ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ಮಾರಿಗುಡಿ ಎದುರುಗಡೆ ಅನಧಿಕೃತವಾಗಿ ತಲೆ ಎತ್ತಿದ ವ್ಯಾಪಾರಿ ಡೇರೆಯನ್ನು ತೆರವುಗೊಳಿಸಿದ ಬೆಳ್ತಂಗಡಿ ಪಟ್ಟಣ ಪಂಚಾಯತ್ ಆಡಳಿತ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಸಂತೆ ಮಾರ್ಕೆಟ್‌ನ ಪ್ರವೇಶದ್ವಾರದಲ್ಲಿ ತಲೆ ಎತ್ತಿರುವ ಅನಧಿಕೃತ ವ್ಯಾಪಾರಿ ಡೇರೆಯನ್ನು ತೆರವುಗೊಳಿಸದೇ; ‘ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ’ ಧೋರಣೆಯನ್ನು ಅನುಸರಿಸುತ್ತಿರುವುದು ನಾಗರಿಕ ವಲಯದಲ್ಲಿ ಚರ್ಚೆಗೆ ಆಹಾರವಾಗಿದೆ.
ಪ್ರತೀದಿನ ವಾಹನ ದಟ್ಟಣೆಯಿಂದ ಎಲ್ಲರೂ ಪರದಾಡುತ್ತಿರುವ ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಸಾಗುವ ಪಾದಾಚಾರಿಗಳ ಪಾಡು ವೈರಿಗೂ ಬೇಡ. ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆಯೊಂದಿಗೆ ಅನಧಿಕೃತವಾಗಿ ತಲೆಎತ್ತಿರುವ ವ್ಯಾಪಾರಿ ಡೇರೆಗಳು ಪಾದಾಚಾರಿಗಳನ್ನು ಹೈರಾಣಾಗಿಸುತ್ತಿದೆ. ಇದರೊಂದಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚರಿಸಲು ಅಸಾಧ್ಯವಾದ ಪರಿಸ್ಥಿತಿ ಎದುರಾದಾಗ ರಸ್ತೆ ಬದಿಯ ಪಾದಾಚಾರಿಗಳಿಗೇ ಮೀಸಲಾದ ದಾರಿಯಲ್ಲೂ ನುಗ್ಗುವ ವಾಹನಗಳು…. ಒಟ್ಟಿನಲ್ಲಿ ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾದಾಚಾರಿಗಳ ಗೋಳು ಹೇಳತೀರದು. ‘ಉಳ್ಳವರು ವಾಹನದಲ್ಲಿ ಸಂಚರಿಸುವರು; ಪಾದಾಚಾರಿ ನಾನೇನು ಮಾಡಲಿ ಬಡವನಯ್ಯಾ…’ ಎಂದು ಸಮಸ್ಯೆಯ ಸುಳಿಯಲ್ಲಿ ಸಿಲುಕಿರುವ ಪಾದಾಚಾರಿಗಳು ಬೆಳ್ತಂಗಡಿ ಪಟ್ಟಣ ಪಂಚಾಯತ್ ಆಡಳಿತ ಹಾಗೂ ಸಿಬ್ಬಂದಿವರ್ಗದವರಲ್ಲಿ ಮೊರೆ ಇಡುತ್ತಿದ್ದಾರೆ. ರಸ್ತೆ ಬದಿಯ ಎಲ್ಲ ಅನಧಿಕೃತ ವ್ಯಾಪಾರಿ ಡೇರೆಗಳನ್ನು ತೆರವುಗೊಳಿಸುವ ಜೊತೆಗೆ; ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸುವ ವಾಹನ ಚಾಲಕ ಮಾಲೀಕರಲ್ಲೂ ಶಿಸ್ತು ಮೂಡಿಸಲು ಸರಿಯಾದ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂಬುವುದು ನಾಗರಿಕರ ಆಗ್ರಹ.






