ಬೆಳ್ತಂಗಡಿ: ಪಂಚಾಯತ್ರಾಜ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ, ಮೇ 31ರಂದು ವಯೋ ನಿವೃತ್ತರಾದ ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂಜೀವ ನಾಯ್ಕರ ಬೀಳ್ಕೊಡುಗೆ ಸಮಾರಂಭವು ಮೇ 31ರ ಅಪರಾಹ್ನ ಬೆಳ್ತಂಗಡಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವೈಜಣ್ಣರ ಅಧ್ಯಕ್ಷತೆಯಲ್ಲಿ ಜರಗಿತು. ತಾಲೂಕಿನ ವಿವಿಧ ಗ್ರಾಮ ಪಂಚಾಯತ್ಗಳ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಸಿಬ್ಬಂದಿವರ್ಗದವರು ಹಾಗೂ ತಾಲೂಕು ಪಂಚಾಯತ್ನ ಸಿಬ್ಬಂದಿಗಳು ಈ ಸರಳ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಪರವಾಗಿ ತಾಲೂಕು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಂಘದ ಅಧ್ಯಕ್ಷ ನಾರಾವಿ ಗ್ರಾಮ ಪಂಚಾಯತ್ನ ಸುಧಾಕರ್ ಮಾತನಾಡಿ ಸಂಜೀವ ನಾಯ್ಕರ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು. ಬೆಳ್ತಂಗಡಿ ತಾಲೂಕು ಪಂಚಾಯತ್ ಕಛೇರಿಯ ವ್ಯವಸ್ಥಾಪಕ ಪ್ರಶಾಂತ್ ಹಾಗೂ ಉಜಿರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಮಾತನಾಡಿ ಸಂಜೀವ ನಾಯ್ಕರೊಂದಿಗಿನ ವೃತ್ತಿ ಜೀವನದ ಒಡನಾಟವನ್ನು ಮೆಲುಕು ಹಾಕಿದರಲ್ಲದೇ; ನಿವೃತ್ತ ಜೀವನಕ್ಕೆ ಶುಭಕಾಮನೆಗಳನ್ನು ಸಲ್ಲಿಸಿದರು. ಮಹಿಳಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಪರವಾಗಿ ನಿವೃತ್ತ ಸಂಜೀವ ನಾಯ್ಕರಿಗೆ ನೆರಿಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಮಾ ಶುಭ ಹಾರೈಸಿದರು. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಹಾಯಕ ನಿರ್ದೇಶಕಿ ಸಫಾನ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವೈಜಣ್ಣ ಮಾತನಾಡಿ; ಸಂಜೀವ ನಾಯ್ಕರ ನಿವೃತ್ತ ಜೀವನ ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸಿದರು. ತಾಲೂಕು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ, ಕಾರ್ಯದರ್ಶಿಗಳ ಮತ್ತು ಸಿಬ್ಬಂದಿಗಳ ಪರವಾಗಿ ವಯೋ ನಿವೃತ್ತರಾದ ಸಂಜೀವ ನಾಯ್ಕರನ್ನು ಗೌರವಪೂರ್ವಕವಾಗಿ ಸಮ್ಮಾನಿಸಿ ಹೃದಯಸ್ಪರ್ಶಿಯಾಗಿ ಬೀಳ್ಕೊಡಲಾಯಿತು. ತನ್ನ ಸೇವಾವಧಿಯನ್ನು ಮಾತುಗಳಲ್ಲಿ ಮೆಲುಕು ಹಾಕಿದ ಸಂಜೀವ ನಾಯ್ಕ; ತನ್ನ ಸುದೀರ್ಘ ಸೇವಾವಧಿಯಲ್ಲಿ ಸಹಕಾರ ನೀಡಿದ ಸರ್ವರನ್ನೂ ಕೃತಜ್ಞತೆಯಿಂದ ಸ್ಮರಿಸಿದರಲ್ಲದೇ, ನಿವೃತ್ತಿಯ ದಿನ ನೀಡಿದ ಹೃದಯಸ್ಪರ್ಶಿ ಬೀಳ್ಕೊಡುಗೆಗೆ ಕೃತಜ್ಞತೆ ಸಲ್ಲಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಹಾಗೂ ತಾಲೂಕು ಪಂಚಾಯತ್ ಸಿಬ್ಬಂದಿ ಪ್ರಿಯಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಚಾರ್ಮಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಸ್ವಾಗತಿಸಿದರು. ಪಡಂಗಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ತಾರಾನಾಥ ವಂದಿಸಿದರು.






