ಬೆಳ್ತಂಗಡಿ: ಯಾವುದೇ ಪ್ರಚಾರದ ಬಯಕೆ ಇಲ್ಲದೆ ಮಾಡುವ ರಕ್ತದಾನವು ಇತರ ಎಲ್ಲಾ ದಾನಗಳಿಗಿಂತ ಶ್ರೇಷ್ಠವಾಗಿದೆ ಎಂದು ಬೆಳ್ತಂಗಡಿ ರೋಟರಿ ಕ್ಲಬ್ನ ನಿಯೋಜಿತ ಅಧ್ಯಕ್ಷ ಪೂರನ್ವರ್ಮ ಹೇಳಿದರು.ಅವರು ಮೇ 26ರಂದು ಉಜಿರೆಯ ಶಾರದಾ ಮಂಟಪದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಮತ್ತು ಮಂಗಳೂರಿನ ಕೆ.ಎಂ.ಸಿ. ರಕ್ತ ಕೇಂದ್ರದ ಜಂಟಿ ಆಶ್ರಯದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ರಕ್ತದಾನ ಮಾಡಿದವರಿಗೆ ಆರೋಗ್ಯವರ್ಧನೆಯೊಂದಿಗೆ ಮಾನಸಿಕಶಾಂತಿ, ನೆಮ್ಮದಿ ಸಿಗುತ್ತದೆ. ಜೊತೆಗೆ ಧನಾತ್ಮಕ ಚಿಂತನೆಯೊಂದಿಗೆ ಧನ್ಯತಾ ಭಾವವೂ ಮೂಡಿ ಬರುತ್ತದೆ ಎಂದು ಅವರು ಹೇಳಿದರು.ವಿದೇಶಗಳಿಗಿಂತಲೂ ಭಾರತದಲ್ಲಿ ಆರೋಗ್ಯ ಸೇವೆ ಉತ್ತಮವಾಗಿ ನಡೆಯುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೇ; ರಕ್ತದಾನ ಶಿಬಿರದಲ್ಲಿ ಸಹಕರಿಸಿದ ಎಲ್ಲರನ್ನೂ ಅವರು ಅಭಿನಂದಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ಯಾಡಿ ಸೇವಾಭಾರತಿಯ ಸಂಚಾಲಕ ವಿನಾಯಕ ರಾವ್ ಕನ್ಯಾಡಿ; ರಕ್ತದಾನದ ಮಹತ್ವವನ್ನು ವಿವರಿಸಿ, ಕನ್ಯಾಡಿಯಲ್ಲಿ ಸೇವಾ ಭಾರತಿಗೆ ನಾಲ್ಕು ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಿ ಸೇವಾ ಕಾರ್ಯಗಳನ್ನು ವಿಸ್ತರಿಸಲಾಗುವುದು. ಈಗಾಗಲೇ ಅನೇಕ ದಾನಿಗಳು ಹಾಗೂ ಸಂಸ್ಥೆಗಳು ಉದಾರ ನೆರವಿನ ಭರವಸೆ ನೀಡಿದ್ದಾರೆ ಎಂದರು.ಉಜಿರೆ ಶರತ್ಕೃಷ್ಣ ಪಡುವೆಟ್ಣಾಯ ಅಧ್ಯಕ್ಷತೆ ವಹಿಸಿದ್ದರು.ಒಕ್ಕಲಿಗ ಸೇವಾಸಂಘದ ಅಧ್ಯಕ್ಷ ಧರ್ಣಪ್ಪ ಗೌಡ, ಬಂಟರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ವನಿತಾ ಶೆಟ್ಟಿ, ಜಯಶ್ರೀ ಪ್ರಕಾಶ್, ಶ್ಯಾಮ್ ಭಟ್ ಅತ್ತಾಜೆ, ಬೆಳ್ತಂಗಡಿ ಸಿ.ಎ. ಬ್ಯಾಂಕ್ ಅಧ್ಯಕ್ಷ ಅಜಿತ್ಕುಮಾರ್ ಆರಿಗ ಮತ್ತು ಜನಾರ್ದನ್ ಕಾನರ್ಪ ಉಪಸ್ಥಿತರಿದ್ದರು.ಕನ್ಯಾಡಿ ಸೇವಾಭಾರತಿ ಅಧ್ಯಕ್ಷೆ ಸ್ವರ್ಣಗೌರಿ ಸ್ವಾಗತಿಸಿದರು. ಮಾಧವ ಗೌಡ ವಂದಿಸಿದರು. ಡಾ. ಶ್ರೀಧರ ಭಟ್ ಕಾರ್ಯಕ್ರಮ ನಿರೂಪಿಸಿದರು.ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ರಕ್ತದಾನ ಶಿಬಿರದ ಸಂಘಟನೆ.ಯಲ್ಲಿ ಸಕ್ರಿಯ ಸಹಕಾರ ನೀಡಿದರು.






