿ ಇತರರಿಗೆ ಪ್ರೇರೇಪಣೆಯಾಗಿದೆ. ಇಂತಹ ಜನಪರ ಕೆಲಸ ಕಾರ್ಯಗಳು ನಿರಂತರವಾಗಲಿ ಎಂದು ಶುಭ ಹಾರೈಸಿದರು. ಬೆಂಗಳೂರು ಇಂದಿರಾ ನಗರ ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಜಗದೀಶ್ ರಾವ್ ಮುಗುಳಿ ಮಾತನಾಡಿ; ರೋಟರಿ ಕ್ಲಬ್ ನಿಸ್ವಾರ್ಥ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದು, ಕಳೆದ 2ವರ್ಷಗಳಲ್ಲಿ ಬೆಳ್ತಂಗಡಿ ತಾಲೂಕಿಗೆ ರೂಪಾಯಿ 2.75 ಕೋಟಿ ನೆರವು ನೀಡಿದೆ. ಕ್ಯಾನ್ ಫ಼ಿನ್ ಹೋಮ್ಸ್‌ನ ಎಸ್.ಆರ್. ನಿಧಿಯಿಂದ ಈ ವರ್ಷ ರೂಪಾಯಿ 5.80 ಕೋಟಿ ನೆರವು ನೀಡಿದೆ. ರೋಟರಿಯ ಜಂಟಿ ಸಹಯೋಗದೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸೋಣ ಎಂದರು. ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ ಅಧ್ಯಕ್ಷತೆ ವಹಿಸಿ ಮಾತನಾಡಿ; ಯಶೋನಮನ ಕಾರ್ಯಕ್ರಮ ಔಚಿತ್ಯಪೂರ್ಣ. ಅವರು ಮನಸ್ಸಿನಲ್ಲಿರುವುದನ್ನು ಕಾರ್ಯರೂಪಕ್ಕೆ ತರಲು ಸಮರ್ಥರು. ಹಳೆಪೇಟಿ ಶಾಲೆಯ ಅಭಿವೃದ್ಧಿ ಕಾರ್ಯಕ್ಕೆ ಬೆಂಗಳೂರು ಇಂದಿರಾನಗರ ರೋಟರಿ ಕ್ಲಬ್ ಹಾಗು ಕ್ಯಾನ್ ಫ಼ಿನ್ ಹೋಮ್ಸ್ ಕೊಡುಗೆ ದೊಡ್ಡದು. ಅವರ ಸಹಕಾರದಿಂದ ಬೇರೆ ಬೇರೆ ಶಾಲೆಗಳ ಅಭಿವೃದ್ಧಿ ಕೆಲಸ ಮಾಡೋಣ ಎಂದು ಅಭಿಪ್ರಾಯಿಸಿದರು. ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಉಪಸ್ಥಿತರಿದ್ದರು. ಬೆಳ್ತಂಗಡಿ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಪೂರನ್ ವರ್ಮಾ ಲಾಯಿಲ ಶಾಲೆಗೆ ಲೈಬ್ರರಿ ಹಸ್ತಾಂತರಿಸಿ ಕಾಶಿಪಟ್ಟಣ ಮತ್ತು ಪಿಲಿಚಾಮುಂಡಿಕಲ್ಲು ಶಾಲೆಗಳ ಅಭಿವೃದ್ಧಿ ಕಾಮಗಾರಿಗಳ ಬಗೆಗೆ ಮನವಿ ಸ್ವೀಕರಿಸಿದರು. ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಇಂದಿರಾನಗರ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷೆ ಸುಪ್ರಿಯಾ ಕಂದಾರಿ, ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಚಾರ್ಯ ಡಾ. ಬಿ.ಎ. ಕುಮಾರ ಹೆಗ್ಡೆ, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಕಿರಣ್ ಕಾರಂತ್, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ, ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರಾದ ಮೋಹನ್ ಕುಮಾರ್ ಮತ್ತು ರಾಜೇಶ್ ಪೈ, ಸೋನಿಯಾ ವರ್ಮಾ ಉಪಸ್ಥಿತರಿದ್ದರು. ಬಿ.ಕೆ. ಧನಂಜಯ ರಾವ್ ಸ್ವಾಗತಿಸಿ, ತಿಮ್ಮಯ್ಯ ನಾಯ್ಕ್ ವಂದಿಸಿದರು. ಶಾಲಾ ವಿದ್ಯಾರ್ಥಿನಿ ಆಶಿಕಾ ಅನಿಸಿಕೆ ವ್ಯಕ್ತಪಡಿಸಿದರು. ಚಂದ್ರಹಾಸ ಬಳಂಜ ಕಾರ್ಯಕ್ರಮ ನಿರೂಪಿಸಿದರು. ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿ; ತಾಲೂಕಿನ ಸರಕಾರಿ ಕನ್ನಡ ಶಾಲೆಗಳನ್ನು ಸೇವಾ ಯಜ್ಞ ಯೋಜನೆಯನ್ವಯ ಅಕ್ಷರ ದೇಗುಲಕ್ಕೆ ಕಾಯಕಲ್ಪ ನೀಡಲು ಮುಂದಾಗಿ 3ನೇ ಶಾಲೆಯಾಗಿ ಇಲ್ಲಿನ ಹಳೆಪೇಟೆ ಸರಕಾರಿ ಶಾಲೆಯನ್ನು ಇತರ ಸಂಘಟನೆಗಳ ಸಹಕಾರದೊಂದಿಗೆ ಅಭಿವೃದ್ಧಿ ಪಡಿಸಲು ಮುಂದಾಗಿದ್ದೇವೆ. 4 ನೇ ಯೋಜನೆಯಾಗಿ ಲಾಯ್ಲ ಕರ್ನೋಡಿ ಶಾಲೆಯ ಅಭಿವೃದ್ಧಿಗೆ ತೊಡಗಿದ್ದೇವೆ. ತಾಲೂಕಿನ 25 ಶಾಲೆಗಳಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಬೇಡಿಕೆ ಬಂದಿದೆ. ಹಳೆಪೇಟೆ ಶಾಲೆಯನ್ನು ಕಾರ್ಯಕರ್ತರ ಶ್ರಮದಾನದಿಂದ ದಾಖಲೆಯ 60 ದಿನಗಳಲ್ಲಿ ಸುಸಜ್ಜಿತವಾಗಿ ಪೂರ್ಣಗೊಳಿಸಿ ಡಾ. ಯಶೋವರ್ಮ ಅವರ ನೆನಪಿನಲ್ಲಿ ಹಸ್ತಾಂತರಿಸುತ್ತಿದ್ದೇವೆ ಎಂದರು.

Latest News

Related Posts