ಹೆದ್ದಾರಿಯೋ….ಸಂತೆ ಅಡ್ಡೆಯೋ….

ಹೆದ್ದಾರಿಯೋ….ಸಂತೆ ಅಡ್ಡೆಯೋ….
Facebook
Twitter
LinkedIn
WhatsApp

ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಂತೆ ಮಾರುಕಟ್ಟೆಯ ಒಳಗೆ ನಡೆಯುತ್ತಿದ್ದ ಸಂತೆ ಮಾರುಕಟ್ಟೆ ಇಂದು ಬೆಳೆದು ರಾಷ್ಟ್ರೀಯ ಹೆದ್ದಾರಿಯನ್ನೂ ವ್ಯಾಪಿಸಿದೆ. ಪರಿಣಾಮ ವಾಹನ ಸವಾರರು ಮತ್ತು ಪಾದಾಚಾರಿಗಳು ವಾರದ ಸಂತೆಯ ದಿನವಾದ ಸೋಮವಾರ ಪರದಾಡುವಂತಾಗಿದೆ. ಸಂತೆಯ ಪರಿಣಾಮವಾಗಿಯೇ ನಾಲ್ಕಾರು ಸರಣಿ ಅಪಘಾತ ನಡೆದು ಒಂದಂಷ್ಟು ಮಂದಿ ಗಾಯಗೊಂಡರೂ ಪಟ್ಟಣ ಪಂಚಾಯತ್ ಆಡಳಿತವಾಗಲೀ, ತಾಲೂಕು ಆಡಳಿತವಾಗಲೀ ದೀರ್ಘ ನಿದ್ರೆಯಿಂದ ಎಚ್ಚೆತ್ತಂತೆ ಕಾಣುತ್ತಿಲ್ಲ.ಹೌದು, ಇಲ್ಲಿ ಪ್ರತೀ ಸೋಮವಾರ ವಾಹನ ಮಿಸುಕಾಡಲು ತಾಸುಗಟ್ಟಲೆ ಒದ್ದಾಡುವುದು ಸಾಮಾನ್ಯವಾಗಿದೆ. ತುರ್ತು ಚಿಕಿತ್ಸೆಗೆ ರೋಗಿಗಳನ್ನು ಕೊಂಡೊಯ್ಯುವ ಆ್ಯಂಬುಲೆನ್ಸ್‌ಗಳೂ ವಾಹನ ದಟ್ಟಣೆಗೆ ಸಿಲುಕಿ ಪರದಾಡಿದ ಉದಾಹರಣೆಗಳೂ ಇವೆ. ಪಾದಾಚಾರಿಗಳ ಪಾಡಂತೂ ಹೇಳತೀರದು. ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾದ್ದು ಸರಕಾರದ ಜವಾಬ್ದಾರಿ.ಈ ಹಿಂದೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ಪ್ರಯತ್ನದಿಂದ ಇಲ್ಲಿನ ವಾರದ ಸಂತೆಯನ್ನು ಹಳೆಕೋಟೆಯಲ್ಲಿರುವ ಎಪಿಎಂಸಿ ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ಇದೊಂದು ಉತ್ತಮ ವ್ಯವಸ್ಥೆಯಾಗಿತ್ತು. ಸಂತೆ ಗುತ್ತಿಗೆ ಪಡೆದವರ, ವ್ಯಾಪಾರಿಗಳ ಹಾಗೂ ಪರಿಸರದ ಅಂಗಡಿ‌ ಮಾಲೀಕರ ಒತ್ತಡ/ಆಮಿಷಕ್ಕೆ ಬಲಿಯಾದ ಬೆಳ್ತಂಗಡಿ ಪಟ್ಟಣ ಪಂಚಾಯತ್ ಆಡಳಿತ ಹಳೆಕೋಟೆಯ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರವಾದ ವಾರದ ಸಂತೆಯನ್ನು ಮತ್ತೆ ಹಳೆಯ ಸಂತೆ ಯಾರ್ಡ್‌ಗೆ ಸ್ಥಳಾಂತರಿಸಿದ್ದೇ ಎಲ್ಲ ಸಮಸ್ಯೆಗಳಿಗೆ ಮೂಲ.ಈಗ ಬೆಳ್ತಂಗಡಿ ಪಟ್ಟಣ ಪಂಚಾಯತ್‌ಗೆ ಆಡಳಿತ ಮಂಡಳಿ ತಾತ್ಕಾಲಿಕವಾಗಿ ಅಮಾನತಿನಲ್ಲಿದೆ. ಬೆಳ್ತಂಗಡಿ ತಹಶಿಲ್ದಾರ್ ಇಲ್ಲಿನ ಆಡಳಿತಾಧಿಕಾರಿ. ಕೆಲಸ ಮಾಡಲು ಆಸಕ್ತಿ ಇರುವ ಎ.ಎಚ್. ಮುಜಾವರ್ ಮುಖ್ಯಾಧಿಕಾರಿಗಳಾಗಿದ್ದಾರೆ. ಇವರಿಬ್ಬರು ಸೂಕ್ತ ನಿರ್ಧಾರ ತೆಗೆದುಕೊಂಡು ಅದನ್ನು ಅನುಷ್ಠಾನಿಸಿದರೆ ಬೆಳ್ತಂಗಡಿಯ ಜನತೆ ಒಂದು ದೊಡ್ಡ ಸಂಕಷ್ಟದಿಂದ ಪಾರಾದಂತೆಯೇ ಸರಿ.ಸಧ್ಯಕ್ಕೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುವ ತನಕ ತಾತ್ಕಾಲಿವಾಗಿ ರಸ್ತೆ ಬದಿಯಲ್ಲಿ ಸಂತೆ ವ್ಯಾಪಾರ ಮಾಡುವ ಎಲ್ಲ ವ್ಯಾಪಾರಸ್ಥರನ್ನು ಬೆಳ್ತಂಗಡಿ ಮಾರಿಗುಡಿ ಸಮೀಪ ಇರುವ ಶಾಲಾ ಮೈದಾನಕ್ಕೆ ಸ್ಥಳಾಂತರಿಸಿದರೆ, ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಾಣಲು ಸಾಧ್ಯ. ಈ ಬಗ್ಗೆ ಶಾಲೆಗೆ ಸರಿಯಾದ ಸ್ಥಳ ಬಾಡಿಗೆ ನಿಗದಿ‌ ಮಾಡಿದರೆ ಶಾಲೆಗೂ ಒಂದಷ್ಟು ಆದಾಯ ಬರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಸಧ್ಯ ಆಗುತ್ತಿರುವ ವಾಹನ ದಟ್ಟಣೆಯಿಂದ ಹಾಗೂ ಪಾದಾಚಾರಿಗಳು ಪಡುತ್ತಿರುವ ಬವಣೆಯಿಂದ ಪಾರಾಗಲು ಸಾಧ್ಯ. ಅಧಿಕಾರಿಗಳಿಗೆ ಇಚ್ಛಾಶಕ್ತಿ ಇರಬೇಕು ಅಷ್ಟೇ.

Latest 5

Related Posts